ದಸರಾ ಬಹುಭಾಷಾ ಕವಿಗೋಷ್ಠಿ
ಮಂಗಳೂರು : ಕುಂದಕನ್ನಡ, ಕೊರಗ ಭಾಷೆ ಸೇರಿದಂತೆ ಸಣ್ಣ ಭಾಷೆಗಳ ಬೆಳವಣಿಗೆಗೆ ಅಕಾಡೆಮಿಯ ಸ್ಥಾಪನೆ ಅಗತ್ಯವಿದೆ ಎಂದು ಸುಳ್ಯ ಬಂಟಮಲೆ ಅಕಾಡೆಮಿಯ ಅಧ್ಯಕ್ಷ ಎ.ಕೆ.ಹಿಮಕರ ಅವರು ಆಗ್ರಹಿಸಿದ್ದಾರೆ.
ತುಳು ಪರಿಷತ್ ವತಿಯಿಂದ ಮಯೂರಿ ಫೌಂಡೇಶನ್ ಸಹಭಾಗಿತ್ವದಲ್ಲಿ ಮಂಗಳೂರು ಮ್ಯಾಪ್ಸ್ ಕಾಲೇಜಿನಲ್ಲಿ ಆಯೋಜಿಸಲಾದ ಎರಡನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಯಾ ಪ್ರದೇಶದ ಜನರು ತಮ್ಮ ಮಿತಿಯಲ್ಲಿ ತಮ್ಮ ಭಾಷೆಯ ಸಂರಕ್ಷಣೆಗಾಗಿ ಕಾರ್ಯಪ್ರವೃತ್ತರಾಗಬೇಕು , ಇದೇ ವೇಳೆ ನಮ್ಮ ನಡುವೆ ಇರುವ ಸಣ್ಣ ಭಾಷೆಗಳ ಅಭಿವೃದ್ಧಿ, ಬೆಳವಣಿಗೆ ಸಲುವಾಗಿ ಸರಕಾರ ಇಂತಹ ಭಾಷೆಗಳ ಅಕಾಡೆಮಿ ಆರಂಭಿಸಬೇಕು ಎಂದು ಎ.ಕೆ.ಹಿಮಕರ ಒತ್ತಾಯಿಸಿದರು.
ನಮ್ಮ ಎಷ್ಟೋ ಯೋಜನೆಗಳ ದುಡ್ಡು ದುಂದು ವೆಚ್ಚ ಅಥವಾ ಪೋಲಾಗುವುದು ನಮ್ಮ ಕಣ್ಣೆದುರಲ್ಲಿದೆ. ಆದರೆ ಸಣ್ಣ ಭಾಷೆಗಳ ಸಂರಕ್ಷಣೆಗಾಗಿ ಅಕಾಡೆಮಿ ವತಿಯಿಂದ ಬಳಸಲಾಗುವ ಸಣ್ಣ ಪ್ರಮಾಣದ ಅನುದಾನವು ಖಂಡಿತವಾಗಿಯೂ ವ್ಯರ್ಥವಲ್ಲ ಎಂಬುದನ್ನು ನಾವು ಮನಗಾನಬೇಕಾಗಿದೆ ಎಂದು ಎ.ಕೆ.ಹಿಮಕರ ಅಭಿಪ್ರಾಯ ಪಟ್ಟರು.
ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಉಪನ್ಯಾಸಕಿ ಹಾಗೂ ಲೇಖಕಿ ಡಾ.ಮೀನಾಕ್ಷಿ ರಾಮಚಂದ್ರ ಅವರು ಮಾತನಾಡಿ , ತುಳುನಾಡಿನ ಭಾಷಾ ವೈವಿಧ್ಯತೆ ನಮ್ಮ ಪ್ರದೇಶದ ಅನನ್ಯತೆಯಾಗಿದ್ದು , ನಮ್ಮಲ್ಲಿ ಹಲವು ಭಾಷೆಗಳು, ಹಲವು ಧರ್ಮಗಳಿದ್ದರೂ ನಮ್ಮಲ್ಲಿ ಭಾಷಾ ಸಾಮರಸ್ಯದ ಮೂಲಕ ಧರ್ಮ ಸಾಮರಸ್ಯ ನೆಲೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ತುಳುನಾಡಿನ ಹನ್ನೆರಡು ಭಾಷೆ ಹಾಗೂ ಹಿಂದಿ ಸೇರಿದಂತೆ ಒಟ್ಟು ಹದಿಮೂರು ಭಾಷೆಗಳಲ್ಲಿ 22 ಕವಿಗಳು ಕವಿತಾ ವಾಚನ ಮಾಡಿದರು.
