ಬೆಂಗಳೂರು : ಈಗಾಗಲೇ ದೆಹಲಿ, ತಿರುಪತಿಯಲ್ಲಿ ಕರ್ನಾಟಕ ಭವನ ನಿರ್ಮಿಸಿರುವಂತೆ ಕಾಶ್ಮೀರದಲ್ಲೂ ಕರ್ನಾಟಕ ಭವನ ನಿರ್ಮಾಣದ ಅವಶ್ಯಕತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ಜಯನಗರದಲ್ಲಿರುವ ಕಾಶ್ಮೀರ ಭವನದಲ್ಲಿ ಅನಂತಕುಮಾರ್ ಪ್ರತಿಷ್ಠಾನ ಮತ್ತು ಅದಮ್ಯ ಚೇತನದ ವತಿಯಿಂದ ಆಯೋಜಿಸಲಾಗಿದ್ದ ದೇಶ ಮೊದಲು ಸಂವಾದದ “ನಮ್ಮ ಕಾಶ್ಮೀರ- ನಮ್ಮ ಹೊಣೆ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಜಮ್ಮೂ ಕಾಶ್ಮೀರದಲ್ಲಿ ಕರ್ನಾಟಕ ಭವನ ಕಟ್ಟುವುದು ಒಳ್ಳೆಯ ಆಲೋಚನೆ. ಕಟ್ಟಿಸುವ ಅವಶ್ಯಕತೆ ಇದೆ. ದೆಹಲಿಯಲ್ಲಿ ಕರ್ನಾಟಕ ಭವನ ಇದೆ. ಅದೇ ರೀತಿ ಕಾಶ್ಮೀರದಲ್ಲೂ ಕನ್ನಡ ಭವನ ಆಗುತ್ತದೆ. ಧಾರವಾಡದ ನುಗ್ಗಿಕೆರೆಯಲ್ಲಿ ಕಲ್ಲಂಗಡಿ ಹಾಳು ಮಾಡಿದ್ದು ರಾಜ್ಯಾದ್ಯಂತ ದೊಡ್ಡ ಚರ್ಚೆ ಅಐಿತು. ಆದರೆ, ಹುಬ್ಬಳ್ಳಿ ಗಲಭೆಯನ್ನು ಸಕಾಲದಲ್ಲಿ ನಿಯಂತ್ರಿಸದೇ ಹೋಗಿದ್ದರೆ, ಇಡೀ ಊರು ಹೊತ್ತಿ ಉರಿಯುತ್ತಿತ್ತು. ಈ ಬಗ್ಗೆ ಹೆಚ್ಚು ಚರ್ಚೆ ಆಗಲೇ ಇಲ್ಲ. ಆ ಸಮುದಾಯದ ಎಲ್ಲರೂ ಕೆಟ್ಟವರು ಎಂದು ನಾನು ಹೇಳುವುದಿಲ್ಲ. ಕೆಲವು ಮತಾಂಧ ಶಕ್ತಿಗಳ ಕುಮ್ಮಕ್ಕ ಇದರ ಹಿಂದೆ ಇದೆ ಎಂದು ಹೇಳಿದರು.
ಮಠಗಳು ನಮ್ಮ ಧರ್ಮವನ್ನು ಗಟ್ಟಿಯಾಗಿ ಹಿಡಿಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಮನುಕುಲದ ವಿರೋಧಿಗಳು ಹೆಚ್ಚಾಗಿದ್ದಾರೆ. ಪ್ರಾಣಿಗಳನ್ನಲ್ಲ, ಮನುಷ್ಯರನ್ನು ಕಡಿದು ತಿನ್ನುವ ರಾಕ್ಷಸಿ ಭಾವನೆ ಇರುವ ಸಮುದಾಯ ನಮ್ಮ ಮಧ್ಯೆ ಇರುವಾಗ, ನಾವು ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರಬೇಕು. ಬರೀ ಆಸ್ತಿ ವೃದ್ದಿಸಿಕೊಳ್ಳದೆ ಧರ್ಮವನ್ನು ಗಟ್ಟಿಯಾರಿ ಹಿಡಿಯುವ ಕೆಲಸ ಮಠಗಳಿಂದ ಆಗಬೇಕಾಗಿದೆ ಎಂದು ಹೇಳಿದರು. ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಕಾಶ್ಮೀರದಲ್ಲಿ 1900 ರಲ್ಲಿ ನಡೆದ ಘಟನೆ ಇಡೀ ದೇಶವೇ ತಲೆತಗ್ಗಿಸುವಂತಹದ್ದು. ಕಾಶ್ಮೀರ ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಬಹಳಷ್ಟು ಅವಕಾಶಗಳು ಇವೆ. ಪ್ರವಾಸೋದ್ಯಮ ಉದ್ಯೋಗದ ನಿರ್ಮಾಣದ ಅವಕಾಶಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ, ಸಂಕಷ್ಟದಲ್ಲಿರುವ ರಾಜ್ಯವನ್ನ ಅಭಿವೃದ್ದಿಗೊಳಿಸಬೇಕು ಎಂದು ಹೇಳಿದರು.
