ಜನಾದೇಶದ ದುರ್ಬಳಕೆಗೆ ಕಾಂಗ್ರೆಸ್ಸಿಗರಿಗೆ ಅವಕಾಶ ಕೊಡುವುದಿಲ್ಲ: ಆರ್.ಅಶೋಕ್ ಎಚ್ಚರಿಕೆ

ಬೆಂಗಳೂರು: ಕಾಂಗ್ರೆಸ್ ಪಕ್ಷವು ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಂತಿದೆ ಎಂದು ರಾಜ್ಯದ ಮಾಜಿ ಸಚಿವ ಆರ್.ಅಶೋಕ್ ಅವರು ಆರೋಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪುವಿನ ಮತಾಂತರದ ಸಿದ್ಧಾಂತಕ್ಕೆ ಪೂರಕವಾಗಿ ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರ ಹೊರಟಿದೆ. ಕಾಂಗ್ರೆಸ್ ಪಕ್ಷವು ಪಿಎಫ್‍ಐ, ಕೆಎಫ್‍ಡಿ ಪರವಾಗಿದೆಯೇ? ಎಂದು ಪ್ರಶ್ನಿಸಿದರು. ಈ ರೀತಿ ಜನಾದೇಶದ ದುರ್ಬಳಕೆಗೆ ಬಿಜೆಪಿ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ನೀವು ಯಾರ ಪರ ಇದ್ದೀರಿ? ಎಂದು ಪ್ರಶ್ನಿಸಿದ ಅವರು, 30ರಿಂದ 40 ಲಕ್ಷಕ್ಕೂ ಹಿಂದೂಗಳು ದುಡ್ಡಿನ ಆಮಿಷ, ಲವ್ ಜಿಹಾದ್, ಆಸ್ಪತ್ರೆಯಲ್ಲಿ ಬಿಲ್ ಕಟ್ಟಲು ಆಗದೆ ಮತಾಂತರ ಆದ ಮಾಹಿತಿ ಇದೆ ಎಂದು ವಿವರಿಸಿದರು.

 

ಕಾಂಗ್ರೆಸ್ ಯಾರಿಗಾಗಿ ಈ ಕಾಯ್ದೆ ತರುತ್ತಿದೆ? ಎಂದ ಅವರು, ಬಲವಂತದ ಮತಾಂತರ ಸಲ್ಲದು ಎಂಬ ಭಾವನೆ ಹಾಗೂ ನಿಲುವನ್ನು ಮಹಾತ್ಮ ಗಾಂಧೀಜಿ ಮತ್ತು ಡಾ. ಅಂಬೇಡ್ಕರ್ ಅವರು ಹೊಂದಿದ್ದರು ಎಂದು ವಿವರಿಸಿದರು. ಮತಾಂತರ ಆಗುವುದಾದರೆ ಕಾನೂನು ಪ್ರಕಾರ ಆಗಬೇಕೆಂಬ ನಮ್ಮ ಕಾಯ್ದೆಯಲ್ಲಿ ತಪ್ಪೇನಿದೆ? ಎಂದು ಕೇಳಿದರು.

ಟಿಪ್ಪು ಕೊಡಗಿನಲ್ಲಿ 50ರಿಂದ 60 ಸಾವಿರ ಜನರನ್ನು ಮತಾಂತರ ಮಾಡಿದ್ದ. ಆತನನ್ನು ವೈಭವೀಕರಿಸಿ ಅವನ ಜಯಂತಿ ಮಾಡಿದರು. ಗಲಭೆಗೆ ಕಾರಣರಾದರು ಎಂದು ಟೀಕಿಸಿದ ಅವರು, ಈ ಕಾಯ್ದೆ ವಾಪಸ್ ಪಡೆಯಬಾರದು ಎಂದು ಬಿಜೆಪಿ ಆಗ್ರಹಿಸುತ್ತದೆ ಎಂದರು. ಮತಬ್ಯಾಂಕಿಗಾಗಿ, ಒಂದು ಸಮುದಾಯದವರನ್ನು ಓಲೈಸಲು ಈ ಕಾಯ್ದೆ ಹಿಂದಕ್ಕೆ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಓಟಿಗೋಸ್ಕರ ಯಾವ ಹಂತಕ್ಕಾದರೂ ಹೋಗುತ್ತದೆ ಎಂದು ವ್ಯಂಗ್ಯವಾಡಿದರು.

