ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಸುವರ್ಣಾವಕಾಶವಾಗಿದೆ, ಇದರ ಲಾಭವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮೂಲೆಮೂಲೆಗೂ ಕೊಂಡೊಯ್ಯಬಹುದು. ಈ ವಿಚಾರದಲ್ಲಿ ರಾಜ್ಯವು ಮುಂದಾಳತ್ವ ವಹಿಸಿಕೊಳ್ಳಲು ಸಿದ್ಧವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಇಲ್ಲಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಶುಕ್ರವಾರದಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ನಡೆದ `ರಾಷ್ಟ್ರೀಯ ಶೈಕ್ಷಣಿಕ ಪಠ್ಯಕ್ರಮ ಚೌಕಟ್ಟಿನ (ಎನ್ಸಿಎಫ್) ಕಡ್ಡಾಯ ಮಾರ್ಗದರ್ಶಿ ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದಲ್ಲಿ ಇದುವರೆಗೂ ಅನುಸರಿಸಿಕೊಂಡು ಬರುತ್ತಿದ್ದ 30 ವರ್ಷಗಳಷ್ಟು ಹಿಂದಿನ ಶಿಕ್ಷಣ ನೀತಿಯಲ್ಲಿ ಹತ್ತಾರು ಮಿತಿಗಳಿದ್ದವು. ಆ ನೀತಿಗೆ ದೇಶೀಯ ವಿಧಾನಗಳ ಮೂಲಕ ಕಲಿಕೆಯನ್ನು ಸಾಧ್ಯವಾಗಿಸುವ ಮತ್ತು ಸಮಗ್ರ ವಿಕಾಸದ ಕಲ್ಪನೆಯೇ ಇರಲಿಲ್ಲ. ಆದರೆ, ಐದು ವರ್ಷಗಳ ನಿರಂತರ ಸಮಾಲೋಚನೆ ಮತ್ತು ವಿಚಾರ ವಿನಿಮಯಗಳ ಮೂಲಕ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಪರಿಪೂರ್ಣ ದೃಷ್ಟಿಕೋನವನ್ನು ಹೊಂದಿದೆ ಎಂದು ಅವರು ಪ್ರತಿಪಾದಿಸಿದರು.
ನಮಗೆ ಇಷ್ಟವಿರಲಿ, ಬಿಡಲಿ ನಾವೀಗ ಜಾಗತಿಕ ಸ್ಪರ್ಧೆಯನ್ನು ಎದುರಿಸಲೇಬೇಕಾಗಿದೆ. ಇದನ್ನು ಬಿಟ್ಟು ಬೇರೆ ದಾರಿ ಇಲ್ಲ. ಇದನ್ನು ನಾವು ಆತ್ಮವಿಶ್ವಾಸದಿಂದ ಮಾಡಬೇಕೆಂದರೆ ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಾಧ್ಯವಾಗಲಿದೆ ಎನ್ನುವುದು ಎನ್ಇಪಿಯಿಂದ ದೃಢಪಟ್ಟಿದೆ. ಹಾಗೆಯೇ, ಸಮಾಜದ ಸಮಸ್ಯೆಗಳಿಗೆ ಕೂಡ ಇದು