ಯರಗಟ್ಟಿ: ಸ್ಥಳೀಯ ಯರಗಟ್ಟಿಯ ಬಸ್ ನಿಲ್ದಾಣದಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರಿ ಕಾರ್ಮಿಕ ಪದ್ಧತಿ ನಿಷೇಧ ಕುರಿತು ಬೀದಿ ನಾಟಕ ಜಾಗೃತಿ ಕಾರ್ಯಕ್ರಮಕ್ಕೆ ಹಲಿಗೆ ಭಾರಿಸುವ ಮೂಲಕ ತಹಶೀಲ್ದಾರ ಚಾಲನೆ ನೀಡಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟಲು ಅಧಿಕಾರಿಗಳು ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಕಾರ್ಯಕ್ರಮದಲ್ಲಿ ಹೋಟೆಲ್ ಮಾಲಿಕರು, ಪೆಟ್ರೋಲ್ ಬಂಕ್ ಮಾಲಿಕರು, ಅಸಂಘಟಿತ ಕಾರ್ಮಿಕರು, ಕಟ್ಟಡ ಕಾರ್ಮಿಕ ಸಂಘದವರು, ಗ್ಯಾರೇಜ್ ಮಾಲೀಕರು ಪಾಲ್ಗೊಳ್ಳುವಂತೆ ಮಾಡಿ, ಅವರಿಗೆ ಬಾಲ ಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳುವುದು ಅಪರಾಧ ಎಂಬುದರ ಬಗ್ಗೆ ತಿಳಿಸಿ ಕೊಡಬೇಕು ಎಂದರು.

ನಂತರ ಜಿಲ್ಲಾ ಕಾರ್ಮಿಕ ಯೋಜನಾ ಅಧಿಕಾರಿ ಶ್ರೀಮತಿ ಜ್ಯೋತಿ ಕಾಂತೆ ಅವರು ಮಾತನಾಡಿ, ಬಾಲ ಕಾರ್ಮಿಕ ಕಾಯ್ದೆ ೧೯೮೬ರನ್ವಯ ಯಾವುದೇ ಉದ್ದಿಮೆಗಳಲ್ಲಿ ೧೪ ವರ್ಷದೊಳಗಿನ ಹಾಗೂ ತಿದ್ದುಪಡಿ ಕಾಯ್ದೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ -೨೦೧೬ ಕಾಯ್ದೆಯನ್ವಯ ಸೂಚಿಸಿದ ಅಪಾಯಕಾರಿ ಉದ್ದಿಮೆಯಲ್ಲಿ ೧೮ ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ೫೦ ಸಾವಿರ ರೂ. ದಂಡ ಅಥವಾ ೨ ವರ್ಷದ ವರೆಗೆ ಜೈಲು ಶಿಕ್ಷೆಗೆ ಅವಕಾಶವಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಬಿ. ಬಿ. ಗೋರೋಶಿ, ಕಾರ್ಮಿಕ ಇಲಾಖೆ ಸಿಬ್ಬಂದಿ, ಯರಗಟ್ಟಿ ಬಸ್ ನಿಲ್ದಾಣದ ಸಿಬ್ಬಂದಿ ಸೇರಿದಂತೆ ಹಲವು ಉಪಸ್ಥಿತರಿದ್ದರು.
