ಬಳ್ಳಾರಿ: ಬಳ್ಳಾರಿ ನಗರದ ಇಂದಿರಾ ಸರ್ಕಲ್ (ಸಂಗಮ್ ಸರ್ಕಲ್) ನಿಂದ ಹಜರತ್ ಜಾನಿ ಮಗ್ದುಮ್ ದರ್ಗಾ ಮಂಭಾಗದ ರಸ್ತೆಯನ್ನು ಅಗಲೀಕರಣಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ ನಗರದ ಗಡಿಗಿ ಚನ್ನಪ್ಪ ಸರ್ಕಲ್, ನಗರೂರು ನಾರಾಯಣರಾವ್ ಪಾರ್ಕ್, ಪಾರ್ಕ್ ಬಳಿಯ ಕಾಟೇಗುಡ್ಡ ಹಾಗೂ ಇಂದಿರಾ ಸರ್ಕಲ್ (ಸಂಗಮ್ ಸರ್ಕಲ್) ರಸ್ತೆಯನ್ನು ಪರಿಶೀಲಿಸಿದರು.
ಇಂದಿರಾ ಸರ್ಕಲ್ ನಿಂದ ಸಿಂದಗಿ ಕಂಪೌಂಡ್ (ಕೆಸಿ ರಸ್ತೆ ಸರ್ಕಲ್) ರಸ್ತೆಯವರೆಗೆ ರಸ್ತೆ ಅಗಲೀಕರಣಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸ್ಥಳದಲ್ಲೇ ಹಾಜರಿದ್ದ ಪಾಲಿಕೆಯ ಆಯುಕ್ತ ಖಲೀಲಸಾಬ ಅವರಿಗೆ ಸೂಚಿಸಿದರು.
ಈ ವೇಳೆ ರಸ್ತೆಯಲ್ಲಿ ಸಂಚರಿಸುವ ವೇಳೆ ಬೀದಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯೊಬ್ಬರು ಶಾಸಕರ ಖುಶಲೋಪರಿ ವಿಚಾರಿಸಿ, ಕರಬೂಜ ಹಣ್ಣನ್ನು ಶಾಸಕರಿಗೆ ನೀಡಿದ ಘಟನೆ ನಡೆಯಿತು.
ಗಡಿಗಿ ಚನ್ನಪ್ಪ ವೃತ್ತದ ಕಾಮಗಾರಿ ಹಾಗೂ ಒತ್ತುವರಿ ತೆರವಾಗಿರುವ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರ ಆರಂಭಿಸುವಂತೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಇಂದಿರಾ ಸರ್ಕಲ್ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಗುತ್ತಿಗೆದಾರರಿಂದ ಮಾಹಿತಿ ಪಡೆದರು.
ಈ ಸಂದರ್ಭ ಪಾಲಿಕೆಯ ಸದಸ್ಯರಾದ ನೂರ್ ಮೊಹಮ್ಮದ್, ಎಂ.ಪ್ರಭಂಜನಕುಮಾರ್, ರಾಮಾಂಜನೇಯ, ವಿ.ಶ್ರೀನಿವಾಸುಲು (ಮಿಂಚು), ಕಾಂಗ್ರೆಸ್ ಮುಖಂಡರಾದ ಬಿಆರೆಲ್ ಸೀನಾ, ಹಗರಿ ಗೋವಿಂದ, ಚಾನಾಳ್ ಶೇಖರ್, ನಾರಾಯಣ ರೆಡ್ಡಿ, ಹರ್ಷದ್, ಶಿವು, ಟಿಲ್ಲು, ಶ್ರೀಧರಬಾಬು, ಮಂಜು, ಧರ್ಮಶ್ರೀ, ಅಶೋಕ ರೆಡ್ಡಿ ಮೊದಲಾದವರು ಹಾಜರಿದ್ದರು.