ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ವಿಚಾರ; ನಾನು ಯು ಟರ್ನ್ ಹೊಡೆಯುವ ಗಿರಾಕಿ ಅಲ್ಲ ಎಂದ ನಿಖಿಲ್ ಕುಮಾರಸ್ವಾಮಿ

ವದಂತಿ, ಸುದ್ದಿಗಳ ಬಗ್ಗೆ ಬೇಸರ; ಪಕ್ಷ ಸಂಘಟಿಸುತಿದ್ದೇನೆ ಎಂದು ಸ್ಪಷ್ಟನೆ

ಎಲ್ಲಾ ಪ್ರಶ್ನೆ, ವಿರೋಧಕ್ಕೆ ಕಾಲವೇ ಉತ್ತರ ಕೊಡುತ್ತದೆ; ಅಮಿತ್ ಶಾ ಭೇಟಿ ವಿರೋಧ ಸರಿಯಲ್ಲ

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ವದಂತಿ, ಸುದ್ದಿಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು; ನಾನು ಯು ಟರ್ನ್ ಹೊಡೆಯುವ ಗಿರಾಕಿ ಅಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್ ಡಿಜಿಟಲ್ ಯೋಧ ರ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಮಾಧ್ಯಮಗಳ ಜತೆ ಮಾತನಾಡಿದರು.

 

ನಾನು ಮಂಡ್ಯ ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ. ನಾನು ಇದನ್ನು ಹಿಂದೆಯೂ ಹೇಳಿದ್ದೆ. ಅತ್ಯಂತ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದೇನೆ. ನಾನು ಯು ಟರ್ನ್ ಹೊಡೆಯುವ ಗಿರಾಕಿ ಅಲ್ಲ. 2019ರಲ್ಲಿ ನಾನು ಕ್ಷೇತ್ರದ ಅಭ್ಯರ್ಥಿ ಆಗಿದ್ದೆ, ಸೋತಿದ್ದೆ. ಈಗಲೂ ನನ್ನ ಸ್ಪರ್ಧೆಗೆ ಸಹಜವಾಗಿ ಮಂಡ್ಯ ಮುಖಂಡರ ಒತ್ತಾಯ ಇದೆ, ಕಾರ್ಯಕರ್ತರ ಪ್ರೀತಿ ಇದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.

ಕಳೆದ ನಾಲ್ಕು ದಿನಗಳಿಂದಲೂ ನಾನು ಈ ಬಗ್ಗೆ ಬರುತ್ತಿರುವ ಸುದ್ದಿ, ವದಂತಿಗಳನ್ನು ಗಮನಿಸುತ್ತಿದ್ದೇನೆ. ಆದರೆ, ನಾನು ಯು ಟರ್ನ್ ಹೊಡೆಯುವ ಪೈಕಿ ಅಲ್ಲ ಎಂದು ನೇರವಾಗಿ ಹೇಳಲು ಬಯಸುತ್ತೇನೆ. ನನ್ನ ನಿರ್ಧಾರದಲ್ಲಿ ನನಗೆ ಸ್ಪಷ್ಟತೆ ಇದೆ ಎಂದರು ಅವರು.

ನೀವು ಬರಬೇಕು, ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಂಡ್ಯ ಮುಖಂಡರು, ಕಾರ್ಯಕರ್ತರು ಕರೆಯುತ್ತಿದ್ದಾರೆ. ಅವರ ಪ್ರೀತಿ, ವಿಶ್ವಾಸ ಹಾಗೂ ಒತ್ತಡದ ಕಾರಣವಾಗಿ ನಾನು ಮಂಡ್ಯ ಭಾಗದಲ್ಲಿ ಪಕ್ಷ ಸಂಘಟನೆಗಾಗಿ  ಓಡಾಡಿದ್ದೆ. ಜೆಡಿಎಸ್ – ಬಿಜೆಪಿ ಮೈತ್ರಿಯನ್ನು  ಬಲಪಡಿಸಬೇಕು, ಮತ್ತೆ ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕು. ಹೀಗಾಗಿ ನನ್ನ ಗಮನ ರಾಜ್ಯದ 28 ಲೋಸಭೆ ಕ್ಷೇತ್ರಗಳ ಕಡೆಯೂ ಇರುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.

ಮಂಡ್ಯ, ಹಾಸನದಲ್ಲಿ ಜೆಡಿಎಸ್ ಬಗ್ಗೆ ಮಾಜಿ ಶಾಸಕ ಪ್ರೀತಂಗೌಡ ಅವರ ವಿರೋಧವಿದೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರ ಕೊಟ್ಟ ನಿಖಿಲ್ ಕುಮಾರಸ್ವಾಮಿ ಅವರು; ಕೇಂದ್ರದ ನಾಯಕರು, ನಮ್ಮ ಪಕ್ಷದ ವರಿಷ್ಠರು ಅತೀ ಶೀಘ್ರದಲ್ಲೇ ಇಂತಹ ಎಲ್ಲ ಪ್ರಶ್ನೆಗಳಿಗೂ ತೆರೆ ಎಳೆಯುತ್ತಾರೆ. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಬೇಕು, ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದರು.

 

ಪ್ರೀತಂಗೌಡರ ಹೇಳಿಕೆ ಸಂತೋಷಕರ. ಆದರೆ ಇದನ್ನು ಕೇಂದ್ರದ ನಾಯಕರು, ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ. ಎಲ್ಲಕ್ಕೂ ಕಾಲ ಉತ್ತರಿಸುತ್ತದೆ ಎಂದ ಅವರು; ಏನೇ ಪ್ರಶ್ನೆ ಕೇಳಿದರೂ ಕಾಲವೇ ಉತ್ತರಿಸುತ್ತದೆ ಎಂದು ಮಾರ್ಮಿಕವಾಗಿ ಉತ್ತರ ಕೊಟ್ಟರು.