ಹಿಂದೆ ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಎಪಿಎಂಸಿ ಆರಂಭವಾಗಿತ್ತು. ಅದೊಂದು ರೀತಿಯ ಗುತ್ತಿಗೆ ಕೊಡುವ ಪ್ರಯತ್ನ. ದಲ್ಲಾಳಿಗಳು ಗೇಟಿನಲ್ಲೇ ನಿಂತು ಖರೀದಿಸಿ ಲಾಭ ಮಾಡುವ ವ್ಯವಸ್ಥೆ ಅದು. ನಾವು ಮಾಡಿದ ತಿದ್ದುಪಡಿಯಡಿ ದೇಶದ ಎಲ್ಲಿ ಬೇಕಾದರೂ ಮಾರಾಟ ಮಾಡುವ ಅವಕಾಶ ಇದೆ. ರೈತರಿಗೆ ಸಾವಿರಾರು ಕೋಟಿ ಆದಾಯ ಸಿಗಬೇಕೇ? ಅಥವಾ ಎಪಿಎಂಸಿಗೆ ಲಾಭ ಆಗಬೇಕೇ? ದಲ್ಲಾಳಿಗಳ ಲಾಭ ಹೆಚ್ಚಬೇಕೇ? ಎಂದು ಕೇಳಿದರು.

ದಲ್ಲಾಳಿಗಳಿಗೆ ಉಪಯೋಗ ಮಾಡುವ ಹುನ್ನಾರ ಇದರಡಿ ಇದೆ. ತೂಕದಲ್ಲೇ ವ್ಯತ್ಯಾಸ ಮಾಡುತ್ತಿದ್ದರು. ಆದರೆ, ನಾವು ತಕ್ಕಡಿಯನ್ನು ರೈತರ ಕೈಗೆ ಕೊಟ್ಟಿದ್ದೆವು. ಕಾಂಗ್ರೆಸ್, ದಲ್ಲಾಳಿಗಳ ರಾಜ್ಯ ಮಾಡಲು ಹೊರಟಿದೆ ಎಂದು ಆಕ್ಷೇಪಿಸಿದರು.

ಪಠ್ಯಪುಸ್ತಕ ಬದಲಾವಣೆ ಬಗ್ಗೆ ತರಾತುರಿ ಸಲ್ಲದು. ಏಕಾಏಕಿ ಮಕ್ಕಳಿಗೆ ತೊಂದರೆ ಕೊಡುವ ಉದ್ದೇಶ ಹೊಂದಿ ನಿಮ್ಮ ಸಿದ್ಧಾಂತ ಹೇರುವ ಪ್ರಯತ್ನ ಮಾಡಿದ್ದೀರಿ. ಇದರಿಂದ ಕೆಟ್ಟ ಸಂದೇಶ ಕೊಟ್ಟಿದ್ದೀರಿ ಎಂದು ತಿಳಿಸಿದರು.

ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳು ಬೇರೆ ರಾಜ್ಯಕ್ಕೆ ಹೋಗುವ ಮಾತು ಕೇಳುತ್ತಿದೆ. 10 ರೂ. ಕೊಟ್ಟು 20 ರೂ. ಕಿತ್ತುಕೊಳ್ಳುವ ಗ್ಯಾರಂಟಿ ವ್ಯವಸ್ಥೆಯನ್ನು ಕಾಂಗ್ರೆಸ್ ಸರಕಾರ ಜಾರಿ ಮಾಡುತ್ತಿದೆ ಎಂದ ಅವರು, “ಏಯ್ ಮಹದೇವಪ್ಪ ನಿನಗೂ ಫ್ರೀ, ನನಗೂ ಫ್ರೀ; ಕಾಕಾ ಪಾಟೀಲ್ ನಿನಗೂ ಫ್ರೀ ಎಂದಿದ್ದರು. ಕಂಡಿಷನ್ ಅಪ್ಲೈ ಎಂದಿದ್ದೀರಾ? ಈಗ ಹೊಸ ಮನೆಗೆ ಒಂದು, ಸರಾಸರಿ ಎಂಬ ಕಂಡಿಷನ್ ಹಾಕುತ್ತೀರಿ. ಠೇವಣಿ ಶೇ 65ರಷ್ಟು ಹೆಚ್ಚಳ ಮಾಡಿದ್ದಾರೆ. ತಾತ್ಕಾಲಿಕ ಸಂಪರ್ಕಕ್ಕೆ ಶೇ 70ರಷ್ಟು ಠೇವಣಿ ಸಂಗ್ರಹ ಮಾಡಲಾಗುತ್ತಿದೆ ಎಂದು ಟೀಕಿಸಿದರು.

