ಬೆಂಗಳೂರು: ಹಿಂದಿನ ಸರ್ಕಾರದ ಅವಧಿಯಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಅದೇ ಕಾಲಕ್ಕೆ ಪಠ್ಯಪುಸ್ತಕ ಪರಿಷ್ಕರಣೆಗೂ ಬ್ರೇಕ್ ಹಾಕಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದ್ದು, ಅದೇ ಕಾಲಕ್ಕೆ ರೈತರಿಗೆ ಭಾರೀ ಹಾನಿ ಮಾಡಿದ್ದ ಹಿಂದಿನ ಸರ್ಕಾರದ ಎಪಿಎಂಸಿ ತಿದ್ದುಪಡಿ ಕಾಯ್ದೆನ್ನೂ ರದ್ದುಗೊಳಿಸಲು ಸರ್ಕಾರ ತೀರ್ಮಾನಿಸಿದೆ.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್, ಪ್ರಾಥಮಿಕ ಶಿಕ್ಷಣ ಸಚಿವ ಮಧುಬಂಗಾರಪ್ಪ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಈ ವಿಷಯ ತಿಳಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮತಾಂತರವನ್ನು ನಿಷೇಧ ಗೊಳಿಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದರು. ಈ ತಿದ್ದುಪಡಿಯನ್ನು ರದ್ದುಪಡಿಸಲು ಇಂದು ನಡೆದ ಸಚಿವ ಸಂಫುಟ ಸಭೆ ತೀರ್ಮಾನಿಸಿದೆ ಎಂದು ವಿವರಿಸಿದರು.
ಇದೇ ರೀತಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು,ಈಗ ನಾವು ಸಾವರ್ಕರ್, ಹೆಡಗೇವಾರ್ ಮತ್ತು ಚಕ್ರವರ್ತಿ ಸೂಲಿಬೆಲೆಯವರ ಪಠ್ಯಗಳನ್ನು ತೆಗೆದುಹಾಕಲು ನಿರ್ಧರಿಸಿದ್ದೇವೆ.
ಅದೇ ಕಾಲಕ್ಕೆ ಹಿಂದಿದ್ದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಸಾವಿತ್ರಿ ಬಾಯಿ ಪುಲೆ,ಡಾ.ಬಿ.ಆರ್.ಅಂಬೇಡ್ಕರ್ ಅವರ ಪಠ್ಯಗಳನ್ನು ತೆಗೆದು ಹಾಕಿತ್ತು.ಈ ಪಠ್ಯಗಳನ್ನು ಮರಳಿ ಸೇರಿಸಲು ತೀರ್ಮಾನಿಸಿದ್ದೇವೆ.
ಹಾಗೆಯೇ ಮುಂದಿನ ದಿನಗಳಲ್ಲಿ ರಾಜಪ್ಪ ದಳವಾಯಿ, ರಮೇಶ್ ಕುಮಾರ್, ಪಿ.ಆರ್.ಚಂದ್ರಶೇಖರ್, ಅಶ್ವಥ್ಥನಾರಾಯಣ, ರಾಜೇಶ್ ಸೇರಿದಂತೆ ಐದು ಮಂದಿಯ ಸಮಿತಿಯನ್ನು ರಚಿಸಲು ತೀರ್ಮಾನಿಸಿದ್ದು,ಈ ಸಮಿತಿ ಮುಂದಿನ ದಿನಗಳಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ವರದಿ ನೀಡಲಿದೆ ಎಂದರು.
