ದೇವನಹಳ್ಳಿ: ದೇಶದ ಒಂದೊಂದು ರಾಜ್ಯವು ಕಾಂಗ್ರೆಸ್ ಮುಕ್ತವಾಗುತ್ತಾ ಬರುತ್ತಿದೆ. ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಹೇಳ ಹೆಸರಿಲ್ಲದಂತೆ ಹೋಗುವ ಕಾಲ ಸನ್ನಿಹಿತವಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಬಸವೇಶ್ವರ ಪ್ಯಾಲೇಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್ ಸರಿಯಾದ ನಾಯಕತ್ವವಿಲ್ಲದ ಪಕ್ಷ. ಇಂತಹ ಪಕ್ಷಗಳು ಎಂದೂ ಗಟ್ಟಿಯಾಗಿ ನೆಲೆಯೂರಲು ಸಾಧ್ಯ ವಿಲ್ಲ. ಇಡೀ ದೇಶವನ್ನು ಬಿಜೆಪಿಮಯವನ್ನಾಗಿ ಮಾಡುವ ಪಣವನ್ನು ಎಲ್ಲರೂ ತೊಟ್ಟು ದೇಶದ ಅಭಿವೃದ್ಧಿ ಗಾಗಿ ಕೈಜೋಡಿಸೋಣ ಎಂದು ತಿಳಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಭ್ರಷ್ಟಾಚಾರ ಮುಕ್ತವಾಗಿ ಬಿಜೆಪಿ ಸರ್ಕಾರ ಎಲ್ಲರ ವಿಶ್ವಾಸ ಗಳಿಸಿ ಮುನ್ಮಡೆಯುತ್ತಿದೆ. ಕೃಷಿಕರಿಗೆ, ಮಹಿಳರಯರ ಸಬಲೀಕರಣಕ್ಕೆ ಬಿಜೆಪಿ ಬೆಂಬಲವಾಗಿ ನಿಂತಿರುವ ಬಗ್ಗೆ ಎಲ್ಲರೂ ತಿಳಿದಿದ್ದು, ಬಿಜೆಪಿ ಯೋಜನೆಗಳು ನಾಗರೀಕರ ಪರವಾಗಿದೆ. ಕಾಂಗ್ರೆಸ್ ಈಗಾಗಲೇ ಮುಳುಗುವ ಹಂತಕ್ಕೆ ಬಂದಿದ್ದು, ವಿಧಾನಸಭೆ ಚುನಾವಣೆ ಮುಗಿದ ಮೇಲೆ ಕರ್ನಾಟಕದಲ್ಲಿ ಅಲ್ಲಿ ಇಲ್ಲಿ ಉಸಿರಾಡುತ್ತಿರುವ ಕಾಂಗ್ರೆಸ್ ಸಂಪೂರ್ಣ ನಿರ್ನಾಮವಾಗುವ ಹಂತಕ್ಕೆ ತಲುಪುತ್ತದೆ. ಪ್ರಧಾನಿ ನರೇಂದ್ರ ಮೋದಿ ಅಂತಹ ಹುದ್ದೆಯಲ್ಲಿ ಇದ್ದರೂ ವಿಶ್ರಾಂತಿ ಪಡೆಯದೆ ವರ್ಷದ 365 ದಿನಗಳೂ ಕೆಲಸ ಮಾಡುತ್ತಿದ್ದಾರೆ. ಹಾಗಿರುವಾಗ ಅವರ ಹೆಸರು ಹೇಳಿ ಅವರನ್ನು ನಾಯಕ ಎಂದು ಸ್ವೀಕರಿಸಿರುವ ನಾವು ಮತ್ತಷ್ಟು ಚುರುಕಾಗಿ ಕಾರ್ಯಗತರಾಗಬೇಕು ಎಂದು ತಿಳಿಸಿದರು.
