ಸಿಎಂ ಬದಲಾವಣೆ ಗೊಂದಲ-ರಾಜ್ಯಪಾಲರಿಗೆ ದೂರು ನೀಡಲು ಮುಂದಾದ ಬಿಜೆಪಿ

Kannada Nadu
ಸಿಎಂ ಬದಲಾವಣೆ ಗೊಂದಲ-ರಾಜ್ಯಪಾಲರಿಗೆ ದೂರು ನೀಡಲು ಮುಂದಾದ ಬಿಜೆಪಿ

ಬೆಂಗಳೂರು : ರಾಜ್ಯ ಸರ್ಕಾರದಲ್ಲಿ ಉಂಟಾಗಿರುವ ನಾಯಕತ್ವ ಬದಲಾವಣೆ ಗೊಂದಲ ಶೀಘ್ರವಾಗಿ ಪರಿಹಾರ ಕಾಣದಿದ್ದರೆ ಪ್ರತಿಪಕ್ಷ ಬಿಜೆಪಿ, ರಾಜ್ಯಪಾಲರಿಗೆ ದೂರು ನೀಡಲು ಮುಂದಾಗಿದೆ.ಇನ್ನು 3-4 ದಿನಗಳ ವರೆಗೆ ಇದೇ ಪರಿಸ್ಥಿತಿ ಮುಂದುವರೆದರೆ, ಕಾಯಾರ್ಂಗದ ಮುಖ್ಯಸ್ಥರಾಗಿ ರುವ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಬಿಜೆಪಿ ಮನವಿ ಮಾಡಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್‍ನ ವಿರೋಧದ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಸೇರಿದಂತೆ ಶಾಸಕರು, ವಿಧಾನ ಪರಿಷತ್ ಸದಸ್ಯರ ನಿಯೋಗ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮಧ್ಯಪ್ರವೇಶಕ್ಕೆ ಮನವಿ ಮಾಡಿಕೊಳ್ಳಲಿದೆ.
ಕಳೆದ 10 ದಿನಗಳಿಂದ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದು ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಜನರ ಕಷ್ಟಗಳನ್ನು ಕೇಳುವವರೇ ಇಲ್ಲದಂತಾಗಿದೆ. ಕೆಲವು ಕಡೆ ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಬಿದ್ದಿದೆ. ಬೆಂಗಳೂರಿನಂತಹ ಮಹಾನಗರದಲ್ಲೇ ಜನ ನಿಬಿಡ ಪ್ರದೇಶದಲ್ಲೇ ಎಟಿಎಂ ಗೆ ತುಂಬಬೇಕಾಗಿದ್ದ ಹಣವನ್ನು ದೋಚುತ್ತಾರೆ ಎಂದರೆ ಯಾರಿಗೂ ಕಾನೂನಿನ ಭಯವೇ ಇಲ್ಲದಂತಾಗಿದೆ. ಹೀಗಾಗಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಸರ್ಕಾರಕ್ಕೆ ಸ್ಪಷ್ಟವಾದ ನಿರ್ದೇಶನ ನೀಡುವಂತೆ ಕೋರಲಿದ್ದಾರೆ.
ಈಗಾಗಲೇ ರಾಜ್ಯಪಾಲರ ಭೇಟಿಗೆ ಅಧಿಕಾರಿಗಳಿಂದ ಸಮಯ ನೀಡುವಂತೆ ಬಿಜೆಪಿ ಮನವಿ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣದ ನಡುವೆ ಅಧಿಕಾರಕ್ಕಾಗಿ ಪ್ರತಿದಿನ ಕಿತ್ತಾಟ ನಡೆಯುತ್ತಿದೆ. ಸಚಿವರು ತಮ ಜವಾಬ್ದಾರಿಗಳನ್ನು ಮರೆತು ಕುರ್ಚಿ ಉಳಿಸಿಕೊಳ್ಳುವ ನೆಪದಲ್ಲಿ ಇಲಾಖೆಯ ಕೆಲಸವನ್ನು ಮರೆತಿದ್ದಾರೆ. ಇದರ ಪರಿಣಾಮವಾಗಿ ಸರ್ಕಾರ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕಾದ ಅಗತ್ಯವಿದೆ ಎಂದು ಮನವಿಯಲ್ಲಿ ಮನವರಿಕೆ ಮಾಡಿಕೊಡಲಿದೆ.
