ಬೆಂಗಳೂರು,ಮಾ,11 : ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಅಕೀಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಮಹಿಳಾ ಘಟಕ ಇದೇ 13 ರಂದು ಭಾನುವಾರ ಬೆಂಗಳೂರಿನಲ್ಲಿ ಮಹಿಳೆಯರ ಬೃಹತ್ ಪರಿವರ್ತನಾ ಬೈಕ್ ರಾಲಿ ಆಯೋಜಿಸಿದೆ. ಬಸವನಗುಡಿಯ ಶಂಕರಪುರಂನ ಶೃಂಗೇರಿ ಶಂಕರಮಠದಿಂದ ಆರಂಭವಾಗಿ ಬನಶಂಕರಿ 2ನೇ ಘಟ್ಟದಲ್ಲಿರುವ ಮಹಾಸಭಾ ಕಚೇರಿ ವರೆಗೆ ನಡೆಲಿರುವ ಈ ರ್ಯಾಲಿಯನ್ನು ಅಂದು ಬೆಳಿಗ್ಗೆ ಎಂಟು ಗಂಟೆಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಉದ್ಘಾಟಿಸಲಿದ್ದು, ಮಹಾ ಸಭೆ ಅಧ್ಯಕ್ಷ ಅಶೋಕ್ ಹಾರನಹಳ್ಳಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. 300ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಲ್ಲಿ 500ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಳ್ಳಲಿದ್ದು ಇದೊಂದು ಐತಿಹಾಸಿಕ ಕಾರ್ಯಕ್ರಮ ಆಗಲಿದೆ ಎಂದೂ ಮಹಿಳಾ ಘಟಕದ ಸಂಚಾಲಕಿ ಶ್ರೀಮತಿ ರೂಪಾಶಾಸ್ತ್ರಿ ವಿವರಿಸಿದರು.

ಇದೇ ದಿನ ಸಂಜೆ ಕೆ.ಆರ್. ರಸ್ತೆಯ ಗಾಯನ ಸಮಾಜದಲ್ಲಿ ಮಧ್ಯಾಹ್ನ ಮೂರು ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ವಿವಿಧ ಕ್ಷಷೇತ್ರಗಳಲ್ಲಿ ಸಾಧನೆ ಮಾಡಿದ ವಿಪ್ರ ಮಹಿಳೆಯರಿಗೆ ವಿಪ್ರ ಸ್ತ್ರೀರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಸಂಜೆ ನಡೆಯುವ ಕಾರ್ಯಕ್ರಮವನ್ನು ಮಹಾ ಸಭಾ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿಯವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಖ್ಯಾತ ಕಿರು ತೆರೆ ಹಾಗೂ ಚಲನಚಿತ್ರ ನಟಿ ಶ್ರೀಮತಿ ಮಾಳವಿಕ ಅವಿನಾಶ್, ಬೆಂಗಳೂರಿನ ಮಾಜಿ ಉಪ ಮೇಯರ್ ಶ್ರೀಮತಿ ಹೆಮಲತಾ ಗೋಪಾಲಯ್ಯ, ಹಾಗೂ ಅತಿಥಿಗಳಾಗಿ ಹೆಸರಾಂತ ಸಮಾಜ ಸೇವಕಿಯರಾದ ಶ್ರೀಮತಿ ಮೇಧಿನಿ ಉದಯ್ ಗರುಡಾಚಾರ್, ಬಿಬಿಎಂಪಿ ಮಾಜಿ ಸದಸ್ಯರಾದ ಶ್ರೀಮತಿ ಎಚ್.ಸಿ. ನಾಗರತ್ನ,ಶ್ರೀಮತಿ ಸುಮಂಗಲ, ಶ್ರೀಮತಿನಂದಿನಿವಿಠಲ್, ಶ್ರೀಮತಿವಾಣಿ ರಾವ್ ಪಾಲ್ಗೊಳ್ಳಲಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಮಹೋನ್ನತ ಸಾಧನೆ ಮಾಡಿರುವ ಮಹಿಳಾ ಸಾಧಕಿಯರಾದ ಶ್ರೀಮತಿ ಕವಿತಾ ಮಿಶ್ರಾ ( ಕೃಷಿ – ಸಮಾಜ ಸೇವೆ) ಕ್ಯಾತ ಗಾಯಕಿ ಶ್ರೀಮತಿ ಅರ್ಚನಾ ಉಡುಪ, ಹೆಸರಾಂತ ಕ್ರೀಡಾಪಟು ಶ್ರೀಮತಿ ಮಾಲತಿ ಹೊಳ್ಳ, ಶಿಕ್ಷಣತಜ್ಞೆ ಡಾ. ರಾಗಿಣಿ ನಾರಾಯ, ಹೆಸರಾಂತ ಗಮಕ ಕಲಾವಿದೆ ವಿದೂಷಿ ಶ್ರೀಮತಿ ಗಂಗಮ್ಮ ಕೇಶವಮೂರ್ತಿ, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ. ವಿ.ಶುಭ, ಜ್ಯೋತಿಷಿ ಡಾ. ಕೆ.ಎಸ್. ಶಾರದಾಮಣಿ , ವಾಣಿಜ್ಯೋದ್ಯಮಿ ಪ್ರಿಯ ಪುರಾಣಿಕ್, ಸಾಹಿತಿ ಶ್ರೀಮತಿ ಕೆ.ಆರ್. ಜಯಶ್ರೀ, ಕೃಷಿ ತಜ್ಞೆ ಶ್ರೀಮತಿ ಶೈಲಜಾ ವಿಠಲ್, ನೃತ್ಯ ಕಲಾವಿದೆ ಶ್ರೀಮತಿ ವಿದ್ಯಾರವಿಶಂಕರ್ ರಂಗಕರ್ಮಿ ವೀಣಾ ಆಠಾವಳೆಯವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದೂ ರೂಪಾ ಶಾಸ್ತ್ರಿ ವಿವರಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಶ್ರೀಮತಿ ಮೇಧಿನಿ ಉದಯ್ ಗರುಡಾಚಾರ್ ಮಾತನಾಡಿ ಮಹಿಳೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ತನ್ನ ಬದುಕನ್ನು ಸೀಮಿತಗೊಳಿಸಿಕೊಳ್ಳದೇ ಸಮಾಜಮುಖಿಯಾಗಿ ಪಾಲ್ಗೊಳ್ಳಬೇಕು ಆ ನಿಟ್ಟಿನಲ್ಲಿ ಬ್ರಾಹ್ಮಣ ಮಹಾ ಸಭಾದ ಮಹಿಳಾ ಘಟಕ ಸಾಂಕೇತಿಕವಾಗಿ ಈ ಬೈಕ್ ರ್ಯಾಲಿಯನ್ನು ಸಂಘಟಿಸಿದ್ದು ಎಲ್ಲ ವಿಪ್ರ ಮಹಿಳೆಯರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದೂ ಮನವಿ ಮಾಡಿದರು.ಪತ್ರಿಕಾ ಗೋಷ್ಠಿಯಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಸಿ.ಕೆ.ರಾಮಮೂರ್ತಿ ಹಾಜರಿದ್ದು ಮಾತನಾಡಿದರು.
