ಬೆಂಗಳೂರು : ರೋಲರ್ ಸ್ಕೇಟಿಂಗ್ ಮೂಲಕ ಕಾರ್ಮಿಕ ಇಲಾಖೆಯ ಯೋಜನೆಗಳ ಬಗ್ಗೆ ಜಾಗೃತಿ ಅಭಿಯಾನದ ಸ್ಕೇಟಿಂಗ್ ಮೂಲಕ ಕಾರವಾರದಿಂದ ಬೆಂಗಳೂರಿಗೆ ಆಗಮಿಸಿದ ಮಕ್ಕಳನ್ನು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಹಾಗೂ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಸ್ವಾಗತಿಸಿದರು. ಸುಮಾರು 63 ಮಕ್ಕಳು ಕಾರವಾರದಿಂದ 620 ಕಿಲೋಮೀಟರ್ ಸ್ಕೇಟಿಂಗ್ ಮೂಲಕ ಬೆಂಗಳೂರು ತಲುಪಿದರು. ಅವರನ್ನು ವಿಧಾನಸೌಧದ ಮುಂಭಾಗದಲ್ಲಿ ಸ್ವಾಗತಿಸಿದ ಸಚಿವದ್ವಯರು, ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.

ಇದೇ ವೇಳೆ ಸ್ಕೀಯಿಂಗ್‌ನಲ್ಲಿ ಸಾಧನೆ ಮಾಡಿದ ಭವಾನಿ ತೆಕ್ಕಣ್ಣ ನಂಜುಂಡ ಅವರನ್ನು ಸಚಿವ ಡಾ.ನಾರಾಯಣಗೌಡ ಅವರು ಸನ್ಮಾನಿಸಿ, ಗೌರವಿಸಿದರು. ಭವಾನಿ ತೆಕ್ಕಣ್ಣ ನಂಜುಂಡ ಅವರು ಜಮ್ಮುಕಾಶ್ಮೀರದಲ್ಲಿ ನಡೆದ ಸ್ಕೀಯಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡು 1 ಚಿನ್ನ, 5 ಬೆಳ್ಳಿ, 1 ಕಂಚಿನ ಪದಕ ಗಳಿಸಿ ಸಾಧನೆ ಮಾಡಿದ್ದರು. ಏಷ್ಯನ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿರುವ ಭವಾನಿ, ಇಟಲಿಯಲ್ಲಿ ನಡೆಯಲಿರುವ ವಿಂಟರ್ ಒಲಿಂಪಿಕ್ಸ್ ಗೆ ಆಯ್ಕೆಯಾಗುವ ನಿರೀಕ್ಷೆ ಇದೆ.

ಭವಾನಿಯವರ ಸಾಧನೆಯನ್ನು ಗುರುತಿಸಿದ್ದ ಸಚಿವ ಡಾ.ನಾರಾಯಣಗೌಡ ಅವರು, ಭವಾನಿಯವರ ತರಬೇತಿಗೆ ಅನುಕೂಲವಾಗಲಿ ಎಂದು ರಾಜ್ಯ ಸರ್ಕಾರದಿಂದ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಿ ಆತ್ಮಸ್ಥೈರ್ಯ ತುಂಬಿದ್ದರು.
