‘ಏನ್ಷಿಯೆಂಟ್ ಸೀಕ್ರೆಟ್ಸ್ ಟು ರಿವರ್ಸ್ ಡಯಾಬಿಟೀಸ್’ ಕೃತಿ ಬಿಡುಗಡೆ

ಬೆಂಗಳೂರು, ಫೆ.5: ಮಧುಮೇಹ ನಿವಾರಣೆಗಾಗಿ ಪ್ರಾಚೀನ ಆಯುರ್ವೇದ ಚಿಕಿತ್ಸಾ ಪದ್ಧತಿಯ ಅಂಶಗಳನ್ನು ಒಳಗೊಂಡಿರುವ ಮಹತ್ವದ ಕೃತಿಯೊಂದನ್ನು ಹೊರತರಲಾಗಿದೆ. ಖ್ಯಾತ ಆಯುರ್ವೇದ ತಜ್ಞ ಡಾ. ಮೃತ್ಯುಂಜಯ ಸ್ವಾಮಿ ಅವರು ಬರೆದಿರುವ ‘ಏನ್ಷಿಯೆಂಟ್ ಸೀಕ್ರೆಟ್ಸ್ ಟು ರಿವರ್ಸ್ ಡಯಾಬಿಟೀಸ್’ ಕೃತಿ ಇದಾಗಿದ್ದು, ಈ ಕೃತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಬಿಡುಗಡೆ ಮಾಡಿದರು. ಮಧುಮೇಹ ರೋಗಕ್ಕೆ ತುತ್ತಾಗಿರುವವರು, ಪ್ರಿ ಡಯಾಬಿಟಿಕ್‌ ಹಾಗೂ ಇನ್ಸುಲಿನ್‌ ಚಿಕಿತ್ಸೆಯಲ್ಲಿರುವವರಿಗೆ ಹೇಗೆ ಮಧುಮೇಹವನ್ನು ನಿವಾರಿಸಬಹುದು ಎನ್ನುವ ಅತ್ಯಂತ ಮಹತ್ವದ ಸಂಗತಿಗಳು ಈ ಕೃತಿಯಲ್ಲಿ ಅಡಗಿವೆ.

ಕೃತಿಯ ಲೇಖಕ ಡಾ. ಮೃತ್ಯುಂಜಯ ಸ್ವಾಮಿ ಮಾತನಾಡಿ, ‘ಭಾರತ ದೇಶ ಮಧುಮೇಹದ ರಾಜಧಾನಿಯಾಗುವತ್ತ ದಾಪುಗಾಲು ಹಾಕುತ್ತಿದೆ. ಬದಲಾದ ಜೀವನಶೈಲಿಯಿಂದ ಬರುವ ಪ್ರಮುಖ ರೋಗಗಳಲ್ಲಿ ಮಧುಮೇಹ ಕೂಡ ಒಂದು. ಈ ರೋಗಕ್ಕೆ ತುತ್ತಾಗುವವರು ತಾವು ಸಾಯುವವರೆಗೂ
ಮಾತ್ರೆಗಳನ್ನು ನುಂಗುತ್ತಲೇ ಇರಬೇಕು ಎನ್ನುವ ಸ್ಥಿತಿಯಾಗಿದೆ. ಆಧುನಿಕ ವೈದ್ಯಶಾಸ್ತ್ರದ ಪ್ರಕಾರ ಮಧುಮೇಹವನ್ನು ನಿವಾರಿಸಲು ಸಾಧ್ಯವಿಲ್ಲ. ಕೇವಲ ಅದನ್ನು ನಿಭಾಯಿಸಲು ಮಾತ್ರ ಸಾಧ್ಯ ಎನ್ನುವ ಮಾತುಗಳು ಜನಜನಿತ. ಆದರೆ, ನಮ್ಮ ಪಾರಂಪರಿಕ ಔಷಧ ಪದ್ಧತಿಯಲ್ಲಿ ಮಧುಮೇಹ ರೋಗವನ್ನು ಕೇವಲ ನಿಭಾಯಿಸುವುದಷ್ಟೇ ಅಲ್ಲ ದೇಹವನ್ನು ಮಧುಮೇಹದಿಂದ ಮುಕ್ತಗೊಳಿಸಹುದು ಎನ್ನುವ ಅಂಶಗಳು ಅಡಕವಾಗಿವೆ. ಆ ಅಂಶಗಳ ಆಧಾರದಲ್ಲಿ ಪುಸ್ತಕವನ್ನು ಬರೆಯಲಾಗಿದೆ’ ಎಂದರು.

ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ ಹರಿಹರ ವೀರಶೈವ ಲಿಂಗಾಯಿತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧೀಕಾರಿ ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಸ್ವಾಮೀಜಿ ಅವರು ಮಾತನಾಡಿ, ಜೀವನಶೈಲಿ ರೋಗಗಳು ನಮ್ಮ ಯುವ ಜನಾಂಗದ ಬಹುಭಾಗದ ಜನರನ್ನು ಅನಾರೋಗ್ಯಕ್ಕೀಡು ಮಾಡುತ್ತಿವೆ. ಇದರಲ್ಲಿ ಹೆಚ್ಚು ಸಮಸ್ಯೆ ಉಂಟುಮಾಡುತ್ತಿರುವುದು ಮಧುಮೇಹ. ಈ ರೋಗಕ್ಕೆ ತುತ್ತಾಗಿರುವವರು ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಲ್ಲಿ ಅನೇಕ ಅನುಕೂಲಗಳನ್ನು ನಾವು ಯೋಗಭ್ಯಾಸದಲ್ಲಿ ಕಂಡಿದ್ದೇವೆ. ಈ ಪುಸ್ತಕದಲ್ಲಿ ಅಳವಡಿಸಿರುವಂತಹ ಪ್ರಾಚೀನ ಆರೋಗ್ಯ ಪದ್ದತಿಗಳ ಅಂಶಗಳು ಹಾಗೂ ಯೋಗಭ್ಯಾಸದಂತಹ ಅಳವಡಿಕೆಗಳು ಬಹಳ ಉಪಯೋಗ. ಸ್ವತಃ ಆಯುರ್ವೇದ ವೈದ್ಯರಾಗಿರುವ ಡಾ. ಮೃತ್ಯುಂಜಯ ಅವರು ತಮ್ಮ ಪುಸ್ತಕದಲ್ಲಿ ತಾವು ಆಳವಾಗಿ ಆಧ್ಯಯನ ಮಾಡಿದ ಅಂಶಗಳನ್ನು ನಮೂದಿಸಿದ್ದಾರೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಯುವ ಬ್ರಿಗೇಡ್ ಸಂಸ್ಥೆಯ ಚಕ್ರವರ್ತಿ ಸೂಲಿಬೆಲೆ ಮತ್ತಿತರರು ಉಪಸ್ಥಿತರಿದ್ದರು.

ಅತಿ ಹೆಚ್ಚು ಮಾರಾಟವಾಗುತ್ತಿರುವ ಕೃತಿ: ಡಾ. ಮೃತ್ಯುಂಜಯ ಸ್ವಾಮಿ ಅವರ ಮೊದಲ ಪುಸ್ತಕ ‘ಏನ್ಷಿಯೆಂಟ್ ಸೀಕ್ರೆಟ್ ಆಫ್ ಹೆಲ್ದಿ ಲಿವಿಂಗ್’ ಕೃತಿಯು ಆಮೆಜಾನ್‌ನಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕೃತಿಗಳಲ್ಲಿ ಒಂದಾಗಿದೆ. ಈ ಪುಸ್ತಕದಲ್ಲಿ ಮಧುಮೇಹವನ್ನು ನಿವಾರಿಸುವುದು, ಅದನ್ನು ಸುಲಭ ವಿಧಾನದಲ್ಲಿ ನಿಭಾಯಿಸುವುದು. ಹಾಗೆಯೇ ಅದಕ್ಕೆ ಬೇಕಾದ ಆಹಾರ ಪದ್ಧತಿ ಜೀವನ ಶೈಯಲ್ಲಿ ಆಗಬೇಕಾದ ಮಾರ್ಪಾಡು ಹೀಗೆ ಹತ್ತು ಹಲವು ಅಂಶಗಳನ್ನು ವಿಸ್ತೃತವಾಗಿ ಚರ್ಚಿಸಲಾಗಿದೆ.

Leave a Comment

Your email address will not be published. Required fields are marked *

Translate »
Scroll to Top