ಮಂಡ್ಯ ಜೆಡಿಎಸ್ ನಲ್ಲಿ ಗಂಡಸರು ಯಾರೂ ಇಲ್ವಾ? ಎಂಬ ಮದ್ದೂರು ಶಾಸಕ ಕದಲೂರು ಉದಯ್ ಹೇಳಿಕೆ ಬಗ್ಗೆ ಬಗ್ಗೆ ಕೇಳಲಾದ ಪ್ರಶ್ನೆಗೂ; ಇರಲಿ, ಅದಕ್ಕೂ ಕಾಲವೇ ಉತ್ತರಿಸುತ್ತದೆ ಎಂದರು ನಿಖಿಲ್ ಕುಮಾರಸ್ವಾಮಿ ಅವರು.

ತೆರಿಗೆ ಹಂಚಿಕೆ ಬಗ್ಗೆ ಕಾಂಗ್ರೆಸ್ ಪಕ್ಷವು ಉತ್ತರ ಕೊಡಿ ಎಂದು ಅಮಿತ್ ಶಾ ಅವರನ್ನು ಒತ್ತಾಯ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಣಕಾಸು ಆಯೋಗಗಳು ಸ್ವಾಯತ್ತ ಸಂಸ್ಥೆಗಳು. ಸ್ವತಂತ್ರ್ಯವಾಗಿ ಕೆಲಸ ಮಾಡುತ್ತೇವೆ. ರಾಜ್ಯಗಳಿಗೆ ತೆರಿಗೆ, ಅನುದಾನ ಹಂಚಿಕೆ ಬಗ್ಗೆ ಹಣಕಾಸು ಆಯೋಗದ ಶಿಫಾರಸು ಅನ್ವಯ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ. ಆದರೆ ಇದನ್ನೇ ರಾಜಕೀಯವಾಗಿ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ನಾಯಕರು ಬಳಸಿಕೊಳ್ತಿದ್ದಾರೆ. ಜನರ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಜನರು ಈಗ ಬಹಳ ಪ್ರಜ್ಞಾವಂತರು, ಬುದ್ಧಿವಂತರಾಗಿದ್ದಾರೆ ಎಂದರು.

ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿರುವುದಕ್ಕೆ ವಿರೋಧ ಸರಿಯಲ್ಲ. ಕೇಂದ್ರದ ಸಚಿವರು ಮೈಸೂರಿಗೆ ಬಂದಿದ್ದಾರೆ. ಅವರಿಗೆ ಹೃತ್ಪೂರ್ವಕ ಸ್ವಾಗತ. ಕುಮಾರಸ್ವಾಮಿ ಅವರಿಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಇದೆ, ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ ಕುಮಾರಸ್ವಾಮಿ aಅವರು ಅಮಿತ್ ಶಾ ಅವರನ್ನು ಭೇಟಿ ಮಾಡುತ್ತಿಲ್ಲ. ಈ ವಿಚಾರವನ್ನು ಅಮಿತ್ ಶಾ ಅವರಿಗೆ ದೂರವಾಣಿ ಕರೆ ಮಾಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ ಎಂದು ನಿಖಿಲ್ ಅವರು ಮಾಹಿತಿ ನೀಡಿದರು.

 ಜೆಡಿಎಸ್ ಡಿಜಿಟಲ್ ಯೋಧರ ಸಭೆ:

ಬಳಿಕ ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಅರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿರುವ ಉತ್ಸಾಹಿ ಯುವಜನರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಈ ಯುವಜನರನ್ನು ಜೆಡಿಎಸ್ ಡಿಜಿಟಲ್ ಯೋಧರು ಎಂದು ಕರೆದ ನಿಖಿಲ್ ಅವರು; ನಾನು ಕೂಡ ಯುವಕ. ನಮ್ಮ ಪಕ್ಷದಲ್ಲಿ ಇಷ್ಟೋಂದು ಯುವಜನರು ಜಾಲತಾಣಗಳಲ್ಲಿ ನನಗೆ ಬಹಳ ಸಂತೋಷ ಉಂಟು ಮಾಡಿದೆ. ಪಕ್ಷಕ್ಕೆ ಅಧಿಕಾರ ಇರಲಿ, ಇಲ್ಲದಿರಲಿ ಪ್ರತಿ ಸಂದರ್ಭದಲ್ಲಿಯೂ ಯೋಧರಂತೆ ಪಕ್ಷಕ್ಕಾಗಿ ದುಡಿಯುತ್ತಿರುವ ನಿಮಗೆ ಆಭಾರಿ ಆಗಿದ್ದೇನೆ ಎಂದರು ಅವರು.

ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ ಅವರು ಮಾತನಾಡಿ, ಜೆಡಿಎಸ್ ಡಿಜಿಟಲ್ ಯೋಧರಿಗೆ ಕೆಲ ಮಹತ್ವಪೂರ್ಣ ಟಿಪ್ಸ್ ಗಳನ್ನು ನೀಡಿದರು.

 

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಪಕ್ಷದ ವಕ್ತಾರರಾದ ಗಂಗಾಧರ ಮೂರ್ತಿ, ಹೆಚ್.ಎನ್.ದೇವರಾಜ್, ಎಸ್.ಜಿ.ವೀರಣ್ಣ ಸೇರಿದಂತೆ ಅನೇಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top