ಚಿಕ್ಕಬಳ್ಳಾಪುರ: ಮಾತಿನ ಪಾವಿತ್ರ್ಯತೆ ಉಳಿಸಿಕೊಳ್ಳುವಲ್ಲಿ ಗಂಗಾಮತಸ್ಥರು ಶ್ರೇಷ್ಠರಾಗಿದ್ದು, ಪುರಾಣ ಕಾಲದಿಂದಲೂ ಶ್ರಮದ ಮೂಲಕವೇ ತಮ್ಮ ಬದುಕು ರೂಪಿಸಿಕೊಂಡ ಬೆಸ್ತರ ಸಮಗ್ರ ಅಭಿವೃದ್ಧಿಗಾಗಿ ಅಗತ್ಯ ನೆರವು ನೀಡಲು ಬದ್ಧರಾಗಿರುವುದಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿ, 12, 13 ಮತ್ತು 14ನೇ ಶತಮಾನಗಳು ದಾಸ ಸಾಹಿತ್ಯದ ಪ್ರಮುಖ ಕಾಲ. ಬಸವಣ್ಣನವರ ಅನುಯಾಯಿಯಾಗಿ, ದಾಸ ಸಾಹಿತ್ಯದ ಮೂಲಕ ಸಮಾಜದ ಡೊಂಕು ತಿದ್ದುವ ಕಾರ್ಯ ಮಾಡಿದ ಅಂಬಿಗರ ಚೌಡಯ್ಯನವರ ಕೆಲಸ ಶ್ಲಾಘನೀಯ ಎಂದರು.
ಮಹಿಳಾ ಸಮಾನತೆಗೆ ಶ್ರಮಿಸಿದರು. ದಾಸ ಸಾಹಿತ್ಯದ ಮೂಲಕ ಮಹಿಳಾ ಸಮಾನತೆ ಪ್ರತಿಪಾದಿಸಿದ ಅಂಬಿಗರ ಚೌಡಯ್ಯನವರು. ಅವರದೇ ಆದ ವೈಶಿಷ್ಟ್ಯ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮಾಜದಲ್ಲಿನ ಡೊಂಕುಗಳ ಬಗ್ಗೆ ನಿರ್ಭಯವಾಗಿ ಹೇಳುವ ಮನಸ್ಥತ್ವ ಬೆಳೆಸಿಕೊಳ್ಳಬೇಕು. ಇದನ್ನು 14ನೇ ಶತಮಾನದಲ್ಲಿಯೇ ನಿರ್ಭಯವಾಗಿ ಹೇಳುವ ಮೂಲಕ ವಿಶೇಷತೆ ಮೆರೆದಿದ್ದಾರೆ ಎಂದರು. ಸಮಾಜದಲ್ಲಿ ನಿರಂತರವಾಗಿ ನಡೆಯುವ ಶೇಷಣೆ, ಸಾಮಾಜಿಕ ಪಿಡುಗುಗಳ ವಿರುದ್ಧ ದಾಸ ಸಾಹಿತ್ಯದ ಮೂಲಕವೇ ಖಂಡನೆ ವ್ಯಕ್ತಪಡಿಸುವ ಜೊತೆಗೆ ಸಮಾಜ ಪರಿವರ್ತನೆ ವಿಷಯಗಳನ್ನು ಸಾಹಿತ್ಯದಲ್ಲಿ ಅಡಕ ಮಾಡಿದ್ದಾರೆ. ಇದರಿಂದ ಸಮಾಜದಲ್ಲಿ ನಡೆಯುತ್ತಿದ್ದ ಶೋಷಣೆ ಎಲ್ಲರಿಗೂ ಮುಟ್ಟಲು ಸಹಕಾರಿಯಾಗಿ, ಆ ಮೂಲಕ ಶೋಷಣೆ ತಡೆಗೂ ಸಹಕಾರಿಯಾಗಿದೆ ಎಂದು ಹೇಳಿದರು.