ಆರ್. ಅಶೋಕ್ ಮಾತನಾಡಿ, ಇಂದು ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರಲು ಅನೇಕರು ಸಿದ್ಧರಿದ್ದಾರೆ. ಕೇಂದ್ರದಿಂದ ಅನುಮತಿ ಬರಲು ನಾವು ಕಾಯುತ್ತಿದ್ದು, ಸೇರ್ಪಡೆ ಕಾರ್ಯಕ್ರಮ ಮಾಡುತ್ತೇವೆ. ಕಾಂಗ್ರೆಸ್ ನವರು ತಮ್ಮ ಅಭಿವೃದ್ಧಿ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡುತ್ತಿಲ್ಲ. ಸಿದ್ದರಾಮಯ್ಯ ನೀಡುವ ಹೇಳಿಕೆಗಳು ಹಿಜಾಬು, ಹುಬ್ಬಳ್ಳಿ ಗಲಾಟೆ, ಕೆಜೆ ಹಳ್ಳಿ, ಡಿಜೆ ಹಳ್ಳಿ ಇಷ್ಟೆ ವಿಚಾರಗಳಿಗೆ ಸೀಮಿತವಾಗಿದೆ. ಇನ್ನೊಂದು ಚುನಾವಣೆಯ ನಂತರ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ಮೌನ ವಹಿಸಿ ತೆರೆಮರೆಗೆ ಸರಿಯಬೇಕು. ಜನಕ್ಕೆ ಈಗ ಬೇಕಿರುವುದು ಅಭಿವೃದ್ಧಿ ಮಾಡುವ ಸರ್ಕಾರ. ಅದು ಮೋದಿ ಸರ್ಕಾರ. ವಿದೇಶಗಳಲ್ಲೂ ಅಭಿಮಾನ ಸಂಪಾದನೆ ಮಾಡಿರುವ ಮೋದಿಯವರು, ತನ್ನ ದೇಶದ ಜನರ ಅಭಿವೃದ್ಧಿ ಗೆ ಸಾಕಷ್ಟು ಯೋಜನೆ ರೂಪಿಸಿದ್ದಾರೆ ಎಂದು ತಿಳಿಸಿದರು. ಸಚಿವ ಡಾ. ಕೆ. ಸುಧಾಕರ್ ಮಾತನಾಡಿ, ಡಬಲ್ ಇಂಜಿನ್ ಸರ್ಕಾರದ ಸಾಮರ್ಥ್ಯ ಹಾಗೂ ಯೋಗಿ ಮತ್ತು ಮೋದಿಯವರ ಸಂಯೋಗದ ಎಷ್ಟಿದೆ ಎಂದು ಉತ್ತರ ಪ್ರದೇಶ,ಮಣಿಪುರ, ಉತ್ತರ ಖಾಂಡದ ಜನರಿಗೆ ಅರ್ಥವಾಗಿದೆ. ಮೋದಿಯವರು ನೀಡಿರುವ ಸಂಪೂರ್ಣ ಕಾರ್ಯಕ್ರಮದ ವಿವರ ಎಲ್ಲರೂ ತಿಳಿಯಬೇಕು. ಯಡಿಯೂರಪ್ಪನವರ ಸರ್ಕಾರ ಇದ್ದಾಗ ಕೋವಿಡ್ ಪರಿಸ್ಥಿತಿ ಯನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಿದರು. ಮೋದಿ ಪ್ರಧಾನ ಮಂತ್ರಿ ಯಾಗಿ ಮಾಡಿದ ಯೋಜನೆಗಳನ್ನು ಇಡೀ ವಿಶ್ವವೇ ಬೆರಗಾಗಿ ನೋಡುವಂತಾಗಿದೆ. ರೋಗದಿಂದ ಮಾತ್ರವಲ್ಲದೆ ಹಸಿವಿನಿಂದ ಜನ ಸಾಯುವುದನ್ನು ತಪ್ಪಿಸಿದ್ದು ಮೋದಿಯವರ ಯೋಜನೆ ಎಂದು ತಿಳಿಸಿದರು.
ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಉಪಾಧ್ಯಕ್ಷರಾದ ಮಾಲಿಕಯ್ಯ ಗುತ್ತೇದಾರ್, ಎಂ.ಬಿ ನಂದೀಶ್, ಎಂ. ಶಂಕರಪ್ಪ, ಕೆ.ಎಸ್ ನವೀನ್, ಕೇಶವ ಪ್ರಸಾದ್, ಮಾಜಿ ಶಾಸಕರಾದ ಪಿಳ್ಳಮುನಿಶ್ಯಾಮಪ್ಪ, ಜಿ. ಚಂದ್ರಣ್ಣ, ಜಿಲ್ಲಾ ಘಟಕದ ಅಧ್ಯಕ್ಷ ಎ.ವಿ ನಾರಾಯಣ ಸ್ವಾಮಿ, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಸುಂದರೇಶ್, ನಗರ ಘಟಕದ ಅಧ್ಯಕ್ಷ ಆರ್, ಸಿ ಮಂಜುನಾಥ್, ಕಾರ್ಯದರ್ಶಿ ರವಿಕುಮಾರ್, ರಾಜ್ಯ ಎಸ್.ಸಿ.ಘಟಕದ ಪ್ರಧಾನ ಕಾರ್ಯದರ್ಶಿ ಎ.ಕೆ.ಪಿ.ನಾಗೇಶ್, ಎಎಸ್.ಎಲ್.ಎನ್ ಆಶ್ವಥ್ ನಾರಾಯಣ, ನಗರ ಅಧ್ಯಕ್ಷ ಆರ್.ಸಿ ಮಂಜುನಾಥ್, ಜಿಲ್ಲಾ ಮಾಧ್ಯಮ ವಕ್ತಾರ ಪುಷ್ಪ ಶಿವಶಂಕರ್, ಸಹ ವಕ್ತಾರ ರಮೇಶ್, ಜಿಲ್ಲಾ ಕಾರ್ಯದರ್ಶಿ ಕನಕರಾಜು, ತಾಲೂಕು ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ, ಮುಖಂಡರಾದ ಅಶ್ವತ್ಥಪ್ಪ ಮತ್ತಿತರರು ಉಪಸ್ಥಿತರಿದ್ದರು.