ದೇವನಹಳ್ಳಿ: ಸರ್ಕಾರದಿಂದ ದೊರೆಯುವ ಅನುದಾನಗಳು ಸಾರ್ವಜನಿಕರಿಗೆ ಹಾಗೂ ರೈತರಿಗೆ ಹೆಚ್ಚು ಅನುಕೂಲವಾಗಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಸಮೀಪದ ಐಬಸಾಪುರ ಗ್ರಾಮದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಈಗಾಗಲೇ 3 ಚೆಕ್ ಡ್ಯಾಂ ಗಳು ಪೂರ್ಣಗೊಂಡಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸುಮಾರು 25 ಕೋಟಿ ಚೆಕ್ ಡ್ಯಾಂ ಮತ್ತು ಕೆರೆ ಅಭಿವೃದ್ಧಿ ಗೆ ಹಣ ಬಿಡುಗಡೆ ಆಗಿತ್ತು. ಈಗಿನ ಸರ್ಕಾರ ಅದನ್ನು ತಡೆ ಹಿಡಿದಿತ್ತು. ಈಗ ಇದರ ಬಗ್ಗೆ ಪ್ರಸ್ತಾಪ ಮಾಡಿದರೆ 2 ಚೆಕ್ ಡ್ಯಾಂ ಗೆ 50 ಲಕ್ಷ ದಂತೆ ಕೇವಲ 1 ಕೋಟಿ ರೂ ಬಿಡುಗಡೆ ಮಾಡಿದ್ದು, ಐಬಸಾಪುರ ಮತ್ತು ಚನ್ನರಾಯಪಟ್ಟಣ ದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲು ಗುದ್ದಲಿ ಪೂಜೆ ನೆರವೇರಿಸಿದ್ದೇವೆ.
31ಲಕ್ಷಕ್ಕೆ ಟೆಂಡರ್ ಆಗಿ, ಗುಣಮಟ್ಟದ ಕಾಮಗಾರಿ ಮಾಡಲು ಸೂಚಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗಿ ನೀರಿನ ಅಂತರ್ಜಲ ಮಟ್ಟವೂ ವೃದ್ಧಿಯಾಗುವ ಸಲುವಾಗಿ ಚೆಕ್ ಡ್ಯಾಂ ನಿರ್ಮಾಣ ಮಾಡಬೇಕಿದೆ. ಇದರ ಜೊತೆಯಲ್ಲಿ ಐಬಸಾಪುರ ಗ್ರಾಮಕ್ಕೆ ಹೊಂದಿಕೊಂಡಂತೆ ಬ್ರಿಡ್ಜ್ ನಿರ್ಮಿಸಿದ್ದು ವಾಹನಗಳು ಓಡಾಡಲು ಅನುಕೂಲ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಸಹಕಾರಿಯಾಗುವ ಯೋಜನೆಗಳನ್ನು ಮಾಡಲಿದ್ದು, ಚೆಕ್ ಡ್ಯಾಂ ನಿಂದ ವ್ಯವಸಾಯಕ್ಕೂ ಅನುಕೂಲವಾಗಲಿದೆ ಎಂದು ತಿಳಿಸಿದರು. ಜೆಡಿಎಸ್ ಹೋಬಳಿ ಅಧ್ಯಕ್ಷ ಮುನಿರಾಜ್, ಗ್ರಾ.ಪಂ. ಅಧ್ಯಕ್ಷ ರಾಮೇಗೌಡ ಹಾಗೂ ಜೆಡಿಎಸ್ ನ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.