ಮಹಿಳೆಯರು ತಮ್ಮ ಆರೋಗ್ಯ ಸೇವೆಗಳ ಬಗ್ಗೆ ತಿಳಿಯುವುದು ಅತೀ ಮುಖ್ಯ : ನ್ಯಾ. ದೇವೇಂದ್ರ ಪಂಡಿತ್


ಕೊಪ್ಪಳ: ಮಹಿಳೆಯರು ಲಿಂಗಬೇಧ ಬದಿಗೊತ್ತಿ ತಮ್ಮ ಆರೋಗ್ಯ ಸೇವೆಗಳ ಬಗ್ಗೆ ಅರಿಯುವುದು ಅತೀ ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ.ದೇವೇಂದ್ರ ಪಂಡಿತ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಮತ್ತು ಕೆ.ಎಚ್.ಪಿ.ಟಿ ವತಿಯಿಂದ ಹಳೇ ಜಿಲ್ಲಾಸ್ಪತ್ರೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಭವನದಲ್ಲಿ ಮಾರ್ಚ್ ೦೮ ರಂದು ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಹೆಣ್ಣು ಸಮಾಜದ ಕಣ್ಣು ಎಂದು ಹೇಳಲಾಗುತ್ತದೆ. ಅದರಂತೆ ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಎಂದು ಬೇಧ ಮಾಡದೆ ಎಲ್ಲರನ್ನೂ ಸಮಾನತೆಯಿಂದ ಕಾಣಬೇಕು. ಇದರಿಂದ ಸುಸ್ಥಿರ ಸಮಾಜ ನಿರ್ಮಾಣವಾಗುತ್ತದೆ. ಹೆಣ್ಣು ಮಕ್ಕಳ ರಕ್ಷಣೆಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ವಿಶೇಷವಾಗಿ ಶೈಕ್ಷಣಿಕ ಮತ್ತು ಆರ್ಥಿಕ ರಂಗದಲ್ಲಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಹೆಣ್ಣು ಮಕ್ಕಳ ರಕ್ಷಣೆಗಾಗಿ ಕಾನೂನಿನ ಬೆಂಬಲವಿದ್ದು, ನೊಂದ ಮಹಿಳೆಯರು ಕಾನೂನಿನ ರಕ್ಷಣೆ ಪಡೆದು ಮುಂದೆ ಬರಬೇಕು. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಮುಖ್ಯವಾಗಿ ಕ್ಷಯರೋಗದಂತಹ ಮಾರಕ ಖಾಯಿಲೆಗಳ ಬಗ್ಗೆ ತಿಳುವಳಿಕೆ ಪಡೆಯುವುದು ಅತ್ಯವಶ್ಯ. ಕ್ಷಯರೋಗ ಗುಣಲಕ್ಷಣಗಳು ತಮ್ಮ ಮನೆಯ ಸದಸ್ಯರು ಅಥವಾ ಸುತ್ತಮುತ್ತಲಿನ ಜನರಲ್ಲಿ ಕಂಡುಬಂದಲ್ಲಿ ನಿಷ್ಕಾಳಜಿ ಮಾಡದೆ ಪರೀಕ್ಷೆಗೆ ಒಳಪಡಿಸಬೇಕು. ಮಹಿಳೆಯರು ತಮ್ಮ ಆರೋಗ್ಯದೊಂದಿಗೆ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಮತ್ತು ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮಹೇಶ ಎಂ.ಜಿ. ಮಾತನಾಡಿ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹುಳೆಯರಿಗೆ ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸಲು ವಿಶೇಷವಾಗಿ ಸ್ವಸಹಾಯ ಸಂಘದ ಸದಸ್ಯರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಕ್ಷಯರೋಗದ ಲಕ್ಷಣ ಪತ್ತೆ ಹಚ್ಚುವಿಕೆ, ರಕ್ತಹೀನತೆ, ಅಪೌಷ್ಠಿಕತೆ, ಅದರಲ್ಲೂ ಹೆಣ್ಣು ಮಕ್ಕಳು ಕ್ಷಯರೋಗಕ್ಕೆ ತುತ್ತಾಗುವ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಸ್ವಸಹಾಯ ಗುಂಪಿನ ಅಧ್ಯಕ್ಷರು ತಮ್ಮ ಗುಂಪಿನ ಸದಸ್ಯರಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು. ಕ್ಷಯರೋಗದ ಶೀಘ್ರ ಪತ್ತೆ ಮತ್ತು ಸಂಪೂರ್ಣ ಚಿಕಿತ್ಸೆಯ ಬಗ್ಗೆ ತಿಳಿಸಬೇಕು ಎಂದು ಹೇಳಿದ ಅವರು ಜಿಲ್ಲೆಯು ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಕಳೆದ ಮೂರು ವರ್ಷಗಳಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುತ್ತಿರುವುದು ಶ್ಲಾಘನೀಯ, ಇದಕ್ಕೆ ಮುಖ್ಯವಾಗಿ ಕಾರಣರಾದ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಕೆ.ಎಚ್.ಪಿ.ಟಿ ಸ್ವಯಂ ಸೇವಾ ಸಂಸ್ಥೆ ಹಾಗೂ ಸ್ವಸಹಾಯ ಗುಂಪಿನ ಸದಸ್ಯರಿಗೆ ಅಭಿನಂದಿಸಿದರು.
ಕೊಪ್ಪಳ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಮಾಂಜನೇಯ ಹಾಗೂ ನಗರದ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಶೋಭಾ ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಿಎಚ್‌ಇಒ ಶಿವಾನಂದ ಪೂಜಾರ, ಡಿವೈಎಚ್‌ಇಒ ಶ್ರೀಕಾಂತ, ಡಿ.ಪಿ.ಸಿ ಕೆ.ಎಚ್.ಪಿ.ಟಿ ಶರಣಪ್ಪ, ಮಹಿಳಾ ಸಂಘದ ಅಧ್ಯಕ್ಷರಾದ ವಿಶಾಲಾಕ್ಷಿ ಶಾಂಭವಿ, ಜಯಶ್ರೀ ಹಿರೇಮಠ, ನಮ್ರತಾ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದ ಸಿಬ್ಬಂದಿ, ತಾಲ್ಲೂಕು ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತು ಕೆ.ಎಚ್.ಪಿ.ಟಿ ಸಿಬ್ಬಂದಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top