ಅಧಿಕಾರಿಗಳು ಯಾರ ಮಾತನ್ನು ಕೇಳುತ್ತಿಲ್ಲ. ಮನಸೋ ಇಚ್ಛೆ ನಡೆದುಕೊಳ್ಳುತ್ತಿದ್ದಾರೆ. ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಇತ್ತೀಚಿಗೆ ಸುರಿದ ಭಾರೀ ಮಳೆಯ ಪರಿಣಾಮ ನೆರೆ ಉಂಟಾಗಿ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಪರಿಹಾರ ಒದಗಿಸಬೇಕಾದ ಸರ್ಕಾರ ಸಂತ್ರಸ್ತರನ್ನೇ ಮರೆತಿದೆ. ಜನರಿಂದ ಆಯ್ಕೆಗೊಂಡ ಸರ್ಕಾರ ನಿಷ್ಕ್ರಿಯೆಗೊಂಡಾಗ ರಾಜ್ಯಪಾಲರು ಮಧ್ಯಪ್ರವೇಶ ಮಾಡಿರುವ ಉದಾಹರಣೆಗಳು ಸಾಕಷ್ಟೂ ಇವೆ.
ಸರ್ಕಾರದ ಕಿವಿ ಹಿಂಡಿ ಕೆಲಸ ಮಾಡಲು ನಿದೇರ್ಶನ ನಿಡಿ ಮನವಿ ಮಾಡಿಕೊಳ್ಳಲಿದ್ದಾರೆ.ಇನ್ನು ಈ ನಾಲ್ಕು ದಿನ ಕಾದು ನೋಡುವ ತಂತ್ರವನ್ನು ಅನುಸರಿಸಲು ಮುಂದಾಗಿರುವ ಬಿಜೆಪಿ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ರಾಜಭವನದ ಕದ ತಟ್ಟುವುದು ಗ್ಯಾರಂಟಿ ಎನ್ನಲಾಗಿದೆ.
ನಾಯಕತ್ವಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲ ಆಡಳಿತದ ಮೇಲೆ ನಕಾರಾತಕ ಪರಿಣಾಮ ಉಂಟುಮಾಡುತ್ತಿದೆ. ಸರ್ಕಾರವನ್ನು ಯಾರು ಮುನ್ನಡೆಸುತ್ತಾರೆ ಎನ್ನುವ ಅಸ್ಪಷ್ಟತೆ ಆಡಳಿತ ಯಂತ್ರವನ್ನು ದುರ್ಬಲ ಗೊಳಿಸಲಿದೆ ಹಾಗೂ ಅಧಿಕಾರಿಗಳು ನಿಷ್ಕ್ರಿಯಗೊಳ್ಳಲು ಕಾರಣವಾಗುತ್ತದೆ.ತ್ವರಿತವಾಗಿ ವಿಲೇವಾರಿ ಆಗಬೇಕಾದ ಕಡತಗಳು ನನೆಗುದಿಗೆ ಬೀಳುತ್ತವೆ. ಶಾಸಕರು ಹಾಗೂ ಸಚಿವರು ಗುಂಪು ರಾಜಕಾರಣದಲ್ಲಿ ತೊಡಗುವುದು ಸರ್ಕಾರವನ್ನು ದುರ್ಬಲಗೊಳಿಸಿದಂತಾಗುತ್ತದೆ. ಇದರಿಂದ ಮತದಾರರಿಗೆ ಕೆಟ್ಟ ಸಂದೇಶ ನೀಡಿದಂತಾಗುತ್ತದೆ ಎಂದು ದೂರಿನಲ್ಲಿ ಮನವರಿಕೆ ಮಾಡಲಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";