ಸಂಕಷ್ಟದ ವರ್ಷಗಳಲ್ಲಿ ಮೇಕೆದಾಟು ಯೋಜನೆ ಅನುಕೂಲ : ಬಸವರಾಜ ಬೊಮ್ಮಾಯಿ

ಬೆಳಗಾವಿ: ಕಾವೇರಿ ಕಣಿವೆಯಲ್ಲಿ ಸಂಕಷ್ಟದ ವರ್ಷಗಳಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಮೇಕೆದಾಟು ಯೋಜನೆಯನ್ನು ಕಲ್ಪಿಸಿ ಯೋಜಿಸಿ ಅನುಷ್ಟಾನಗೊಳಿಸುವತ್ತ ದಾಪುಗಾಲನ್ನು ಇಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಇಂದು ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಜಲಸಂಪನ್ಮೂಲ ಸಚಿವರಾದ ಗೋವಿಂದ ಎಂ ಕಾರಜೋಳ ರವರಿಗೆ ಹೊಸಕೋಟೆ ಶಾಸಕರಾದ ಶರತ್ ಬಚ್ಚೇಗೌಡ ರವರು ಕೇಳಿದ ಪ್ರಶ್ನೆಗೆ ಉತ್ತರ ನೀಡುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ಮಾತನಾಡಿದರು. ಹೆಚ್ಚುವರಿ ನೀರು ಲಭ್ಯತೆಯ ವರ್ಷಗಳಲ್ಲಿ ಆ ನೀರನ್ನು ಹಿಡಿದಿಟ್ಟುಕೊಂಡು ಕೊರತೆ ಸಂದರ್ಭದಲ್ಲಿ ಬಳಸಿಕೊಳ್ಳುವ ತನ್ಮೂಲಕ ಎರಡೂ ರಾಜ್ಯಗಳಿಗೂ ಸಂಕಷ್ಟದ ಸಂದರ್ಭದಲ್ಲಿ ಅನುಕೂಲವಾಗುವ ಉದಾತ್ತ ಉದ್ದೇಶವನ್ನು ಹೊಂದಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು. ಕಾವೇರಿ ಜಲ ವಿವಾದ ನ್ಯಾಯಾಧೀಕರಣ ನೀಡಿದ ಐತೀರ್ಪಿನಂತೆ ಎರಡೂ ರಾಜ್ಯಗಳ ಪಾಲಿನ ಹಂಚಿಕೆಯ ವ್ಯಾಪ್ತಿಯೊಳಗೆ ಮೇಕೆದಾಟು ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವರು ಉತ್ತರಿಸಿದರು.

ಅಂತರ್ರಾಜ್ಯ ಜಲವಿವಾದದಂತಹ ಸೂಕ್ಷ್ಮ, ಗಂಭೀರ ಮತ್ತು ದೂರಗಾಮಿ ಪರಿಣಾಮ ಬೀರುವ ಮತ್ತು ನ್ಯಾಯಾಲಯಗಳಲ್ಲಿ ವಿಚಾರಣೆ ವ್ಯಾಪ್ತಿಯಲ್ಲಿರುವ ಪ್ರಶ್ನೆಗಳಿಗೆ ಸಂಬಂಧಪಟ್ಟಂತೆ ಎಚ್ಚರಿಕೆ ವಹಿಸಬೇಕಾಗಿದ್ದರಿಂದ ಈ ಯೋಜನೆಯನ್ನು ಅನುಷ್ಟಾನಗೊಳಿಸಲು ಸರ್ಕಾರ ಮಾಡಿರುವ ಎಲ್ಲಾ ಪ್ರಯತ್ನಗಳನ್ನು ಶಾಸಕರಿಗೆ ತಮ್ಮ ಕಛೇರಿಯಲ್ಲಿ ವೈಯಕ್ತಿಕಗಾಗಿ ವಿವರಗಳನ್ನು ಒದಗಿಸುವುದಾಗಿ ಸಚಿವರು ತಿಳಿಸಿದರು. ತಮಿಳುನಾಡಿನ ಹಸಿರು ಪೀಠ ನೀಡಿದ್ದ ತಡೆಯಾಜ್ಞೆಯನ್ನು ದೆಹಲಿ ಹಸಿರು ಪೀಠ ತೆರವುಗಳಿಸಿದೆ. ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಹೆಚ್ಚಿನ ವಿವರಗಳನ್ನು ಶಾಸಕರಿಗೆ ಒದಗಿಸುವದಾಗಿ ವಿವರಿಸಿದರು.

Leave a Comment

Your email address will not be published. Required fields are marked *

Translate »
Scroll to Top