ತುಳು, ಕನ್ನಡ, ಬ್ಯಾರಿ, ಅರೆಭಾಷೆ, ಕುಂದ ಕನ್ನಡ, ಹವ್ಯಕ ಕನ್ನಡ , ಶಿವಳ್ಳಿ ತುಳು, ಸ್ಥಾನಿಕ ತುಳು , ಕೊರಗ ಭಾಷೆ, ಜಿ.ಎಸ್. ಬಿ ಕೊಂಕಣಿ , ಕ್ರೈಸ್ತ ಕೊಂಕಣಿ , ಮಳಯಾಲಂ, ಹಿಂದಿ ಭಾಷೆಗಳ ಕವಿಗಳ ಕವಿತೆ ಪ್ರೇಕ್ಷಕರ ಮನಸೊರೆಗೊಂಡಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮ್ಯಾಪ್ಸ್ ಕಾಲೇಜ್ ಅಧ್ಯಕ್ಷ ದಿನೇಶ್ ಆಳ್ವಾ , ಮುಂಬಯಿಯ ಭಾರತ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಮುಂಬಯಿ , ವಿಶ್ರಾಂತ ಪ್ರಾಂಶುಪಾಲ ಡಾ.ಉದಯ ಕುಮಾರ್ ಇರ್ವತ್ತೂರು , ನಿವೃತ್ತ ಪ್ರಾಧ್ಯಾಪಕ ಡಾ.ಶಿವರಾಮ ಶೆಟ್ಟಿ , ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್.ಆರ್ , ಮಹಿಳಾ ಉದ್ಯಮಿ ಕುಸುಮ ದೇವಾಡಿಗ , ಕೊರಗ ಭಾಷೆಯ ಲೇಖಕ ಬಾಬು ಕೊರಗ ಪಾಂಗಾಳ, ಮಯೂರಿ ಫೌಂಡೇಶನ್ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಭಾಗವಹಿಸಿದ್ದರು.
ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರ್ವಹಿಸಿದರು. ತುಳು ಪರಿಷತ್ ಗೌರವ ಅಧ್ಯಕ್ಷ ಡಾ.ಪ್ರಭಾಕರ ನೀರ್ ಮಾರ್ಗ ಸ್ವಾಗತಿಸಿದರು, ಕೋಶಾಧಿಕಾರಿ ಶುಭೋದಯ ಆಳ್ವಾ ವಂದಿಸಿದರು. ಡಾ.ವಾಸುದೇವ ಬೆಳ್ಳೆ, ಬೆನೆಟ್ ಅಮ್ಮನ್ನ, ಜಿನೇಶ್ ಪ್ರಸಾದ್ ಕವಿಗೋಷ್ಠಿ ನಿರ್ವಹಣೆಯಲ್ಲಿ ಸಹಕರಿಸಿದರು.
ಬಹುಭಾಷಾ ಕವಿಗೋಷ್ಠಿಯಲ್ಲಿ 22 ಕವಿಗಳು ಕವಿತೆ ವಾಚಿಸಿದರು.
ಚೆನ್ನಪ್ಪ ಅಳಿಕೆ, ಯಶವಂತ ಬೋಳೂರು, ಸ್ನೇಹಲತಾ ದಿವಾಕರ್ , ಸುಂದರ ಬಾರಡ್ಕ, ಎನ್. ಗಣೇಶ್ ಪ್ರಸಾದ್ ಜೀ , ವಿನೋದ್ ಮೂಡಗದ್ದೆ, ವಿಮಲಾರುಣ, ಬಾಬು ಕೊರಗ ಪಾಂಗಾಳ, ಕೃಷ್ಣ ಡಿ.ಎಸ್. ಶಂಕರನಾರಾಯಣ, ನಾಗರಾಜ ಖಾರ್ವಿ, ಮಂಜುನಾಥ್ ಗುಂಡ್ಮಿ , ಅಕ್ಷತರಾಜ್ ಪೆರ್ಲ , ವಿಜಯಲಕ್ಷ್ಮಿ ಶಾನ್ ಭೋಗ್ , ಸುರೇಶ್ ಅತ್ತೂರ್ , ರವೀಂದ್ರನ್ ಕಾಸರಗೋಡು, ಮರೋಳಿ ಸಬಿತಾ ಕಾಮತ್ , ನವೀನ್ ಪಿರೇರಾ , ರೇಮಂಡ್ ಡಿಕುನ್ಹಾ ತಾಕೋಡೆ , ಹುಸೈನ್ ಕಾಟಿಪಳ್ಳ, ಆಯಿಷಾ ಯು.ಕೆ. ಹಾಗೂ ವಿದ್ಯಾರ್ಥಿ ಕವಿಗಳಾದ ದಿಯಾ , ಕರೀನಾ ಶೆಟ್ಟಿ ಕವಿತೆ ವಾಚಿಸಿದರು.