ಅಂದ ಹಾಗೆ ಪ್ರಸಕ್ತ ಸಾಲಿನ ಪಠ್ಯ ಪುಸ್ತಕ ಈಗಾಗಲೇ ಮುದ್ರಣವಾಗಿದ್ದು,ರಾಜ್ಯದ ಎಲ್ಲ ಶಾಲೆಗಳಿಗೆ ತಲುಪಿದೆ.ಹೀಗಾಗಿ ಆ ಪಠ್ಯಪುಸ್ತಕಗಳನ್ನು ವಾಪಸ್ ತರಿಸಲು ಸಾಧ್ಯವಿಲ್ಲ. ಹಾಗೇನಾದರೂ ಮಾಡಲು ಹೋದರೆ ಕೋಟ್ಯಾಂತರ ರೂಪಾಯಿ ವೆಚ್ಚವಾಗುತ್ತದೆ.ಹೀಗಾಗಿ ಮುಂದಿನ ಎರಡು ವಾರಗಳಲ್ಲಿ ಸಪ್ಲಿಮೆಂಟರಿ ಹೊತ್ತಿಗೆಯೊಂದನ್ನು ಎಲ್ಲ ಶಾಲೆಗಳಿಗೆ ರವಾನಿಸಿ,ಈಗಿರುವ ಪಠ್ಯದಲ್ಲಿ ಯಾವುದನ್ನು ಮಕ್ಕಳಿಗೆ ಭೋಧಿಸಬಾರದು ಮತ್ತು ಯಾವುದನ್ನು ಭೋಧಿಸಬೇಕು ಎಂಬುದನ್ನು ಸೂಚಿಸುತ್ತೇವೆ.
ಈಗ ಯಾವ್ಯಾವ ಪಠ್ಯವನ್ನು ತೆಗೆದುಹಾಕಬೇಕು, ಯಾವ್ಯಾವ ಪಠ್ಯವನ್ನು ಸೇರಿಸಬೇಕು ಎಂದು ತೀರ್ಮಾನಿ ಸಿದ್ಧೇವೋ? ಆ ಕುರಿತ ಮಾಹಿತಿ ಸಪ್ಲಿಮೆಂಟರಿ ಹೊತ್ತಿಗೆಯಲ್ಲಿರಲಿದೆ ಎಂದು ಸ್ಪಷ್ಟ ಪಡಿಸಿದರು.
ಬಿಜೆಪಿ ಸರ್ಕಾರ ತನ್ನ ಉದ್ದೇಶದಷ್ಟು ತಿದ್ದುಪಡಿ ಮಾಡಲು ಹೆದರಿಕೊಂಡಿದ್ದರಿಂದ,ಶೇಕಡಾ ಎಪ್ಪತ್ತೈದರಷ್ಟು ಉದ್ದೇಶಿತ ಪಠ್ಯಗಳನ್ನು ಅಳವಡಿಸಿರಲಿಲ್ಲ.ಅದು ಅಳವಡಿಸಿರುವ ಪಠ್ಯವನ್ನು ನಾವು ಉಳಿಸಿಕೊಳ್ಳಲು ಬಯಸುವುದಿಲ್ಲ ಎಂದರು.
ಇನ್ನು ಹಿಂದಿದ್ದ ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿತ್ತು.ಆದರೆ ಈ ತಿದ್ದುಪಡಿಯಿಂದ ರೈತರಿಗೆ ಹಾನಿಯಾಯಿತು.ಹಮಾಲರಿಗೆ ಸಮಸ್ಯೆಯಾಯಿತು.ಹೀಗಾಗಿ ಸದರಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಲು ತೀರ್ಮಾನಿಸಿದ್ದೇವೆ.
ಈ ತಿದ್ದುಪಡಿಯಿಂದ ಮಾರುಕಟ್ಟೆಗೆ ತುಂಬ ಅನುಕೂಲವಾಗುತ್ತದೆ ಎಂದು ಬಿಜೆಪಿ ಸರ್ಕಾರ ಹೇಳಿತ್ತು.ಆದರೆ ಅವರು ಕಾಯ್ದೆಗೆ ತಿದ್ದುಪಡಿ ಮಾಡುವ ಕಾಲದಲ್ಲಿ 670 ಕೋಟಿ ರೂಪಾಯಿಗಳಷ್ಟಿದ್ದ ಕೃಷಿ ಮಾರುಕಟ್ಟೆಗಳ ಲಾಭ ಈಗ 200 ಕೋಟಿ ರೂಪಾಯಿಗಳಿಗೂ ಕಡಿಮೆಯಾಗಿದೆ.
ಹೀಗಾಗಿ ರಾಜ್ಯದ ಕೃಷಿ ಮಾರುಕಟ್ಟೆಗಳಿಗೆ ಹಿಂದಿನ ಶಕ್ತಿ ದೊರಕಿಸಿ ಕೊಡಲು ಸದರಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಲು ತೀರ್ಮಾನಿಸಿದ್ದೇವೆ.ಮತ್ತು ಪ್ರಾಂಗಣದೊಳಗೆ ಕೃಷಿ ವಸ್ತುಗಳನ್ನು ಮಾರಾಟ ಮಾಡಬೇಕು ಎಂಬ ಅಂಶವನ್ನು ತೆಗೆದು ಮಾರುಕಟ್ಟೆ ವ್ಯಾಪ್ತಿಯಲ್ಲಿ ಎಲ್ಲಿ ಬೇಕಾದರೂ ರೈತರು ಮಾರಾಟ ಮಾಡಬಹುದು ಎಂದು ಸೇರಿಸಲಾಗಿದೆ ಎಂದು ವಿವರಿಸಿದರು.
ಶಾಲೆಯಲ್ಲಿ ಸಂವಿಧಾನ
ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದ ಲೋಕೋಪಯೋಗಿ ಸಚಿವ ಹೆಚ್.ಸಿ.ಮಹಾದೇವಪ್ಪ ಅವರು ಮಾತನಾಡಿ, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆ ಓದುವುದನ್ನು ಕಡ್ಡಾಯಗೊಳಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದರು.
ಇದೇ ರೀತಿ ಸರ್ಕಾರಿ,ಅರೆಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲೂ ಸಂವಿಧಾನದ ಪೀಠಿಕೆಯನ್ನು ಕಡ್ಡಾಯವಾಗಿ ಪ್ರದರ್ಶಿಸಲು ಆದೇಶ ಹೊರಡಿಸಲಾಗುವುದು ಎಂದ ಅವರು, ನೂರಾ ನಲವತ್ತು ಕೋಟಿ ಜನರಿರುವ ಭಾರತದಲ್ಲಿ ಸಂವಿಧಾನವೇ ಪರಮ ಪವಿತ್ರ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತನಾಡಿ, ಮನೆ ಒಡತಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡುವ ಗೃಹ ಲಕ್ಷ್ಮಿ ಯೋಜನೆಗೆ ಮುಂದಿನ ನಾಲ್ಕೈದು ದಿನಗಳಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದರು.
ಗೃಹ ಲಕ್ಷ್ಮಿ ಯೋಜನೆಗೆ ಫಲಾನುಭವಿ ಗಳಾಗುವವರು ಜೂನ್ 16 ರಿಂದಲೇ ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಈ ಮೊದಲು ಹೇಳಲಾಗಿತ್ತು. ಆದರೆ 1.28 ಕೋಟಿ ಫಲಾನುಭವಿಗಳಿರುವ ಯೋಜನೆ ಆಗಿರುವುದರಿಂದ ಅರ್ಜಿ ಸಲ್ಲಿಕೆ ಮಾಡಲು ಕುಂದು ಕೊರತೆಗಳು ಇಲ್ಲದಂತೆ ನೋಡಿಕೊಳ್ಳಬೇಕು ಎಂದು ಸಂಪುಟ ಸಭೆಯಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂದರು. ಇದೇ ಕಾರಣಕ್ಕಾಗಿ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವ ಕೆಲಸ ಮುಂದಿನ ನಾಲ್ಕೈದು ದಿನಗಳ ನಂತರ ಪ್ರಾರಂಭಿಸಲಾಗುವುದು ಎಂದು ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ವಿವರಿಸಿದರು.