 

ವಿದ್ಯುತ್ ದರ ಹೆಚ್ಚಳ ಒಂದು ಕಳ್ಳಾಟ. 70 ಪೈಸೆ ಹೆಚ್ಚಿಸಿದ್ದಾರೆ. ಬೇಕಾದುದೆಲ್ಲ ಕಾಂಗ್ರೆಸ್ ಪಕ್ಷದ್ದು. ಬೇಡದ್ದೆಲ್ಲವೂ ಬಿಜೆಪಿಯದು ಎಂದು ತಿಳಿಸಿದರು. ಕೇಂದ್ರವು ಅಕ್ಕಿ ವಿಚಾರದಲ್ಲಿ ಸಮಸ್ಯೆ ತಂದೊಡ್ಡಿದೆ ಎಂದರೆ, ಕೇಳಿದೊಡನೆ ಕೊಡಲು ಕೇಂದ್ರ ಎಂದರೆ ಅತ್ತೆ ಮನೆಯೇ? ಘೋಷಿಸುವ ಮೊದಲೇ ನಿಮಗೆ ಜ್ಞಾನ, ಪ್ರಜ್ಞೆ ಇರಲಿಲ್ಲವೇ? ನಾಳೆ ಕರ್ನಾಟಕವನ್ನು ಮಾರಾಟ ಮಾಡುತ್ತೇವೆ ಎಂದರೆ ಕೇಂದ್ರ ಎಸ್ ಎನ್ನಬೇಕೇ? ಎಂದು ಪ್ರಶ್ನೆಗಳನ್ನು ಮುಂದಿಟ್ಟರು.

ಊಟಕ್ಕೆ ಕೂತರೆ ನಂದೂ ನಂದೇ; ನಿನ್ನದೂ ನಂದೇ ಎಂಬಂತಾಗಿದೆ. ಗ್ಯಾರಂಟಿಗಳ ಅನುಷ್ಠಾನಕ್ಕೆ 1 ಲಕ್ಷದ 10 ಸಾವಿರ ಕೋಟಿ ಹಣ ಬೇಕು. ರಾಜ್ಯ ಇನ್ನೊಂದು ವರ್ಷದಲ್ಲಿ ದಿವಾಳಿ ಆಗಲಿದೆ. ಕಾನೂನನ್ನು ಎಲ್ಲರೂ ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ಅಂಗನವಾಡಿ, ಸಣ್ಣ ಕೈಗಾರಿಕೆ, ಸ್ತ್ರೀಶಕ್ತಿ ಸಂಘಗಳ ಗಲಾಟೆ ಮುಂದುವರೆಯುವಂತಾಗಿದೆ. ಇದು ಕಾಂಗ್ರೆಸ್ ಪಕ್ಷದ ಅಜಾಗರೂಕತೆಯ ಸೃಷ್ಟಿ ಎಂದು ಟೀಕಿಸಿದರು.

ವಿದ್ಯುತ್ ದರದ ವಿಚಾರದಲ್ಲಿ ಮೋಸಗಾರರು ಯಾರು? ಎಂದು ಕೇಳಿದ ಅವರು, ಕಳೆದ ಬಾರಿ ಮತ್ತು ಈ ಬಾರಿಯ ಬಿಲ್ಲನ್ನು ಸೋಷಿಯಲ್ ಮೀಡಿಯಕ್ಕೆ ಹಾಕಿ ಎಂದು ಮನವಿ ಮಾಡಿದರು. ಕೊಟ್ಟಂಗೆ ತೋರಿಸಿ ಎಲ್ಲ ಕಿತ್ಕೊಳೋದು ಎಂಬ ದುಸ್ಥಿತಿ ಕಾಂಗ್ರೆಸ್‍ನವರದು ಎಂದು ಆಕ್ಷೇಪಿಸಿದರು.