ಹಿರಿಯ ರಂಗಕರ್ಮಿ ಪ್ರಕಾಶ ಬೆಳವಾಡಿ ಮಾತನಾಡಿ, ಈ ಹಿಂದೆ ರಾಮಕೃಷ್ಣ ಹೆಗಡೆ ಅವರು ಸಿಎಂ ಆಗಿದ್ದಾಗ ರಾಜ್ಯದಲ್ಲಿ ಪಿಯುಸಿ ಪೂರೈಸಿದ ನಂತರ ಯುವಕರಿಗೆ 2 ವರ್ಷ ಮಿಲಿಟರಿ ತರಬೇತಿ ನೀಡಬೇಕು ಎಂದಿದ್ದರು. ರಾಷ್ಟ್ರ ರಕ್ಷಣೆಗಾಗಿ ಈಗ ಪಿಯುಸಿ ಮುಗಿಸಿದ ನಂತರ 2 ವರ್ಷಗಳ ಮಿಲಿಟರಿ ತರಬೇತಿ ಹೆಚ್ಚು ಅವಶ್ಯಕತೆ ಇದೆ ಎಂದರು. ಲೇಖಕಿ ಸಹನಾ ವಿಜಯಕುಮಾರ್ ಮಾತನಾಡಿ, ನಮ್ಮಲ್ಲಿ ಕಟ್ಟುಕತೆಗಳನ್ನು ಹೇಳುವ ಬುದ್ದಿಜೀವಿಗಳನ್ನು ಕಾಶ್ಮೀರದ ಗಡಿಯಲ್ಲಿ ಯಾವುದೇ ಭದ್ರತೆ ನೀಡದೆ ನಿಲ್ಲಿಸಬೇಕು. ಒಂದು ವೇಳೆ ಇದನ್ನು ನಿರಾಕರಿಸಿದರೆ, ಅವರಿಗೆ ಮತದಾನದ ಹಕ್ಕನ್ನು ನೀಡಬಾರದು. ಕಾಶ್ಮೀರದ ಅಭಿವೃದ್ದಿಗೆ ಕೇಂದ್ರ ಸರಕಾರ ನಿರ್ದಿಷ್ಟ ಅವಧಿಯೊಂದಿಗೆ ಕಾರ್ಯಸೂಚಿ ರೂಪಿಸಬೇಕು. ಅಲ್ಲಿ ಹಣ್ಣುಗಳ ಬೆಳಗಾರರ ನೆರವಿಗೆ ಸರಕಾರ ಧಾವಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಈ ಸಂದರ್ಭದಲ್ಲಿ ಅನಂತ ಕುಮಾರ್ ಪ್ರತಿಷ್ಠಾನದ ಅಧ್ಯಕ್ಷರಾದ ಪಿ.ವಿ. ಕೃಷ್ಣ ಭಟ್, ಕಾಶ್ಮೀರಾ ಹಿಂದೂ ಸಾಂಸ್ಕೃತಿಕ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಆರ್.ಕೆ ಮಟ್ಟು ಉಪಸ್ಥಿತರಿದ್ದರು. ಇದೇ ವೇಳೆ ಅನಂತ ಪಥ ಪಾಕ್ಷಿಕ ವನ್ನು ಬಿಡುಗಡೆಗೊಳಿಸಲಾಯಿತು