ಮೈಸೂರು: ದಲಿತ ಹೋರಾಟಗಾರ, ಚಿಂತಕ, ಬರಹಗಾರ ಮೈಸೂರು ಜಿಲ್ಲೆಯ ಹಾರೋಹಳ್ಳಿ ರವೀಂದ್ರ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ವರುಣದಲ್ಲಿ ರವೀಂದ್ರ ಅವರನ್ನು ಬಂಧಿಸಲಾಗಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಠಾಣೆ ಪೊಲೀಸರು ಅರೆಸ್ಟ್ ಮಾಡಿ ಕರೆದುಕೊಂಡು ಹೋಗುತ್ತಿದ್ದಾರೆಂದು ತಿಳಿದುಬಂದಿದೆ. ಹಳೆಯ ಪೋಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. 2017ರಲ್ಲಿ ಮಾಡಲಾದ ಪೇಸ್‌ಬುಕ್ ಪೋಸ್ಟ್ ಒಂದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ರವೀಂದ್ರ ಅವರು 2019ರಿಂದಲೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಬಂಧಿಸುವಂತೆ ಕೋರ್ಟ್ ಆದೇಶಿಸಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾರೋಹಳ್ಳಿ ರವೀಂದ್ರ ಅವರು ದಲಿತ ಯುವ ಚಿಂತಕರಲ್ಲಿ ಮೈಸೂರು ಭಾಗದ ದಿಟ್ಟ ದನಿ. ದಲಿತರ ವಿಚಾರವಾಗಿ ಅವರು ಸದಾ ದನಿ ಎತ್ತುತ್ತಾ ಕೆಲವು ಪ್ರಕರಣಗಳಲ್ಲಿ ಸಿಲುಕಿದ್ದರು. 2017ರಲ್ಲಿ ಸಂಸದ ಅನಂತ್‌ಕುಮಾರ್ ಹೆಗಡೆ, “ಜಾತ್ಯತೀತರಿಗೆ ಅಪ್ಪ ಅಮ್ಮ ಇಲ್ಲ” ಎಂದು ಹೇಳಿಕೆ ನೀಡಿದ್ದರು. ಹೆಗಡೆ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದವು. ಆಗ ಹಾರೋಹಳ್ಳಿಯವರು ಕಟುವಾಗಿ ಪೋಸ್ಟ್ ಹಾಕಿದ್ದರು. ಹಿಂದೂ ದೇವರುಗಳಿಗೆ ಅಪಮಾನ ಮಾಡಲಾಗಿದೆ ಎಂದು ರವೀಂದ್ರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಚಂದ್ರಶೇಖರ್ ಬಾಪು ಮುಂಡೆ ಎಂಬವರು ಚಿಕ್ಕೋಡಿಯಲ್ಲಿ ದೂರು ದಾಖಲಿಸಿದ್ದರು. ಅದರ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿತ್ತು. “ಸಾಮಾಜಿಕ ಜಾಲತಾಣವಾದ ವಾಟ್ಸ್‌ಅಪ್ ಹಾಗೂ ಫೇಸ್‌ಬುಕ್‌ನಲ್ಲಿ ದಿನಾಂಕ 27-12-2017ರಂದು ಹಿಂದೂ ಧರ್ಮದ ದೇವರಾದ ಶ್ರೀಕೃಷ್ಣನ ಬಗ್ಗೆ ಉದ್ದೇಶಪೂರ್ವಕವಾಗಿ ಅತ್ಯಂತ ಹೀನಾಯವಾಗಿ ಕೀಳು ಅಸಹ್ಯ ಪದಗಳನ್ನು ಬಳಸಿದ್ದಾರೆ. ಮತೀಯ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹರಿಬಿಟ್ಟಿದ್ದಾರೆ” ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿತ್ತು.