ಆಟೋ, ಟ್ಯಾಕ್ಸಿಯವರೂ ಬೀದಿಗೆ ಇಳಿಯುವಂತಾಗಿದೆ. ಮಾನ ಮರ್ಯಾದೆ ಇದ್ರೆ ಯೋಚನೆ ಮಾಡಿ ಇದನ್ನು ಜಾರಿಗೊಳಿಸಬೇಕಿತ್ತು ಎಂದು ತಿಳಿಸಿದರು. ಕೇವಲ ಮತಕ್ಕಾಗಿ ಏನೇನು ಮಾಡಬಹದು ಎಂಬುದನ್ನು ಕಾಂಗ್ರೆಸ್ ಮಾಡಿ ತೋರಿದೆ ಎಂದು ನುಡಿದರು.

ಕಾಂಗ್ರೆಸ್ ಪಕ್ಷದ ತನ್ವೀರ್ ಸೇಠ್, ಶ್ಯಾಮನೂರು ಶಿವಶಂಕರಪ್ಪ ಅವರೇ ಕಾಂಗ್ರೆಸ್ ಸರಕಾರದ ನೀತಿಯನ್ನು ಪ್ರಶ್ನೆ ಮಾಡುವಂತಾಗಿದೆ. ಜನರ ಗಮನ ಬೇರೆಡೆ ಸೆಳೆಯಲು ಈ ಕ್ಯಾಬಿನೆಟ್ ನಿರ್ಧಾರ ಮಾಡಿದ್ದಾರೆ. ಇವುಗಳ ವಿರುದ್ಧ ವಿಧಾನಸಭೆ ಹೊರಗೆ ಮತ್ತು ಒಳಗಡೆ ಪ್ರತಿಭಟಿಸುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್, ಟಿಪ್ಪು ಆಡಳಿತವನ್ನು ಜಾರಿಗೊಳಿಸಲು ಹೊರಟಿದೆ. ಕಾಂಗ್ರೆಸ್ ದುರಾಡಳಿತ, ಅರಾಜಕತೆ, ಗ್ಯಾರಂಟಿ ವಿಚಾರದಲ್ಲಿ ಕಂಡಿಷನ್, ವಿವಿಧ ಕಾಯ್ದೆಗಳ ಹಿಂತೆಗೆತದ ನಿರ್ಧಾರವನ್ನು ಖಂಡಿಸಿ ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ 19ರಂದು ಆಂದೋಲನದ ಕುರಿತು ಸಭೆ ನಡೆಸಲಿದೆ ಎಂದು ಆರ್.ಅಶೋಕ್ ಅವರು ಪ್ರಕಟಿಸಿದರು. ಬಳಿಕ ಜನಾಂದೋಲನ ರೂಪಿಸಲಿದ್ದೇವೆ ಎಂದರು.

ಶಾಸಕ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, ಹೊರರಾಜ್ಯಗಳಿಂದ ಅಕ್ಕಿ ಖರೀದಿಸಲು ರಾಜ್ಯ ಸರಕಾರ ಮುಂದಾದುದು ಹಾಸ್ಯಾಸ್ಪದ; ಜೊತೆಜೊತೆಗೆ ಕಮಿಷನ್ ಪಡೆಯುವ ಹುನ್ನಾರ ಇದೆ ಎಂಬುದು ಸ್ಪಷ್ಟ ಎಂದು ತಿಳಿಸಿದರು. ನಮ್ಮ ರಾಜ್ಯದಲ್ಲಿ ಅಕ್ಕಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಇಲ್ಲಿಂದಲೇ ಖರೀದಿ ಮಾಡಿದರೆ ರೈತರಿಗೆ ಅನುಕೂಲವಲ್ಲವೇ? ಛತ್ತೀಸಗಡ, ತೆಲಂಗಾಣದಿಂದ ತರುವುದರ ಹಿಂದೆ ಕಮಿಷನ್ ಗಿಟ್ಟಿಸುವ ಹುನ್ನಾರ ಇದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷವು ತಾವು ಕೊಟ್ಟ ಭರವಸೆ, ಗ್ಯಾರಂಟಿ ಅನುಷ್ಠಾನ ಅಸಾಧ್ಯವಾದ ಸಂದರ್ಭದಲ್ಲಿ ಮತಾಂತರ ನಿಷೇಧ ಕಾಯ್ದೆ ಹಿಂತೆಗೆತ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂದಕ್ಕೆ ಪಡೆಯುವುದು ಹಾಗೂ ಪಠ್ಯಪುಸ್ತಕ ಪರಿಷ್ಕರಣೆಯಂಥ ನಿರ್ಧಾರಗಳನ್ನು ಮಾಡುತ್ತಿದೆ. ಈ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಮುಂದಾಗಿದೆ. ಅಲ್ಲದೆ, ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸಲು ಹೊರಟಿದೆ ಎಂದು ಟೀಕಿಸಿದರು.

