ಬೆಂಗಳೂರು: ಲೋಡ್ ಶೆಡ್ಡಿಂಗ್ ಪರಿಣಾಮವಾಗಿ ರೈತರ ಬೆಳೆಗಳು ನೀರಿಲ್ಲದೆ ಒಣಗುವ ಪರಿಸ್ಥಿತಿಗೆ ತಲುಪಿದ್ದು, ರೈತರ ಮತ್ತು ಕೃಷಿಕರ ಪಂಪ್ ಸೆಟ್‍ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತರೊಂದಿಗೆ ಸೇರಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಎಚ್ಚರಿಸಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆಯಂತೆ ಸರಿಯಾದ ಪ್ರಮಾಣದಲ್ಲಿ ಮಳೆ ಆಗಿಲ್ಲ. ರಾಜ್ಯದ ಎಲ್ಲ ಕಡೆಗಳಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ. ಜಲಾಶಯಗಳಲ್ಲಿ ಸಹ ನೀರಿನ ಸಂಗ್ರಹ ಪ್ರಮಾಣ ತೃಪ್ತಿಕರವಾಗಿಲ್ಲ. ಬಿತ್ತನೆ ಪ್ರಮಾಣ ಸಹ ಕುಂಠಿತಗೊಂಡಿದೆ. ಇಂತಹ ಸಂದರ್ಭದಲ್ಲಿ ಐಪಿ ಸೆಟ್‍ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದಿದ್ದರೆ ಈಗ ಬಿತ್ತಿರುವ ಶೇ.80ರಷ್ಟು ಬೆಳೆಗಳು ಒಣಗಿ, ರಾಜ್ಯದಲ್ಲಿ ಆಹಾರ ಉತ್ಪನ್ನಗಳ ಮೇಲೆ ದೊಡ್ಡ ಹೊಡೆತ ಬೀಳುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇದರ ಪರಿಣಾಮವಾಗಿ ರೈತರು ಆರ್ಥಿಕವಾಗಿಯೂ ಜರ್ಜರಿತರಾಗುತ್ತಾರೆ. ಹಾಗಾಗಿ ವಿದ್ಯುತ್ ಖರೀದಿಸಿ ಒದಗಿಸಲು ತಕ್ಷಣ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸರ್ಕಾರ ಈಗಾಗಲೇ ಲೋಡ್ ಶೆಡ್ಡಿಂಗ್ ಕುರಿತು ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದೆ. ಒಂದು ಕಡೆ ಅನೇಕ ಘೋಷಣೆಗಳನ್ನು ಕೊಟ್ಟು ಮತ್ತೊಂದು ಕಡೆ ರೈತರನ್ನು ಕೈಬಿಡುವ ಕೆಲಸ ಆಗಬಾರದು. ಈ ಬಗ್ಗೆ ಗಮನ ಹರಿಸದಿದ್ದರೆ ಆಗಸ್ಟ್ ತಿಂಗಳ ಕೊನೆಯವರೆಗೆ ಸರ್ಕಾರದ ನಡೆಯನ್ನು ಗಮನಿಸಿ ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಜ್ಯದ ಎಲ್ಲಾ ವಿದ್ಯುತ್ ಕೇಂದ್ರಗಳ ಮುಂದೆ ಬಿಜೆಪಿ ರೈತ ಮೋರ್ಚಾ ವತಿಯಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಹಾಗೆಯೇ ಬೆಳೆ Àಪರಿಹಾರ ನೀಡಲು ಇರುವ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದರೆ ರೈತರಿಗೆ ಹೆಚ್ಚು ಪರಿಹಾರ ಸಿಗುತ್ತದೆ. ಹಳೆ ಕಾಲದ ಪದ್ಧತಿಯನ್ನೇ ಅನುಸರಿಸುವುದು ಸೂಕ್ತವಲ್ಲ. ಈಗ ಕೃಷಿ ಚಟುವಟಿಕೆ ಬಹಳ ದುಬಾರಿಯಾಗಿದೆ. ಹಾಗಾಗಿ ನಿಯಮಗಳನ್ನು ಬದಲಾಯಿಸುವ ಸಂಬಂಧಿಸಿದ ಸಚಿವರಿಗೆ ಒತ್ತಾಯಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.