ಬೆಂಗಳೂರು, ಮಾರ್ಚ್ 6: ಸಮಾಜದಲ್ಲಿನ ಮೌಲ್ಯಗಳ ಕುಸಿತಕ್ಕೆ ಸಂಬಂಧಿಸಿದಂತೆ ನಿಷ್ಠುರವಾದ ಉದಾಸೀನತೆಯ ಧೋರಣೆ ನಿವಾರಣೆಯಾಗಬೇಕು ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ವಕೀಲರಿಗೆ ಕರೆ ನೀಡಿದ್ದಾರೆ.ಹೈಕೋರ್ಟ್ ಆವರಣದಲ್ಲಿ ಭಾನುವಾರ ವಕೀಲರ ಸಂಘ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶ್ರೀ ಕಾಗೇರಿ, ಸಮಾಜದಲ್ಲಿ ಮೌಲ್ಯಗಳ ಅಧಃಪತನದಿಂದ ವ್ಯವಸ್ಥೆ ಕುಸಿಯುವ ಅಪಾಯ ನೈಜವಾಗಿದ್ದು, ಈ ಅಪಾಯಕಾರಿ ಪ್ರವೃತ್ತಿಯನ್ನು ತಡೆಯಲು ವಕೀಲರು ಸಕಾರಾತ್ಮಕ ಪಾತ್ರ ನಿರ್ವಹಿಸುವ ಕಾಲ ಬಂದಿದೆ ಎಂದು ತಿಳಿಸಿದರು. “ನೀವು, ವಕೀಲರು ಸದಾ ಸಮಾಜದಲ್ಲಿ ಜನರ ಮಧ್ಯೆ ಇರುತ್ತೀರಿ, ಹೀಗಾಗಿ ನಿಮಗೆ ಘಟನೆಗಳ ಬಗ್ಗೆ ತಿಳಿದಿರುತ್ತದೆ. ವ್ಯವಸ್ಥೆ ಕುಸಿಯದಂತೆ ಕಾಪಾಡಲು ನಾವು ಏನಾದರೂ ಮಾಡಲೇಬೇಕಾದ ಸಮಯ ಇದಾಗಿದೆ, ”ಎಂದೂ ಸ್ಪೀಕರ್ ಹೇಳಿದರು.
ಸಮಾಜದಲ್ಲಿನ ಮೌಲ್ಯಗಳ ಕುಸಿತಕ್ಕೆ ರಾಜಕಾರಣಿಗಳನ್ನು ಮಾತ್ರವೇ ದೂಷಿಸುವುದರಲ್ಲಿ ಅರ್ಥವಿಲ್ಲ ಎಂದು ಪುನರುಚ್ಚರಿಸಿದ ಸ್ಪೀಕರ್, ಈ ಅಪಾಯಕಾರಿ ಪ್ರವೃತ್ತಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ವ್ಯಾಪಿಸಿದೆ. “ವಕೀಲರ ಸಾಮೂಹಿಕ ಧ್ವನಿ ದೃಢವಾಗಿ ಮತ್ತು ಶಕ್ತಿಯುತವಾಗಿದ್ದು ಅದು ಸಮಾಜದಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರಬಲ್ಲುದಾಗಿದೆ” ಎಂದು ಶ್ರೀ ಕಾಗೇರಿ ಹೇಳಿದರು. ಸಂವಿಧಾನದ ನಿಬಂಧನೆಗಳಿಗೆ ಅನುಗುಣವಾಗಿ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಖಾತ್ರಿಪಡಿಸಲು ಹೆಚ್ಚು ಹೆಚ್ಚು ವಕೀಲರು ರಾಜಕೀಯ ರಂಗಕ್ಕೆ ಬರಬೇಕು ಎಂದು ಹೇಳಿದ ಶ್ರೀ ಕಾಗೇರಿ, ವಿವಿಧ ರಾಷ್ಟ್ರೀಯ ವಿಷಯಗಳ ಬಗ್ಗೆ ಪ್ರಬಲವಾದ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ವಕೀಲರು ಉತ್ತಮವಾಗಿ ಸಜ್ಜಾಗಿದ್ದಾರೆ ಎಂದು ಹೇಳಿದರು. “ನಾನು ‘ಒಂದು ರಾಷ್ಟ್ರ ಒಂದು ಚುನಾವಣೆ ಮತ್ತು ಚುನಾವಣಾ ಸುಧಾರಣೆಗಳ ಅಗತ್ಯದ ವಿಚಾರದಲ್ಲಿ ಹೋರಾಡುತ್ತಿದ್ದೇನೆ. ನಾನು ಈ ಹೋರಾಟ ಮುಂದುವರಿಸುತ್ತೇನೆ. ಈ ಎರಡು ಪ್ರಮುಖ ವಿಷಯಗಳ ಬಗ್ಗೆ ಶಕ್ತಿಯುತ ಅಭಿಪ್ರಾಯವನ್ನು ರೂಪಿಸಲು ನ್ಯಾಯಾಂಗವು ಕೈಜೋಡಿಸಬೇಕು ಎಂದು ಶ್ರೀ ಕಾಗೇರಿ ಮನವಿ ಮಾಡಿದರು.