‘ನೆಟ್ಟು ಬೋಲ್ಟು ಟೈಟ್’ ವಿಚಾರ ಚರ್ಚೆ ಕಿಚ್ಚನ ಮಾತಿಗೆ ಡಿಕೆ ಶಿವಕುಮಾರ್ ಗುಡುಗು ?
ನಟ ಕಿಚ್ಚ ಸುದೀಪ್ ರಿಪಬ್ಲಿಕ್ ಕನ್ನಡ ವಾಹಿನಿಯಲ್ಲಿ ನಡೆದ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಕೊಂಚ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು.
ರಾಜ್ಯದಲ್ಲಿ ಮತ್ತೆ ‘ನೆಟ್ಟು ಬೋಲ್ಟು ಟೈಟ್’ ವಿಚಾರ ಚರ್ಚೆ ಹುಟ್ಟಾಕ್ಕಿದೆ. ಚಿತ್ರರಂಗದವರು ಸರ್ಕಾರ ಕೆಲಸಗಳಿಗೆ ಕೈ ಜೋಡಿಸುವುದಿಲ್ಲ. ಸರ್ಕಾರದ ಕಾರ್ಯಕ್ರಮಗಳಿಗೆ ಬಂದು ಬೆಂಬಲ ಸೂಚಿಸಲ್ಲ. ಎಲ್ಲರ ನೆಟ್ಟು ಬೋಲ್ಟು ಟೈಟ್ ಮಾಡುವುದು ನಮಗೆ ಗೊತ್ತು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗರಂ ಆಗಿ ಹೇಳಿದ್ದರು.
“ನಮ್ಮನ್ನು ಆ ಕಾರ್ಯಕ್ರಮಗಳಿಗೆ ಯಾರು ಕರೆದಿರಲಿಲ್ಲ, ನಟ್ಟು ಬೋಲ್ಟ್ ಟೈಟ್ ಆಗಿಯೇ ಇದೆ. ಸಿನ್ಮಾ ಕೂಡ ಒಂದು ಗೌರವವಾದ ಸ್ಥಳ. ನಾವು ಎಷ್ಟು ಗೌರವ ಕೊಡ್ತೀವೋ ಅಷ್ಟೇ ನಮಗೂ ಕೊಡಿ. ಅವರ ಪ್ರಕಾರ ಅಹಂ ಕೆಲವರಿಗೆ ಇರಬಹುದು. ಎಲ್ಲರಿಗೂ ಇಲ್ಲ. ನಾವು ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡದೇ ಇರಬಹುದು, ಆದರೆ ಆ ಹೇಳಿಕೆ ನೋವುಂಟು ಮಾಡಿದ್ದು ನಿಜ ಎಂದು ಸುದೀಪ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಸುದೀಪ್ ಹೇಳಿಕೆ ವಿಚಾರವನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಳಿ ಮಾಧ್ಯಮದವರು ಪ್ರಸ್ತಾಪಿಸಿದ್ದರು. ಆಗ ಏಕವಚನದಲ್ಲೇ ಡಿಸಿಎಂ ಮತ್ತೆ ಗುಡುಗಿದ್ದಾರೆ. “ನಾನು ಯಾವನಿಗೂ ಉತ್ತರ ಕೊಡಲು ಇಷ್ಟಪಡಲ್ಲ. ನಾನು ಬಿಚ್ಚೋದು ಬೇಡ. ಫಿಲ್ಮ್ ಚೇಂಬರ್ಗೆ ಹೋಗಿ ದಾಖಲೆ, ಇತಿಹಾಸ ತೆಗೆದು ನೋಡಿ. ಫಿಲ್ಮ್ ಚೇಂಬರ್ಗೆ ನಾನೇನು ಮಾಡಿದ್ದೀನಿ ಅಂತ. ನಾನು ಅವರಿಗೆಲ್ಲಾ ಉತ್ತರಿಸಲ್ಲ. ಕಾಲವೇ ಎಲ್ಲದ್ದಕ್ಕೂ ಉತ್ತರ ಕೊಡುತ್ತದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಅಂತರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನೆ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಮಾತನಾಡಿ ಚಿತ್ರರಂಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಕಲಾವಿದರು ಸರ್ಕಾರದ ಬೆಂಬಲಕ್ಕೆ ಬರುತ್ತಿಲ್ಲ ಎಂದಿದ್ದರು. ನಾವು ನಮ್ಮ ಜಲ ನಮ್ಮ ಹಕ್ಕು ಎಂಬ ಜಾಥಾ ಮಾಡಿದ್ದೆವು. ಆಗ ಸಾಧು ಕೋಕಿಲ, ದುನಿಯಾ ವಿಜಯ್ ಬಿಟ್ಟರೆ ಯಾರು ಬೆಂಬಲ ಕೊಡಲಿಲ್ಲ. ನೆಟ್ಟು ಬೋಲ್ಟು ಎಲ್ಲಿ ಟೈಟ್ ಮಾಡಬೇಕೆಂದು ನಮಗೂ ಗೊತ್ತು” ಅಂತ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದರು.
ಡಿಸಿಎಂ ಹೇಳಿಕೆ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ರಮ್ಯಾ ಬಿಟ್ಟರೆ ಚಿತ್ರರಂಗದಲ್ಲಿ ಯಾರೂ ಕೂಡ ಇದಕ್ಕೆ ಪ್ರತಿಕ್ರಿಯೆ ಕೊಡುವ ಗೋಜಿಗೆ ಹೋಗಿರಲಿಲ್ಲ. ಆದರೆ ಇತ್ತೀಚೆಗೆ ಸುದೀಪ್ ಬಹಿರಂಗವಾಗಿಯೇ ಈ ಬಗ್ಗೆ ಮಾತನಾಡಿದ್ದರು. ರಿಪಬ್ಲಿಕ್ ಕನ್ನಡ ವಾಹಿನಿ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಕೊಂಚ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. “ಡಿಕೆ ಶಿವಕುಮಾರ್ ಅವರು ಯಾವ ಅರ್ಥದಲ್ಲಿ ಹೇಳಿದ್ರು ಗೊತ್ತಿಲ್ಲ. ಆದರೆ ಅವ್ರು ಎಲ್ಲವನ್ನು ತಿಳಿದು ಮಾತನಾಡಬೇಕು, ಚಿತ್ರರಂಗದಲ್ಲಿ ನಾವೆಲ್ಲ ಗೌರವಸ್ಥರಿದ್ದೀವಿ, ನಾವು ಮೈ ಮಾರಿಕೊಂಡು ಬದುಕುತ್ತಿರುವ ವ್ಯಕ್ತಿಗಳಲ್ಲ” ಎಂದು ಸುದೀಪ್ ಹೇಳಿದ್ದರು.