ಬೆಂಗಳೂರು:ವಿಧಾನಸಭೆಯಿಂದ ವಿಧಾನಪರಿಷತ್ತಿನ ಹನ್ನೊಂದು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ವರಿಷ್ಟರ ಜತೆ ಚರ್ಚಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ದಿಲ್ಲಿಗೆ ದೌಡಾಯಿಸಲಿದ್ದಾರೆ.
ಪಕ್ಷ ಗೆಲ್ಲಲು ಸಾಧ್ಯವಿರುವ ಏಳು ಮಂದಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಕಾಂಗ್ರೆಸ್ ಈಗಾಗಲೇ ಚಾಲನೆ ನೀಡಿದ್ದು,ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಹೈಕಮಾಂಡ್ ಮಟ್ಟದಲ್ಲಿ ಅಂತಿಮ ಪಟ್ಟಿಯನ್ನು ಸಿದ್ಧಗೊಳಿಸಲು ಮುಂದಾಗಿದೆ.
ಮೂಲಗಳ ಪ್ರಕಾರ,ಮಂಗಳವಾರ ದಿಲ್ಲಿಗೆ ದೌಡಾಯಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಜತೆ ಚರ್ಚಿಸಲಿದ್ದಾರೆ.
ಈ ಚರ್ಚೆಯ ನಂತರ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಏಳು ಮಂದಿ ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಲಿದ್ದು ಮೇ 30 ರ ಗುರುವಾರ ಅಧಿಕೃತವಾಗಿ ಪ್ರಕಟವಾಗಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಇವೇ ಮೂಲಗಳ ಪ್ರಕಾರ,ಪಕ್ಷ ಗೆಲ್ಲಲು ಸಾಧ್ಯವಿರುವ ಏಳು ಸ್ಥಾನಗಳನ್ನು ಜಾತಿ,ಪ್ರದೇಶಾವಾರು,ಸಾಮಾಜಿಕ ನ್ಯಾಯದಡಿ ಹಂಚಿಕೆ ಮಾಡುವುದು ಕಷ್ಟಕರವಾಗಿದ್ದು,ಈ ಧರ್ಮಸಂಕಟದಿಂದ ಪಾರಾಗಲು ರಾಜ್ಯದ ನಾಯಕರು ಹೈಕಮಾಂಡ್ ಮೊರೆ ಹೊಕ್ಕಿದ್ದಾರೆ.
ಸದ್ಯದ ಮಾಹಿತಿಗಳ ಪ್ರಕಾರ,ಮುಖ್ಯಮಂತ್ರಿಗಳ ಪುತ್ರ ಯತೀಂದ್ರ,ಸಚಿವ ಎನ್.ಎಸ್.ಭೋಸರಾಜು,ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು,ಕೆಪಿಸಿಸಿ ಪದಾಧಿಕಾರಿ ವಿನಯ್ ಕಾರ್ತಿಕ್ ಅವರು ಟಿಕೆಟ್ ಪಡೆಯುವುದು ಬಹುತೇಕ ಖಚಿತವಾಗಿದೆ.
ಈ ಮಧ್ಯೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ವಸಂತಕುಮಾರ್,ಇಸ್ಮಾಯಿಲ್ ತಮಟಗಾರ್,ಹೆಚ್.ಎಂ.ರೇವಣ್ಣ,ಕೆ.ಪಿ.ನಂಜುಂಡಿ ಸೇರಿದಂತೆ ಹಲವು ಮಂದಿ ಟಿಕೆಟ್ ಗಾಗಿ ಲಾಬಿ ನಡೆಸುತ್ತಿದ್ದು,ಇದರ ಪರಿಣಾಮವಾಗಿ ರಾಜ್ಯದ ನಾಯಕರ ಮೇಲೆ ಒತ್ತಡ ಶುರುವಾಗಿದೆ.
ಹೀಗೆ ಶುರುವಾದ ಒತ್ತಡದ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದ ನಾಯಕರು ದಿಲ್ಲಿ ಮಟ್ಟದಲ್ಲೇ ಪಟ್ಟಿಯನ್ನು ಅಂತಿಮಗೊಳಿಸಲು ತೀರ್ಮಾನಿಸಿದ್ದು,ಇದೇ ಕಾರಣಕ್ಕಾಗಿ ವರಿಷ್ಟರ ಜತೆ ಚರ್ಚಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಮೇ 28 ರ ಮಂಗಳವಾರ ದಿಲ್ಲಿಗೆ ದೌಡಾಯಿಸಲಿದ್ದಾರೆ.