ದೇವನಹಳ್ಳಿ,: ಎಂ.ಎಸ್. ರಾಮಯ್ಯ ಯೂಥ್ ಫೌಂಡೇಷನ್ ನಿಂದ ದೇವನಹಳ್ಳಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆರೋಗ್ಯ ವಲಯದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಶರನ್ನವರಾತ್ರಿ ಸಂದರ್ಭದಲ್ಲಿ ಗೌರವ ಸಲ್ಲಿಸಲಾಯಿತು.
ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಅವರು ಆಶಾ ಕಾರ್ಯಕರ್ತೆಯರನ್ನು ಗೌರವಿಸಿ ಮಾತನಾಡಿ, ವಿಶೇಷವಾಗಿ ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಮತ್ತೊಬ್ಬರ ಜೀವ ರಕ್ಷಣೆಗಾಗಿ ಸೇವೆ ಸಲ್ಲಿಸಿದ್ದರು. ಕೋರೊನಾ ಸೇನಾನಿಗಳಾಗಿ ಮಂಚೂಣಿಯಲ್ಲಿ ನಿಂತು ಕೋವಿಡ್ ಸಾಂಕ್ರಾಮಿಕದ ಬಗ್ಗೆ ಅರಿವು ಮೂಡಿಸಿದರು. ತುರ್ತುಪರಿಸ್ಥಿತಿ ಮತ್ತು ಶಾಂತಿ ಕಾಲದಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಅನನ್ಯ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಕಷ್ಟದಲ್ಲಿದ್ದವರ ನೋವಿಗೆ ಸ್ಪಂದಿಸಿತ್ತು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಧೈರ್ಯದಿಂದ ಸಲ್ಲಿಸುತ್ತಿದ್ದ ಸೇವೆಯನ್ನು ನಾವೆಲ್ಲರೂ ಕಣ್ಣಾರೆ ಕಂಡಿದ್ದೇವೆ. ಆಶಾ ಕಾರ್ಯಕರ್ತೆಯರು ತಾಯಿಯಾಗಿ, ಸಹೋದರಿಯಾಗಿ, ದಾದಿಯರಾಗಿ ವಾತ್ಸಲ್ಯದಿಂದ ಸೇವೆ ಸಲ್ಲಿಸಿದ್ದು, ಇವರ ಸೇವೆಯನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಹೇಳಿದರು.