ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಹಾ ಜನತೆಗೆ 5 ಗ್ಯಾರಂಟಿಗಳನ್ನು ಪ್ರಣಾಳಿಕೆ ಮುಖಾಂತರ ನೀಡಿತ್ತು.ಕಾಂಗ್ರೆಸ್ ಪಕ್ಷ ನೀಡಿದ್ದ ಗ್ಯಾರಂಟಿ ವಾಗ್ದಾನಕ್ಕೆ ಮಹಾಜನತೆಯು ವಿಶ್ವಾಸವಿಟ್ಟು ವಿಧಾನಸಭೆಯಲ್ಲಿ 136 ಸ್ಥಾನಗಳನ್ನು ಕಾಂಗ್ರೆಸ್‌ಗೆ ನೀಡಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತಂದಿದ್ದರಿಂದ ನಮ್ಮ ಸರ್ಕಾರದ ಜವಾಬ್ದಾರಿಯನ್ನು ಇಮ್ಮಡಿಗೊಳಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೆವಾಲ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಸಂಪುಟದಲ್ಲೇ ಐದರಲ್ಲಿ ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸುವ ನಿರ್ಧಾರ ಕೈಗೊಂಡು ಅಧಿಸೂಚನೆ ಹೊರಡಿಸಲಾಯಿತು.
ಶಕ್ತಿ ಯೋಜನೆಯಡಿ 114.54 ಕೋಟಿ ಮಹಿಳೆಯರ ಪ್ರಯಾಣ
ಮೊದಲನೇಯದಾಗಿ ಶಕ್ತಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರತಿ ದಿನ ಸುಮಾರು 60 ರಿಂದ 62 ಲಕ್ಷ ಮಹಿಳೆಯರು ಪ್ರಯಾಣಿಸುವ ಅವಕಾಶ ದೊರಕಿದೆ. ಇದುವರೆಗೆ 114. 54ಕೋಟಿ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ತೆರಳಿದ್ದಾರೆ. ಅದರ ವೆಚ್ಚ 2700 ಕೋಟಿ ರೂ.ಗಳಾಗಿವೆ.
ಗೃಹ ಜ್ಯೋತಿಯಡಿ ಮಾಸಿಕ 800 ಕೋಟಿ ರೂ. ಖರ್ಚು
ಮಾಸಿಕ 200 ಯೂನಿಟ್‌ವರೆಗೆ ವಿದ್ಯುತ್ ಉಪಯೋಗಿಸಿದ ರಾಜ್ಯದ 1 ಕೋಟಿ 60 ಲಕ್ಷ ಕುಟುಂಬಗಳ ಗ್ರಾಹಕರು ಗೃಹ ಜ್ಯೋತಿ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಇದರಿಂದ ತಿಂಗಳಿಗೆ ಸುಮಾರು 800 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗುತ್ತಿದೆ.
ಗೃಹ ಲಕ್ಷ್ಮಿ ಅಡಿ 2300 ಕೋಟಿ ಹಣ ಜಮಾ
ಗೃಹ ಲಕ್ಷ್ಮಿ ಯೋಜನೆಯಲ್ಲಿ ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ. ಜಮಾ ಮಾಡಲಾಗುತ್ತಿದ್ದು, 1 ಕೋಟಿ 16 ಲಕ್ಷ ಮಹಿಳೆಯರ ಖಾತೆಗಳಿಗೆ ಡಿಬಿಟಿ ಮೂಲಕ 2300 ಕೋಟಿ ಹಣ ನೇರವಾಗಿ ಜಮಾ ಆಗುತ್ತಿದೆ .
ಅನ್ನ ಭಾಗ್ಯದಡಿ ಪ್ರತಿ ತಿಂಗಳು 656 ಕೋಟಿ ಹಣ ಜಮಾ
ಅನ್ನ ಭಾಗ್ಯ ಯೋಜನೆಯಲ್ಲಿ ಪ್ರತಿ ತಿಂಗಳು 5 ಕೆಜಿ ಅಕ್ಕಿಯ ಬದಲಾಗಿ, ಪ್ರತಿ ಕೆಜಿಗೆ 34 ರೂ.ನಂತೆ ತಲಾ 170 ರೂ.ಗಳನ್ನು ಜಮಾ ಮಾಡಲಾಗುತ್ತಿದ್ದು, ಇದುವರೆಗೆ 3 ಕೋಟಿ 97 ಲಕ್ಷ ಕುಟುಂಬದ ಸದಸ್ಯರ ಖಾತೆಗಳಿಗೆ ಡಿಬಿಟಿ ಮೂಲಕ ಪ್ರತಿ ತಿಂಗಳು 656 ಕೋಟಿ ಹಣ ಜಮಾ ಆಗುತ್ತಿದೆ.
4 ಗ್ಯಾರಂಟಿ ಯೋಜನೆಗಳಿಂದ 4 ಕೋಟಿ 30 ಲಕ್ಷ ಫಲಾನುಭವಿಗಳಿಗೆ ಲಾಭ
ಪ್ರಸ್ತುತ ವರ್ಷದಲ್ಲಿ ನಮ್ಮ ಎಲ್ಲ 5 ಗ್ಯಾರಂಟಿ ಯೋಜನೆಗಳಿಗೆ ಬೇಕಾದ 38 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಕಾಯ್ದಿರಿಸಿದೆ. ಮುಖ್ಯವಾಗಿ ಈ ನಾಲ್ಕೂ ಪ್ರಮುಖ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ 4 ಕೋಟಿ 30 ಲಕ್ಷ ಫಲಾನುಭವಿಗಳು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
ಈ ಡಿಸೆಂಬರ್ ಕೊನೆಯಲ್ಲಿ ಯುವನಿಧಿಗೆ ನೋಂದಣಿ
ಪ್ರಸ್ತುತ ನಮ್ಮ ಐದನೇ ಗ್ಯಾರಂಟಿಯಾದ ಯುವ ನಿಧಿ ಯೋಜನೆಯನ್ನು ಇದೇ ಡಿಸೆಂಬರ್ ತಿಂಗಳ ಕೊನೆಯಲ್ಲಿ ನಿರುದ್ಯೋಗಿ ಪದವೀಧರ ಮತ್ತು ಐಟಿಐ ಪದವಿ ಪಡೆದವರು ಗೌರವ ಧನ ಪಡೆಯಲು ನೋಂದಣಿ ಪ್ರಕ್ರಿಯೆಯು ಪ್ರಾರಂಭ ಆಗಲಿದೆ. ನಮ್ಮ ಕಾಂಗ್ರೆಸ್ ಪಕ್ಷದ ಐದನೇ ಗ್ಯಾರಂಟಿಯನ್ನು ಸರ್ಕಾರ ವಾಗ್ದಾನದಂತೆ ಜಾರಿಗೊಳಿಸಲಿದೆ.