ಕೋವಿಡ್-19 ಸೋಂಕಿನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಪರಿಹಾರ ಧನ ನೀಡಲು ಸೂಚನೆ


ತುಮಕೂರು : ಸೋಂಕಿನಿಂದಾಗಿ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಸರ್ಕಾರದ ಪರಿಹಾರಧನವನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಸೂಚಿಸಿದರು.
ತಮ್ಮ ಕಚೇರಿಯಲ್ಲಿಂದು ಮಕ್ಕಳ ರಕ್ಷಣಾ ಘಟಕಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕೋವಿಡ್-೧೯ನಿಂದ ತಂದೆ-ತಾಯಿಯರಿಬ್ಬರನ್ನೂ ಕಳೆದುಕೊಂಡು ಅನಾಥರಾದ ಮಕ್ಕಳಿಗೆ ವಿಳಂಬ ಮಾಡದೇ ಕೂಡಲೇ ಪರಿಹಾರ ಧನವನ್ನು ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಬಾಲನ್ಯಾಯ ಮಂಡಳಿಯಲ್ಲಿ ೭೨ ಪ್ರಕರಣಗಳು ದಾಖಲಾಗಿದ್ದು, ೧೩ ಪ್ರಕರಣಗಳನ್ನು ಈಗಾಗಲೇ ಇತ್ಯರ್ಥಗೊಳಿಸಲಾಗಿದೆ. ಸಾಕ್ಷಿಗಳ ಗೈರು ಹಾಜರಿ ಹಾಗೂ ಇನ್ನಿತರೆ ಕಾರಣಗಳಿಂದ ೩೧ ಪ್ರಕರಣಗಳು ಬಾಕಿ ಇದ್ದು, ಚಾರ್ಜ್ ಶೀಟ್ ಸಲ್ಲಿಸದ ೨೮ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಲು ಡಿವೈಎಸ್ಪಿ ಶ್ರೀನಿವಾಸ್ ಅವರಿಗೆ ಸೂಚಿಸಿದರು.
ಬಾಲಹಿತೈಷಿ ಯೋಜನೆಯಡಿ ಕೋವಿಡ್/ ಕೋವಿಡೇತರ ಕಾಯಿಲೆಗಳಿಂದ ಮೃತಪಟ್ಟು ತಂದೆ-ತಾಯಿಯರಿಬ್ಬರನ್ನೂ ಕಳೆದುಕೊಂಡ ೭೨ ಮಕ್ಕಳಿಗೆ ಮನೋಸ್ಥೈರ್ಯವನ್ನು ತುಂಬಲು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಧರ್ ಅವರಿಗೆ ಸೂಚಿಸಿದರು.


ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಸಭೆಗೆ ಮಾಹಿತಿ ನೀಡುತ್ತಾ ವಿಶೇ? ಪಾಲನಾ ಯೊಜನೆ, ಪ್ರಾಯೋಜಿತ ಕಾರ್ಯಕ್ರಮ, ಉಪಕಾರ್, ಮುಖ್ಯಮಂತ್ರಿ ಬಾಲಸೇವಾ ಯೋಜನಾ ಕಾರ್ಯಕ್ರಮ ಸೇರಿದಂತೆ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಅನುದಾನವನ್ನು ನೀಡಲಾಗಿದೆ ಎಂದು ತಿಳಿಸಿದರಲ್ಲದೆ, ೨೪೪ ಕೋವಿಡ್/ಕೋವಿಡೇತರ ಭಾದಿತ ಮಕ್ಕಳನ್ನು ಬಾಲಸ್ವರಾಜ್ ಪೋರ್ಟಲ್‌ನಲ್ಲಿ ಅಳವಡಿಸಲಾಗಿದ್ದು, ಪ್ರಾಯೋಜಿತ ಕಾರ್ಯಕ್ರಮದಡಿ ಆರ್ಥಿಕ ಸೌಲಭ್ಯ ಒದಗಿಸಲು ೧೧೫ ಮಕ್ಕಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಸಕ್ತ ಸಾಲಿನ ದತ್ತು ಕಾರ್ಯಕ್ರಮದಡಿ ಸಂಸ್ಥೆಗೆ ದಾಖಲಾಗಿರುವ ೩೬ ಮಕ್ಕಳ ಪೈಕಿ ೧೭ ಮಕ್ಕಳನ್ನು ದತ್ತು ನೀಡಲಾಗಿದ್ದು, ಪ್ರಸ್ತುತ ದತ್ತು ಕೇಂದ್ರದಲ್ಲಿ ೧೯ ಮಕ್ಕಳಿದ್ದು, ಈ ಪೈಕಿ ೧೨ ಮಕ್ಕಳ ದತ್ತು ನೀಡಲು ಅರ್ಹರಿದ್ದಾರೆ ಎಂದು ತಿಳಿಸಿದ ಅವರು ಪೋಕ್ಸೋ ಕಾಯ್ದೆಯಡಿ ೧೯೫ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ೩೪ ಪ್ರಕರಣಗಳಲ್ಲಿ ಖುಲಾಸೆ ಹಾಗೂ ೨ ಪ್ರಕರಣಗಳಲ್ಲಿ ಶಿಕ್ಷೆ ಸೇರಿದಂತೆ ೩೬ ಪ್ರಕರಣಗಳು ಇತ್ಯರ್ಥಗೊಂಡಿವೆ. ಉಳಿದಂತೆ ೧೫೯ ಪ್ರಕರಣಗಳು ಬಾಕಿ ಇರುತ್ತವೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ನಾಗೇಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಡಿಡಿಪಿಐ ಸಿ. ನಂಜಯ್ಯ, ವಿವಿಧ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.

Leave a Comment

Your email address will not be published. Required fields are marked *

Translate »
Scroll to Top