ಇಚ್ಚಾ ಮರಣ ಶಕ್ತಿ ಹೊಂದಿದ್ದ ಭೀಷ್ಮ ಗಂಗಾಮತಸ್ಥ ಸಮುದಾಯಕ್ಕೆ ಸೇರಿದ ಭೀಷ್ಮ ಇಚ್ಛಾ ಮರಣದ ಶಕ್ತಿ ಹೊಂದಿದ್ದ ಮಹಾನ್ ಪುರುಷ, ಮಹಾ ಭಾರತದಲ್ಲಿ ಪ್ರಮುಖ ಪಾತ್ರ ವಹಿಸಿರುವ ಭೀಷ್ಮ ಪಿತಾಮಹ ಎಂದೇ ಖ್ಯಾತಿ ಪಡೆದಿದ್ದಾರೆ. ಇಂತಹ ಭೀಷ್ಮ ಇದೇ ಸಮುದಾಯದವರು ಎಂಬುದು ವಿಶೇಷ. ತಮ್ಮ ಜೀವನದ ಉದ್ದಕ್ಕೂ ಬ್ರಹ್ಮಚರ್ಯ ಪಾಲಿಸಿದ ವ್ಯಕ್ತಿ, ಇಂತಹ ಮಹಾನ್ ಪುರುಷರ ಇತಿಹಾಸವುಳ್ಳ ಸಮುದಾಯ ಎಲ್ಲ ವಿಧದಲ್ಲಿಯೂ ಅಭಿವೃದ್ಧಿಯಾಗಬೇಕು ಎಂದು ಸಲಹೆ ನೀಡಿದರು.
ಅದೇ ಮಹಾಭಾರದಲ್ಲಿ ಸ್ನೇಹಕ್ಕೆ ಮತ್ತೊಂದು ಹೆಸರು ಪಡೆದ ಕರ್ಣನೂ ಬೆಳೆಯುವುದು ಇದೇ ಬೆಸ್ತ ಸಮಾಜದ ಕುಟುಂಬದಲ್ಲಿ. ಎಷ್ಟೇ ಸಂಪತ್ತು ಗಳಿಸಿದರೂ ಸಮಾಜದಲ್ಲಿ ಗೌರವ ಇಲ್ಲದಿದ್ದರೆ ವ್ಯರ್ಥ ಎಂಬುದನ್ನು ಅರಿತಿದ್ದ ಕರ್ಣ ಧುರ್ಯೋಧನನ ಸ್ನೇಹಕ್ಕಾಗಿಯೇ ಕೊನೆಯುಸಿರು ಇರುವವರಿಗೂ ಹೋರಾಡಿದ ಧೀಮಂತ ಎಂದು ಬಣ್ಣಿಸಿದರು. ಶ್ರಮ ಜೀವಿ ಸಮುದಾಯ ಗಂಗಾಮತಸ್ಥ ಸಮುದಾಯ ಶ್ರಮ ಜೀವಿ ಸಮುದಾಯವಾಗಿದೆ. ಕರಾವಳಿ ಪ್ರದೇಶದಲ್ಲಿ ಮೀನು ಹಿಡಿಯುವುದನ್ನು ಪ್ರಮುಖ ಕಸುಬಾಗಿಸಿಕೊಂಡಿರುವ ಈ ಸಮುದಾಯ ಪ್ರತಿನಿತ್ಯ ಸಮುದ್ರಕ್ಕಿಳಿದು, ಸಾವಿನೊಂದಿಗೆ ಚೆಲ್ಲಾಟವಾಡುವ ಸಾಹಸಿ ಸಮುದಾಯವಾಗಿದೆ. ಹಾಗಾಗಿ ಈ ಸಮುದಾಯದ ಧೈರ್ಯ ಅನುಕರಣೀಯವಾಗಿದ್ದು, ಇಂತಹ ಸಮುದಾಯಕ್ಕೆ ವಿಶೇಷ ರಕ್ಷಣೆ ಮತ್ತು ಇವರ ವೃತ್ತಿಗೆ ವಿಶೇಷ ಸೌಲಭ್ಯ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲೂ ಮೀನುಗಾರಿಕೆ ಎಚ್ಎನ್ ವ್ಯಾಲಿ ನೀರಿನಿಂದ ಜಿಲ್ಲೆಯಲ್ಲಿಯೂ ಮೀನುಗಾರಿಕೆಗೆ ಅವಕಾಶ ಲಭಿಸಿದಂತಾಗಿದೆ. ಎಚ್ಎನ್ ವ್ಯಾಲಿ ನೀರು ಜಿಲ್ಲೆಯ ಕೆರೆಗಳಿಗೆ ತುಂಬುತ್ತಿದ್ದು, ಮತ್ತ್ವ ಸಂತತಿ ಜಿಲ್ಲೆಯಲ್ಲಿಯೂ ಹೇರಳವಾಗುತ್ತಿದೆ. ಗಂಗಾಮತಸ್ಥರು ವೃತ್ತಿ ಬದುಕು ಮುಂದುವರಿಸುವ ಕೆಲಸವಾಗಬೇಕು, ಪ್ರಸ್ತುತ ಮೀನುಗಾರಿಕೆ ಉತ್ತಮ ಲಾಭದಾಯಕ ವೃತ್ತಿಯಾಗಿದೆ. ಹಾಗಾಗಿ ತಮ್ಮ ವೃತ್ತಿ ಮುಂದುವರಿಸುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಬಹುದು ಎಂದು ಹೇಳಿದರು. ಸಂಘಕ್ಕೆ ಸರ್ಕಾರಿ ನಿವೇಶನ ಜಿಲ್ಲೆಯ ಹಲವು ತಾಲೂಕುಗಳಿಂದ ಸಮುದಾಯದ ಸಂಘಕ್ಕೆ ನಿವೇಶನದ ಬೇಡಿಕೆ ಬಂದಿದ್ದು, ಜಿಲ್ಲಾ ಕೇಂದ್ರದಲ್ಲಿ ಶೀಘ್ರವೇ ನಿವೇಶನ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲದೆ ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಮುಖ್ಯವಾಗಿದ್ದು, ಮಕ್ಕಳ ಶಿಕ್ಷಣಕ್ಕೆ ಪೋಷಕರು ಹೆಚ್ಚಿನ ಗಮನ ನೀಡಬೇಕಿದೆ ಎಂದರು. ಶಿಕ್ಷಣದಿಂದ ಮಾತ್ರ ವ್ಯಕ್ತಿ ವಿಕಸನ ಸಾಧ್ಯವಾಗಿದ್ದು, ಶಿಕ್ಷಣ ಪ್ರತಿಯೊಬ್ಬರೂ ಪಡೆಯಬೇಕಿದೆ. ಈ ಬಗ್ಗೆ ಸಮಾಜ ಹೆಚ್ಚು ಒತ್ತು ನೀಡಬೇಕಿದೆ ಎಂದು ಹೇಳಿದರು. ಮಾವು ಮಾರಾಟ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ನಗರಸಭೆ ಅಧ್ಯಕ್ಷ ಆನಂದ್ ರೆಡ್ಡಿ, ಜಿಲ್ಲಾ ಬೆಸ್ತರ ಸಂಘದ ಅಧ್ಯಕ್ಷ ಜಯರಾಮ್, ಪದಾಕಾರಿಗಳಾದ ರವಿಕುಮಾರ್, ನಗರಸಭಾ ಸದಸ್ಯರಾದ ಭಾರತೀದೇವಿ, ಸಂತೋಷ್, ನಿವೃತ್ತ ಪ್ರಾಂಶುಪಾಲರಾದ ಬಿ.ವಿ.ಕೃಷ್ಣಪ್ಪ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.