ಸಮರ್ಥ ಪರಿಹಾರವಾಗಿದ್ದು, ಭಾರತವನ್ನು ಜ್ಞಾನದ ರಾಜಧಾನಿಯನ್ನಾಗಿ ಮಾಡುವ ದಾರ್ಶನಿಕತೆಯನ್ನು ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟರು. ಶಿಕ್ಷಣದ ಗುಣಮಟ್ಟದೊಂದಿಗೆ ರಾಜಿ ಸಾಧ್ಯವೇ ಇಲ್ಲ. ರಾಜ್ಯವು ಈ ವಿಷಯದಲ್ಲಿ ಪ್ರಥಮ ಸ್ಥಾನದಲ್ಲಿರಲು ಬಯಸುತ್ತದೆಯೇ ವಿನಾ ಎರಡನೇ ಸ್ಥಾನವನ್ನಲ್ಲ. ಕೇಂದ್ರ ಸರಕಾರವು ಈ ನಿಟ್ಟಿನಲ್ಲಿ ಕೊಡುತ್ತಿರುವ ಒತ್ತು ಮತ್ತು ಬೆಂಬಲ ಎರಡೂ ಅಮೂಲ್ಯವಾಗಿವೆ. ಶೈಕ್ಷಣಿಕ ಸುಧಾರಣೆಯಲ್ಲಿ ರಾಜ್ಯವು ಉಳಿದವರಿಗೆ ಮೇಲ್ಪಂಕ್ತಿಯಾಗಲಿದೆ ಎಂದು ಭರವಸೆ ಕೊಡಲು ಯಾವ ಹಿಂಜರಿಕೆಯೂ ಇಲ್ಲ ಎಂದು ಅವರು ಭರವಸೆ ನೀಡಿದರು. ಎನ್ಇಪಿ ಜಾರಿಗೆ ಬರುತ್ತಿರುವ ಸಮಯದಲ್ಲೇ ನಾನು ಉನ್ನತ ಶಿಕ್ಷಣ ಖಾತೆಯನ್ನು ಮುನ್ನಡೆಸುತ್ತಿರುವುದು ನನ್ನ ಪಾಲಿಗೆ ಚಾರಿತ್ರಿಕವಾಗಿದೆ. ಇಲ್ಲದೆ ಹೋಗಿದ್ದರೆ, ಸಚಿವನಾಗಿದ್ದರೂ ಛಾಪು ಮೂಡಿಸುವಂತಹ ಯಾವೊಂದು ಸುಧಾರಣೆಯನ್ನೂ ಇಲ್ಲಿ ತರಲು ಆಗುತ್ತಿರಲಿಲ್ಲ. ಆದರೆ, ಎನ್ಇಪಿಯಿಂದಾಗಿ ಈಗ ವ್ಯಾಪಕ ಸುಧಾರಣೆಗಳನ್ನು ಮತ್ತು ಸಬಲೀಕರಣವನ್ನು ತರಲಾಗುತ್ತಿದೆ’ ಎಂದು ಅವರು ನುಡಿದರು.
ಎನ್ಇಪಿ ಜಾರಿಗೆ ಉನ್ನತ ಶಿಕ್ಷಣ ವಲಯದಲ್ಲಿ ಈಗಾಗಲೇ ಚಾಲನೆ ನೀಡಲಾಗಿದೆ. ಪಠ್ಯಕ್ರಮ ಬದಲಾವಣೆ, ಉದ್ಯಮಗಳ ಸಹಭಾಗಿತ್ವ, ವಿದೇಶಿ ವಿ.ವಿ.ಗಳೊಂದಿಗೆ ಒಡಂಬಡಿಕೆ, ಹಿಂದುಳಿದ ಸಮುದಾಯಗಳ ಮಕ್ಕಳ ಹೆಚ್ಚಿನ ಪ್ರವೇಶಾತಿ, ಕೌಶಲ್ಯ ಪೂರೈಕೆ ಇತ್ಯಾದಿ ಎಲ್ಲವೂ ಎನ್ಇಪಿಯಿಂದ ಸಾಧ್ಯವಾಗುತ್ತಿದೆ ಎಂದು ಅಶ್ವತ್ಥನಾರಾಯಣ ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಎನ್ಇಪಿ ಸಮಿತಿ ಅಧ್ಯಕ್ಷ ಡಾ.ಕಸ್ತೂರಿರಂಗನ್, ಅನಿತಾ ಕನ್ವರ್, ಡಾ.ದಿನೇಶ್ ಮುಂತಾದವರು ಉಪಸ್ಥಿತರಿದ್ದರು.