ದೇವನಹಳ್ಳಿ: ಲಕ್ಷಾಂತರ ಜನಸಮೂಹಕ್ಕೆ ಬೆಳಕು ನೀಡಿದ ಶ್ರೀ ಶಿವಕುಮಾರಸ್ವಾಮಿಜಿ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದ ಶಿವಕುಮಾರಸ್ವಾಮಿ ವೃತ್ತದಲ್ಲಿ ತಾಲೂಕು ವೀರಶೈವ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಶಿವಕುಮಾರಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶಿವಕುಮಾರಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಶತಮಾನದ ಯುಗ ಪುರುಷರು ನಡೆದಾಡುವ ದೇವರು, ತ್ರಿವಿದ ದಾಸೋಹಿಗಳಾಗಿದ್ದ ಶ್ರೀ ಶಿವಕುಮಾರಸ್ವಾಮಿಗಳ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಸಾವಿರಾರು ವಿದ್ಯಾರ್ಥಿಗಳಿಗೆ ಊಟ, ವಸತಿಯೊಂದಿಗೆ ಶಿಕ್ಷಣ ನೀಡಿ ಅವರ ಬಾಳಿಗೆ ಬೆಳಕಾಗಿದ್ದಾರೆ. ನಮ್ಮನ್ನು ಅಗಲಿ ೨ ವರ್ಷಗಳಾಗಿವೆ. ಶಿವಕುಮಾರಸ್ವಾಮಿಗಳು ಮಾಡಿರುವ ಸಮಾಜ ಸೇವಾ ಕಾರ್ಯ ಸೂರ್ಯ ಚಂದ್ರರು ಇರುವವರೆಗೂ ಶಾಶ್ವತವಾಗಿ ಜನರ ಮನದಲ್ಲಿರುತ್ತದೆ. ಶ್ರೀಮಠದಲ್ಲಿ ವ್ಯಾಸಂಗ ಮಾಡಿದ ಹಲವಾರು ಜನರು ಇಂದು ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ತಾಲೂಕಿಗೆ ಪಕ್ಷೇತರರಾಗಿ ಬಂದ ಮೇಲೆ ಶಿವಕುಮಾರ ಸ್ವಾಮಿಯವರನ್ನು ಭೇಟಿಮಾಡಿ ಆಶೀರ್ವಾದ ಪಡೆದ ನಂತರ ಅವರ ಆಶೀರ್ವಾದದಿಂದ ತಾಲೂಕಿನ ಶಾಸಕನಾದೆ ಎಂದು ಹೇಳಿದರು.
ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಎಂ.ಎಸ್.ರಮೇಶ್ ಮಾತನಾಡಿ, ನಾಡಿನ ಅಸಂಖ್ಯಾತ ಮಕ್ಕಳಿಗೆ ಅನ್ನ, ಅಕ್ಷರ, ಆರೋಗ್ಯ ನೀಡಿದ ವಿಶ್ವ ರತ್ನ, ಡಾ.ಶಿವಕುಮಾರಸ್ವಾಮಿಜೀ ಅವರು ಬದುಕಿದ ರೀತಿ ಒಂದು ಶ್ರೇಷ್ಠ ಸಂದೇಶ ಹಾಗೂ ಮಾದರಿ ವ್ಯಕ್ತಿಯಾಗಿದ್ದಾರೆ. ಅವರು ಹಾಕಿಕೊಟ್ಟಿರುವ ದಾರಿಯಲ್ಲಿ ಪ್ರತಿಯೊಬ್ಬರು ಸಾಗಬೇಕಾಗಿದೆ. ನಡೆದಾಡುವ ದೇವರೆಂದು ಪ್ರಖ್ಯಾತಿಯಾಗಿದ್ದರು. ಆಧುನಿಕ ಬಸವಣ್ಣರಾಗಿದ್ದರು. ಇವರನ್ನು ಸ್ಮರಿಸುವ ಸಲುವಾಗಿ ದಾಸೋಹದ ಮೂಲಕ ಶಿವಕುಮಾರಸ್ವಾಮಿ ಅವರ ಸ್ಮರಣೆಯನ್ನು ಮಾಡಲಾಗುತ್ತಿದೆ ಎಂದರು.
ಈ ವೇಳೆಯಲ್ಲಿ ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ವಿರೂಪಾಕ್ಷ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಯ್ಯ, ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೋಡಿಮಂಚೇನಹಳ್ಳಿ ನಾಗೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಮುನೇಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್.ವಿಜಯ್‌ಕುಮಾರ್, ಉಪಾಧ್ಯಕ್ಷ ನಾಗಭೂಷಣ್, ಮುಖಂಡರಾದ ವೀರಭದ್ರಪ್ಪ, ಕಾಂತರಾಜು, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ಕಾಂತರಾಜು, ಯುವ ಘಟಕದ ಅಧ್ಯಕ್ಷ ಶಾಂತಕುಮಾರ್, ಮುಖಂಡ ಸದಾಶಿವಯ್ಯ, ಮತ್ತಿತರರು ಇದ್ದರು.