ವಾಯುಭಾರ ಕುಸಿತ: ರಾಜ್ಯದ 17 ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆ ಮಾಡಿದ ಹವಾಮಾನ ಇಲಾಖೆ

ಬೆಂಗಳೂರು:ಕಳೆದೊಂದು ವಾರದಿಂದ ರಾಜ್ಯದ ಬಹುತೇಕ ಕಡೆ ವರುಣನ ಅಬ್ಬರ ಜೋರಾಗಿದೆ. ಈ ನಡುವೆ ಮುಂದಿನ ನಾಲ್ಕೈದು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಇಂದಿನಿಂದ ಐದು ದಿನ ರಾಜ್ಯದ 17 ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಮೈಸೂರು, ಹಾಸನ, ತುಮಕೂರು, ಚಿತ್ರದುರ್ಗ, ಮಂಡ್ಯ, ರಾಮನಗರ, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ.

ಜೊತೆಗೆ ಉತ್ತರ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ. ವರುಣನ ಕೃಪೆಯಿಂದಾಗಿ ರೈತರು ಸಂತಸಗೊಂಡಿದ್ದು, ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.

 

ಬಂಗಾಳಕೊಲ್ಲಿಯಲ್ಲಿ ಉಂಟಾಗುತ್ತಿರುವ ವಾಯುಭಾರ ಕುಸಿತ, ಮೇಲೈ ಸುಳಿಗಾಳಿ ಸೇರಿದಂತೆ ವಾತಾವರಣದಲ್ಲಿ ಉಂಟಾಗಿರುವ ಪ್ರಮುಖ ಬದಲಾವಣೆಗಳಿಂದ ರಾಜ್ಯದ ದಕ್ಷಿಣ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಇನ್ನೆರೆಡು ದಿನ ಭಾರಿ ಮಳೆಯಾಗುವ ಮುನ್ಸೂಚನೆಗಳಿವೆ.

 

ಕರಾವಳಿ, ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದ್ದು, ಇನ್ನೂ ಮೂರು ದಿನಗಳ ಕಾಲ ಆ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಗಳಿವೆ. ದಕ್ಷಿಣ ಒಳನಾಡಿನಲ್ಲಿ ಹೆಚ್ಚೂ ಕಡಿಮೆ ಇದೇ ರೀತಿ ಒಂದು ವಾರ ಕಾಲ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

 

ರಾಜ್ಯದ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗಿದೆ. ಕೆಲವೆಡೆ ಭಾರೀ ಮಳೆಯಾಗಿದ್ದರೆ, ಕೆಲವೆಡೆ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು, ಇನ್ನು ಮುಂದಿನ ದಿನಗಳಲ್ಲೂ ಹೆಚ್ಚಾಗುವ ಮುನ್ಸೂಚನೆಗಳಿವೆ.

 

ನೈರುತ್ಯ ಮುಂಗಾರು ಮೇ 31ಕ್ಕೆ ಕೇರಳ, ಕರಾವಳಿ ತಲುಪಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದಕ್ಕೆ ಪೂರಕವಾಗಿ ಬಂಗಾಳಕೊಲ್ಲಿ ಹಾಗೂ ಅರಬ್ಬಿಸಮುದ್ರದಲ್ಲಿ ವಾತಾವರಣ ಮಾರ್ಪಾಡಾಗುತ್ತಿದ್ದು, ಈ ಸಮಯದಲ್ಲಿ ಸಾಕಷ್ಟು ಮಳೆಯಾಗಲಿದೆ.

 

ನಿರೀಕ್ಷೆಯಂತೆ ಮೇ ಅಂತ್ಯಕ್ಕೆ ಮುಂಗಾರು ಕೇರಳ ಪ್ರವೇಶಿಸಿದರೆ ಅನಂತರ ಎರಡು-ಮೂರು ದಿನಗಳಲ್ಲಿ ರಾಜ್ಯವನ್ನು ಮುಂಗಾರು ಪ್ರವೇಶಿಸಲಿದೆ. ಬಳಿಕ ಒಂದು ವಾರದೊಳಗೆ ರಾಜ್ಯಾದ್ಯಂತ ಮುಂಗಾರು ವ್ಯಾಪಿಸುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

 

 

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top