ಸೊರಬ: ಅಭಿನಂದಿಸುವುದು, ಗೌರವಿಸುವುದು, ಪ್ರೋತ್ಸಾಹಿಸುವುದು ಇವೆಲ್ಲ ಮಾನವೀಕ ಮೌಲ್ಯಗಳು. ಹಣದ ಮೌಲ್ಯಕ್ಕಿಂತ ಇಂತಹ ಮೌಲ್ಯಗಳು ಮನುಷ್ಯತ್ವವನ್ನು ಬೆಳೆಸುವ ಜೊತೆಗೆ ಪರಸ್ಪರ ಪ್ರೀತಿ ವಿಶ್ವಾಸವನ್ನು ಗಟ್ಟಿಗೊಳಿಸುತ್ತವೆ ಎಂದು ಸಾಗರ ಶಾಸಕ ಹಾಲಪ್ಪ ತಿಳಿಸಿದರು. ತಾಲ್ಲೂಕು ಚಂದ್ರಗುತ್ತಿ ಹೋಬಳಿ ಅಬಸಿ ಗ್ರಾಮದಲ್ಲಿ ಜೋಷಿಫೌಂಡೇಶನ್ ಮತ್ತು ನಮ್ ಸಮಾಚಾರ ಪಾಕ್ಷಿಕ ಪತ್ರಿಕೆ ಏರ್ಪಡಿಸಿದ್ದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮತ್ತು ಅಬಸಿ ಗ್ರಾಮದ ಆದರ್ಶ, ಅಭಿಮಾನಿ, ಸ್ವಾಭಿಮಾನಿ, ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಿವೃತ್ತ ಪ್ರಾಚಾರ್ಯ ವಿಜಯವಾಮನ್ ಮಾತನಾಡಿ, ಧರ್ಮ ನಿರಾಪೇಕ್ಷ ಸೆಕ್ಯುಲರಿಸಂ ನಮ್ಮ ದೇಶಕ್ಕೆ ಅವಶ್ಯವಿಲ್ಲ, ಧರ್ಮ ನಮ್ಮೊಳಗಿನ ಕಾಂತತ್ವ ಸತ್ವ, ಈ ಸತ್ವವಿಲ್ಲದೆ ನಮ್ಮ ದೇಹ ಮನುಷ್ಯತ್ವದ ಮೌಲ್ಯವನ್ನು ಅರಿಯಲಾರದು. ಮನುಷ್ಯತ್ವವೆ ಮಾನವಧರ್ಮವಾಗಿರುವಲ್ಲಿ ಧರ್ಮವನ್ನೆ ನಂಬಬಾರದು ಎಂದಾದಲ್ಲಿ ಅಂತಹ ಸೆಕ್ಯುಲರಿಸಂ ನಮಗೆ ಏಕೆ ಬೇಕು ಎಂದು ಪ್ರಶ್ನಿಸಿದ ಅವರು, ನಮ್ಮೊಳಗಿನ ಅಂತಃಸತ್ವಕ್ಕೆ ಮಾನ್ಯತೆ ನೀಡಿ ಮನುಷ್ಯಧರ್ಮವನ್ನು ಎತ್ತಿಹಿಡಿಯುವಂತಹ ಸ್ವಭಾವವನ್ನು ನಾವು ವೃದ್ಧಿಗೊಳಿಸೋಣ ಎಂದರು.
