ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿನಗಣನೆ: ಬೆಟ್ಟಿಂಗ್ ಧಂದೆ

ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ನಡೆಯುತ್ತಿದ್ದಂತೆಯೇ ಬಿಜೆಪಿ ನೇತೃತ್ವದ ಎನ್.ಡಿ.ಎ ಕೇಂದ್ರದ ಅಧಿಕಾರ ಗದ್ದುಗೆ ಹಿಡಿಯಲಿದೆ ಎಂದು ಬೆಟ್ಟಿಂಗ್ ಧಂದೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ,ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮುನ್ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದು ಬಿಜೆಪಿ ಮೈತ್ರಿಕೂಟ ನಲವತ್ತು ಸ್ಥಾನಗಳನ್ನು ಪಡೆಯಲಿದೆ ಎಂಬ ಮಾತು ಸಟ್ಟಾ ಬಜಾರ್ ನಲ್ಲಿ ಕೇಂದ್ರೀಕೃತಗೊಂಡಿದ್ದು,ಇದರ ಪರವಾಗಿ,ವಿರುದ್ಧವಾಗಿ ಬೆಟ್ಟಿಂಗ್ ನಡೆಯುತ್ತಿದೆ.

ಇದೇ ಮೂಲಗಳ ಪ್ರಕಾರ,ಬಿಜೆಪಿ ನೇತೃತ್ವದ ಎನ್.ಡಿ.ಎ ಕೇಂದ್ರದ ಅಧಿಕಾರ ಸೂತ್ರ ಹಿಡಿಯುತ್ತದೆ ಎಂಬ ಮಾತನ್ನು ಮುಂದಿಟ್ಟುಕೊಂಡು ಸಾವಿರಾರು ಕೋಟಿ ರೂಪಾಯಿಗಳ ಬೆಟ್ಟಿಂಗ್ ನಡೆಯುತ್ತಿದ್ದು,ಚೆನ್ನೈ,ಮುಂಬಯಿ,ಕಲ್ಕತ್ತಾ ಮತ್ತು ದಿಲ್ಲಿಯನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಸಟ್ಟಾ ಬಜಾರ್ ಚುರುಕುಗೊಂಡಿದೆ.

ಬೆಟ್ಟಿಂಗ್ ಗೆ ಆಹ್ವಾನ ನೀಡುತ್ತಿರುವವರ ಪ್ರಕಾರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 309 ಸ್ಥಾನಗಳಲ್ಲಿ ಗೆಲುವು ಗಳಿಸಲಿದ್ದು,ಮೈತ್ರಿಕೂಟ 40 ಸ್ಥಾನಗಳಲ್ಲಿ ಗೆಲುವು ಗಳಿಸಲಿದೆ.

 ಮೂಲಗಳ ಪ್ರಕಾರ ಸಟ್ಟಾ ಬಜಾರ್ ನಲ್ಲಿ ಚಲಾವಣೆಯಾಗುತ್ತಿರುವ ಈ ಮಾತಿನ ಪರವಾಗಿ,ವಿರುದ್ಧವಾಗಿ ಬೆಟ್ಟಿಂಗ್ ನಡೆಯುತ್ತಿದ್ದು ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುವಂತೆ ದೊಡ್ಡ ಪ್ರಮಾಣದ ಹಣವನ್ನು ಹೂಡಿಕೆ ಮಾಡಲಾಗಿದೆ.

ದೇಶದ ವಿವಿಧ ರಾಜ್ಯಗಳ ಪರಿಸ್ಥಿತಿಯನ್ನು ಆಧರಿಸಿ ಸಟ್ಟಾ ಬಜಾರ್ ನಲ್ಲಿ ಬೆಟ್ಟಿಂಗ್ ಮಂತ್ರ ಶುರುವಾಗಿದ್ದು,ಕರ್ನಾಟಕದಲ್ಲಿ ಬಿಜೆಪಿ ಮೈತ್ರಿಕೂಟ 18 ರಿಂದ 20 ಕ್ಷೇತ್ರಗಳಲ್ಲಿ ಗೆಲುವು ಗಳಿಸುವುದು ನಿಶ್ಚಿತ ಎಂದಿದೆ.

ಕರ್ನಾಟಕದಲ್ಲಿ ಮೋದಿ ಅಲೆ ಪ್ರಬಲವಾಗಿದ್ದು ಅದೇ ಕಾಲಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಬಲಿಷ್ಟವಾಗಿದೆ.ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಬಿಜೆಪಿ 18 ರಿಂದ 20 ಸ್ಥಾನಗಳಲ್ಲಿ ಗೆಲುವು ಗಳಿಸುವುದನ್ನು ತಡೆಯಲು ಸಾಧ್ಯವೇ ಇಲ್ಲ ಎಂಬುದು ಸಟ್ಟಾ ಬಜಾರ್ ನ ಮಾತು.

ಅಂದ ಹಾಗೆ ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಹದಿನೈದಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ಆಡಳಿತ ಕಾಂಗ್ರೆಸ್ ಪಕ್ಷ ಪ್ರತಿಪಾದಿಸುತ್ತಿದ್ದು,ಅದೇ ಕಾಲಕ್ಕೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ನಾಯಕರು ಇಪ್ಪತ್ತಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ತಾವು ಗೆಲುವು ಗಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಬಿಜೆಪಿ ಮೈತ್ರಿಕೂಟ ಮತ್ತು ಕಾಂಗ್ರೆಸ್ ನ ಆತ್ಮವಿಶ್ವಾಸಗಳ ನಡುವೆ ಚುರುಕುಗೊಂಡಿರುವ ಸಟ್ಟಾ ಬಜಾರ್,ಕರ್ನಾಟಕದ ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ 18 ರಿಂದ 20 ಸ್ಥಾನಗಳಲ್ಲಿ ಗೆಲುವು ಗಳಿಸಲಿದ್ದು,ಈ ಅಂಶವನ್ನೇ ಮುಂದಿಟ್ಟುಕೊಂಡು ಬೆಟ್ಟಿಂಗ್ ಕಟ್ಟಿಸಿಕೊಳ್ಳಲಾಗುತ್ತಿದೆ.

 

ಈಗಾಗಲೇ ದೇಶದ ಪ್ರಮುಖ ನಗರಗಳನ್ನು ಕೇಂದ್ರವಾಗಿಟ್ಟುಕೊಂಡು ನಡೆಯುತ್ತಿರುವ ಬೆಟ್ಟಿಂಗ್ ಧಂದೆ ದಿನ ಕಳೆದಂತೆ ಮತ್ತಷ್ಟು ಚುರುಕಾಗಲಿದ್ದು ಚುನಾವಣೆಯ ಇತಿಹಾಸದಲ್ಲಿ ಸಟ್ಟಾ ಬಜಾರ್ ನಲ್ಲಿ ಹಿಂದೆಂದೂ ಕಾಣದಷ್ಟು ಹಣದ ಚಲಾವಣೆಯಾಗುತ್ತಿದೆ ಎಂದು ಮೂಲಗಳು ಹೇಳಿವೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top