ದೇವನಹಳ್ಳಿ: ಕರ್ನಾಟಕ ರತ್ನ, ಕರುನಾಡ ಕಂದ, ದೊಡ್ಮನೆ ಹುಡುಗ ಪುನೀತ್ ರಾಜ್‍ಕುಮಾರ್ ರವರ ಅಕಾಲಿಕ ಮರಣ ಕಾಲಿವುಡ್, ಸ್ಯಾಂಡಲ್ ವುಡ್, ಬಾಲಿವುಡ್ ಗಣ್ಯರು ಕಂಬನಿ ಮಿಡಿದಿದ್ದಾರೆ, ಅವರ ಆದರ್ಶ ಸೇವಾ ಮನೋಭಾವನೆ ಇಂದಿನ ಯುವ ಪೀಳಿಗೆಗೆ ಪ್ರಸ್ತುತ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ಅಭಿಪ್ರಾಯ ಪಟ್ಟರು.

ದೇವನಹಳ್ಳಿ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಅನ್ನಪೂರ್ಣೇಶ್ವರಿ ಕಟ್ಟಡ ಕಾರ್ಮಿಕರ ಮತ್ತು ಇತರೆ ಕೆಲಸ ಕಾರ್ಮಿಕರ ಸಂಘದ ವತಿಯಿಂದ ಇತ್ತೀಚೆಗೆ ನಮ್ಮನ್ನಗಲಿದ ರಾಜ್ ಕುಟುಂಬದ ಕೊನೆಯ ಕುಡಿ ಪುನೀತ್ ರಾಜ್‍ಕುಮಾರ್ ರವರ ಪುಣ್ಯಸ್ಮರಣೆ ಅಂಗವಾಗಿ ಅವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಪುನೀತ್ ರಾಜ್‍ಕುಮಾರ್ ರವರು ಸಮಾಜಕ್ಕೆ ಅನೇಕ ಕೊಡುಗೆಗಳನ್ನು ಯಾವ ಪ್ರಚಾರವಿಲ್ಲದೇ ನಿಸ್ವಾರ್ಥವಾಗಿ ಮಾಡುತ್ತಿದ್ದರು ಕಲಾಸೇವೆಯ ಜೊತೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು, ಅದೇ ರೀತಿ ಜನಪ್ರತಿನಿಧಿಗಳು, ಕಲಾವಿದರು ಸಮಾಜಕ್ಕಾಗಿ ತಮ್ಮ ಸೇವೆ ಅಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಪುರಸಭಾ ಅಧ್ಯಕ್ಷೆ ರೇಖಾ ವೇಣುಗೋಪಾಲ್ ಸದಸ್ಯರಾದ ರವೀಂದ್ರ, ರಘು, ರುದ್ರೇಶ್,ಗೋಪಿ, ನಾರಾಯಣಸ್ವಾಮಿ,ಅನ್ನಪೂರ್ಣೇಶ್ವರಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಗೋಪಾಲಪ್ಪ ಹಾಗೂ ಜನಪ್ರತಿನಿಧಿಗಳು ಸಂಘದ ಪದಾಧಿಕಾರಿಗಳು ಇದ್ದರು.