ಜೋಷಿ ಫೌಂಡೇಶನ್‌ನ ದಿನೇಶ್ ಜೋಷಿ, ಇಂತಹ ಚಿಕ್ಕಗ್ರಾಮದಲ್ಲಿ ಹುಟ್ಟಿ ಬೆಳೆದ ಬಂದ ನಮಗೆ ನಮ್ಮ ತಂದೆ ಭೌತಿಕ ಆಸ್ತಿಯನ್ನು ನೀಡುವ ಬದಲು ಬೌದ್ಧಿಕ ಆಸ್ತಿಯನ್ನೆ ನಮ್ಮ ಆಸ್ತಿ ಎಂದು ಶಿಕ್ಷಣ ನೀಡಿ ಬೆಳೆಸಿದರು. ಪ್ರತಿಯೊಬ್ಬನ ಬೆಳೆವಣಿಗೆಯಲ್ಲೂ ಕೇವಲ ಕುಟುಂಬವಲ್ಲದೆ ಇಡೀ ಸಮಾಜದ ಸಹಕಾರವಿರುತ್ತದೆ. ಹಣ ಗಳಿಕೆಯ ಒಂದಿಷ್ಟು ಭಾಗ ಇಂತಹ ಸಮಾಜಕ್ಕೆ ನೀಡುವ ಮೂಲಕ ಸಾಮಾಜಿಕ ಋಣಮುಕ್ತವಾಗುವುದು ನಮ್ಮ ಫೌಂಡೇಶನ್ ನ ಗುರಿ, ಧ್ಯೇಯ ಎಂದರು. ಪ್ರಾಸ್ತಾವಿಕ ಮಾತನಾಡಿದ ಸಂಘಟಕ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮ.ಸ.ನಂಜುಂಡಸ್ವಾಮಿ ಜೋಷಿ ಫೌಂಡೇಶನ್ ನ ಕಾರ್ಯ ಸಾಧನೆ ಕುರಿತು ತಿಳಿಸಿದರು. ಈ ವೇಳೆ ಗ್ರಾಮದ ಹಿರಿಯ ಕೆರೆಯಪ್ಪ, ಪ್ರಗತಿಪರ ಕೃಷಿಕ ಕಟ್ಟಿನಕೆರೆ ಸೀತಾರಾಮಯ್ಯ, ನಿವೃತ್ತ ಪ್ರಾಧ್ಯಾಪಕರಾದ ಡಾ.ಶ್ಯಾಮಸುಂದರ್, ರವೀಂದ್ರಭಟ್ ಕುಳಿವೀಡು, ಸಂಶೋದಕ ಶ್ರೀಪಾದ ಬಿಚ್ಚುಗತ್ತಿ, ಎಲೆಕ್ಟ್ರೀಷಿಯನ್ ಪ್ರಕಾಶ್ ಇವರುಗಳನ್ನು ಸನ್ಮಾನಿಸಲಾಯಿತು.
ರಾಸ್ವಸೇ ಸಂಘ ಪ್ರಮುಖ ಹನಿಯ ರವಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರ, ಜೋಷಿಯವರ ಮಾತೃಶ್ರೀ ಲಕ್ಷ್ಮೀಬಾಯಿ ಮತ್ತು ಜೋಷಿ ಪತ್ನಿ ನಂದಿನಿ ಜೋಷಿ, ತಾರಾರವ್, ಎನ್.ಎಲ್.ನರಹರಿರಾವ್, ನಾಗರಾಜ್ ಘೋರೆ, ಬದರಿ, ಮೋಹನ್, ಪ್ರಕಾಶ್‌ಭಟ್, ರಾಜೇಂದ್ರಪೈ ಗ್ರಾಮಸ್ಥರಿದ್ದರು. ನಾರಾಯಣಮೂರ್ತಿ ನಿರೂಪಿಸಿ, ಉಷಾ ಮರಾಠೆ ಪ್ರಾರ್ಥಿಸಿದರು. ೨೨ಕೆ ಎಸ್ ಆರ್ ಬಿ-೫ ಸೊರಬ ತಾಲ್ಲೂಕು ಚಂದ್ರಗುತ್ತಿ ಹೋಬಳಿ ಅಬಸಿ ಗ್ರಾಮದಲ್ಲಿ ಜೋಷಿ ಫೌಂಡೇಶನ್ ವತಿಯಿಂದ ನಡೆದ ವಿವಿಧ ಸಾಧಕರಿಗೆ ಸನ್ಮಾನ ಮತ್ತು ಗೌರವಾರ್ಪಣೆ ಸಮಾರಂಭದ ಉದ್ಘಾಟನೆ