ಬೆಂಗಳೂರು: ಕಲ್ಲು ಗಣಿಗಾರಿಕೆಗೆ ಕಂದಾಯ ಇಲಾಖೆ ಡ್ರೋಣ್ ಸರ್ವೆ ನಡೆಸಲು ಒಪ್ಪುತ್ತಿಲ್ಲವಾದ ಕೂಡಲೇ ಇದನ್ನು ರದ್ದುಪಡಿಸಬೇಕು. ಫಾರಂ ಸಿ ಇದ್ದಲ್ಲಿ ಇ ಹರಾಜು ಇಲ್ಲದೇ ಗುತ್ತಿಗೆ ನೀಡುವುದು ಸೇರದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜನ್ ಅವರನ್ನು ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಒತ್ತಾಯಿಸಿದೆ.
ಈ ಕುರಿತು ನಗರದ ಮೌರ್ಯ ಹೋಟೆಲ್ ನಡೆದ ಸಭೆಯ ನಂತರ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು. ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಸಂಘ ಎಚ್ಚರಿಕೆ ನೀಡಿದೆ.
ಅಧ್ಯಕ್ಷರಾದ ಡಿ.ಸಿದ್ದರಾಜು ಮಾತನಾಡಿ ಕೆಎಂಎಂಸಿಆರ್ ನಿಯಮಗಳಡಿ ಕಲ್ಲುಗಣಿಗೆ ವಿಧಿಸಿರುವ 5ಪಟ್ಟು ದಂಡವನ್ನು ತೆಗೆದು ಹಾಕಿ ಹೆಕ್ಟೇರ್ ಗೆ 5ಲಕ್ಷ ರೂಪಾಯಿಗಳವರಗೆ ದಂಡ ವಿಧಿಸಿ ಖಾಯಂಗೊಳಿಸಬೇಕು. ಅವೈಜ್ಞಾನಿಕವಾಗಿ ಸ್ಟೋನ್ ಕ್ರಷರ್ ನಿಂದ ವಿದ್ಯುತ್ ಬಿಲ್ ಪಡೆಯುವುದನ್ನು ತಕ್ಷಣ ನಿಲ್ಲಸಬೇಕು. ಮೈನರ್ ಮಿನಿರಲ್ ಕಲ್ಲುಗಣಿಗೆ ವಿಧಿಸಿದ ಜಿಯೋ ಫೇಸಿಂಗ್ ವ್ಯವಸ್ಥೆಯನ್ನು ಸಂಪೂರ್ಣ ತೆಗೆದು ಹಾಕಬೇಕು. ಡ್ರೋನ್ ಸರ್ವೆಗೆ ಕಂದಾಯ ಇಲಾಖೆ ಒಪ್ಪುತ್ತಿಲ್ಲವಾದ ಕಾರಣ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಲ್ಲುಗಣಿಗೆ ಜಿಲ್ಲಾ ಕೇಂದ್ರಗಳಲ್ಲಿ ಇ.ಸಿ ಪಡೆದವರು, ರಾಜ್ಯ ಕಮಿಟಿಯಲ್ಲಿ ಪುನಃ ಇ.ಸಿ. ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ ಇದು ನಮ್ಮ ತಪ್ಪಲ್ಲ. ಇದನ್ನು ಇಲಾಖೆಯೇ ಸರಿಪಡಿಸಬೇಕು ಎಂದರು.
ಅವಧಿ ಮುಗಿದಿರುವ, ಬಾಕಿ ಉಳಿಸಿಕೊಂಡಿರುವ ಗುತ್ತಿಗೆದಾರರಿಗೆ ಅಸಲಿನ ಜೊತೆಗೆ ಬಡ್ಡಿ ವಿಧಿಸಿದ್ದು, ಇದನ್ನು ತೆಗೆದುಹಾಕಿ ಶೇಕಡ 10% ರಿಂದ 50%ರವರಗೆ ಅಸಲು ಪಾವತಿಸಿಕೊಂಡು ಸಮಸ್ಯೆಗಳನ್ನು ಬಗೆಹರಿಸಬೇಕು. ಗುತ್ತಿಗೆ ನೀಡುವ ಪ್ರಕ್ರಿಯೆಯನ್ನು ವಿಕೇಂದ್ರೀಕರಣಗೊಳಿಸಬೇಕು. ಬೆಂಗಳೂರು ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಮಾಡುವವರ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಕಿರುಕುಳ ತಪ್ಪಿಸಬೇಕು ಎಂದರು. ಸಭೆಯಲ್ಲಿ ಗೌರವಾಧ್ಯಕ್ಷರಾದ ಸಂಜೀವ್ ವಿ.ಹಟ್ಟಿಹೊಳಿ, ಉಪಾಧ್ಯಕ್ಷರುಗಳಾದ ಮನೋಜ್ ಶೆಟ್ಟರ್, ಹೆಚ್.ವಾಗೀಶ್, ವಿರುಪಾಕ್ಷಗೌಡ ಪಾಟೀಲ್, ಪ್ರವೀಣ್ ಬಿ.ಹಿರೇಮಠ್, ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಡಿ.ಆರ್.ಮಹೇಶ್, ಪದಾಧಿಕಾರಿಗಳು ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.