ಮತಾಂತರ ನಿಷೇಧ ಕಾಯ್ದೆ ಹಿಂತೆಗೆತ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂದಕ್ಕೆ ಪಡೆಯಲು ಜನತೆ ನಿಮಗೆ ಮತ ಕೊಟ್ಟರೇ? ಎಂದ ಅವರು, ಕುಣಿಯಲು ಬರದವರು ನೆಲ ಡೊಂಕು ಎಂಬಂತಾಗಿದೆ ಕಾಂಗ್ರೆಸ್ ಪರಿಸ್ಥಿತಿ ಎಂದು ಆಕ್ಷೇಪಿಸಿದರು.

ಸಂಪೂರ್ಣ ಬಹುಮತ ಇದೆ; ನಾವು ಹೇಗಾದರೂ ಆಡಳಿತ ಮಾಡುತ್ತೇವೆ ಎಂಬ ಧೋರಣೆಯನ್ನು ಬಿಜೆಪಿ ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಯಡಿಯೂರಪ್ಪನವರು ತಾವೊಬ್ಬರೇ ಜನಪ್ರತಿನಿಧಿ ಇದ್ದಾಗಲೂ ವಿಧಾನಸಭೆ ಒಳಗೆ ಮತ್ತು ಹೊರಗಡೆ ರಾಜ್ಯಾದ್ಯಂತ ಹೋರಾಟಗಳನ್ನು ಸಂಘಟಿಸಿದ್ದರು. ‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂದು ರಾಜ್ಯದ ಜನರು ಮಾತನಾಡುತ್ತಿದ್ದರು ಎಂದು ಗಮನ ಸೆಳೆದರು.

ಬಿಜೆಪಿ 66 ಶಾಸಕರೊಂದಿಗೆ ಬಲಿಷ್ಠ ವಿರೋಧ ಪಕ್ಷವಾಗಿದೆ. ನಿಮ್ಮ ಧೋರಣೆಯನ್ನು ಸಹಿಸಲಸಾಧ್ಯ. ನೀವು ಕೊಟ್ಟ ಭರವಸೆ ಈಡೇರಿಸಲೇಬೇಕು. ಇಲ್ಲವಾದರೆ ಜನರ ಕ್ಷಮೆ ಕೇಳಿ ಎಂದು ಆಗ್ರಹಿಸಿದರು. ನಿಮ್ಮ ವಿದ್ಯುತ್ ದರ ಏರಿಸುವ ಕ್ರಮದಿಂದ ಇರುವ ಕೈಗಾರಿಕೆಗಳು ಬೇರೆ ರಾಜ್ಯಕ್ಕೆ ಓಡಿ ಹೋಗುವ ಸಂದರ್ಭ ಸೃಷ್ಟಿ ಮಾಡುತ್ತಿದ್ದೀರಲ್ಲವೇ? ಎಂದು ಕೇಳಿದರು. ಭರವಸೆಗಳನ್ನು ಕಂಡಿಷನ್‍ಗಳಿಲ್ಲದೆ ಜಾರಿಗೊಳಿಸಿ ಎಂದು ಒತ್ತಾಯಿಸಿದರು.

 

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಅವರು ಈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top