ಕೊಪ್ಪಳ,ಮಾ,16 : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್ ನೀಡಿದ್ದು, ಜಿಲ್ಲೆಯ ಯಲಬುರ್ಗಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಹಾಯಕ ಎಂಜಿನಿಯರ್ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಹಾಯಕ ಎಂಜಿನಿಯರ್ ಗಿರೀಶ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ಇಂದು ಬುಧವಾರ ಬೆಳಗ್ಗೆ ದಾಳಿ ನಡೆಸಿದೆ.

ಕೊಪ್ಪಳ ನಗರದ ಅಗಡಿ ಲೇಔಟ್ ನಲ್ಲಿರುವ ಯಲಬುರ್ಗಾದ ಸಹಾಯಕ ಎಂಜಿನಿಯರ್ ಗಿರೀಶ ಎಂಬುವವರ ನಿವಾಸದ ಮೇಲೆ ಭ್ರಷ್ಟಚಾರ ನಿಗ್ರಹ ದಳ ದಾಳಿ ಮಾಡಿದೆ. ಗಿರೀಶ ಅವರ ಮನೆ, ಕಚೇರಿ ಜತೆಗೆ ಬಾಗಲಕೋಟೆಯ ಮೂರು ಕಡೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಗಿರೀಶ ಅವರ ಮನೆ ಮುಂದಿದ್ದ ಕಾರು ನನ್ನದಲ್ಲ ಎಂದಿದ್ದಾರೆ. ಕಾರು ಮಲ್ಲನಗೌಡ ಎಂಬುವವರ ಹೆಸರಿನಲ್ಲಿ ನೋಂದಣಿ ಇರುವ ಬಗ್ಗೆ ಗೊತ್ತಾಗಿದೆ. ಇದು ಗಿರೀಶರ ಬೇನಾಮಿ ಕಾರು ಇರಬಹುದಾ ಎಂಬ ಅನುಮಾನ ವ್ಯಕ್ತವಾಗಿದೆ. ಕಾರಿನ ಇನ್ಸೂರೆನ್ಸ್ ಕಳೆದ ತಿಂಗಳು ಮುಕ್ತಾಯಗೊಂಡಿದೆ. ಅಧಿಕಾರಿ ಮನೆಯ ಸಿಂಟೆಕ್ಸ್, ನೀರಿನ ಟ್ಯಾಂಕ್ ನ್ನು ಅಧಿಕಾರಿಗಳು ಜಾಲಾಡಿದ್ದು, ಒಂದು ಡೈರಿ ಸಿಕ್ಕಿದ್ದು, ಇನ್ನುಳಿದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.