ಕೆನಡಾ ಸಂಸತ್ ನಲ್ಲಿ ಚಂದ್ರ ಆರ್ಯ ಕನ್ನಡ ಭಾಷಣ

ಬೆಂಗಳೂರು: ಕೆನಡಾದ ಒಟ್ಟಾವ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಕನ್ನಡಿಗ ಚಂದ್ರ ಆರ್ಯ ಅವರು ಸಂಸತ್ತಿನಲ್ಲಿ ಕನ್ನಡದ ಕಹಳೆ ಮೊಳಗಿಸಿದ್ದು, ಇದು ನಾಡಿಗೆ ಹೆಮ್ಮೆಯ ಕ್ಷಣ ಎಂದು ಯುವ ಕಾಂಗ್ರೆಸ್ ಮುಖಂಡ ಎಂ.ಎಸ್. ರಕ್ಷಾ ರಾಮಯ್ಯ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಹೇಳಿಕೆ ನೀಡಿರುವ ರಕ್ಷಾ ರಾಮಯ್ಯ, ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮ ಕೆನಡಾ ಸಂಸತ್ತಿನ ಸಂಸದೀಯ ದಾಖಲೆಗಳಲ್ಲಿ ಸೇರಿದ ಈ ದಿನ ಸುದಿನವಾಗಿದ್ದು, ರಾಷ್ಟ್ರಕವಿ ಕುವೆಂಪು, ವರನಟ ಡಾ. ರಾಜ್ ಕುಮಾರ್ ಅವರ ಹೆಸರು ಪ್ರಸ್ತಾಪವಾಗಿರುವುದು ನಿಜಕ್ಕೂ ಅವಿಸ್ಮರಣೀಯವಾಗಿದೆ.

ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆ. ಒಂದು ಕಾಲದಲ್ಲಿ ಕನ್ನಡ ನಾಡು ಕಾವೇರಿಯಿಂದ ಗೋದಾವರಿವರೆಗೆ ಹರಡಿತ್ತು. ಇದೀಗ ಚಂದ್ರ ಆರ್ಯ ಅವರು ದ್ವಾರಾಳು ಗ್ರಾಮದಿಂದ ಕೆನಡಾದವರೆಗೆ ಕನ್ನಡದ ಕಂಪು ಹರಡುವಂತೆ ಮಾಡಿದ್ದಾರೆ. ಸಂಸತ್ತಿನಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್. ಪಟೇಲ್ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿದ್ದನ್ನು ನಾವು ಈ ಕ್ಷಣದಲ್ಲಿ ಸ್ಮರಿಸಿಕೊಳ್ಳಬೇಕು ಎಂದಿದ್ದಾರೆ.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕರ್ನಾಟಕ ಬಹುದೊಡ್ಡ ಕೊಡುಗೆ ನೀಡಿದೆ. ಕ್ರಾಂತಿಯೋಗಿ ಬಸವಣ್ಣ ಅವರ ಕಾಲದಲ್ಲಿ ಚಿಂತಕರ ಚಾವಡಿ ಮೂಲಕ ಸಂಸದೀಯ ಪ್ರಜಾತಂತ್ರ ವ್ಯವಸ್ಥೆ ಆರಂಭಗೊಂಡಿತು. ಇದೀಗ ಇದೇ ಬಸವಣ್ಣನ ನಾಡಿನ ಚಂದ್ರ ಆರ್ಯ ಕೆನಡಾ ಸಂಸತ್ ಪ್ರವೇಶಿಸಿ ಕನ್ನಡಿಗರನ್ನು ಬಹು ಎತ್ತರದ ಸ್ಥಾನದಲ್ಲಿ ನಿಲ್ಲಿಸಿರುವುದು ನಮಗೆಲ್ಲಾ ಹೆಮ್ಮೆಯ ಕ್ಷಣವಾಗಿದೆ. ಇದು ಸಂಸದೀಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ ಎಂದು ರಕ್ಷಾ ರಾಮಯ್ಯ ಹೇಳಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top