ಹುಬ್ಬಳ್ಳಿ, ಮಾರ್ಚ್ 07: ಮೇಕೆದಾಟು ಯೋಜನೆಯ ಡಿಪಿಆರ್ ಗೆ ಶೀಘ್ರದಲ್ಲಿ ಅನುಮೋದನೆ ನೀಡಲು ಮನವಿ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಕೇಂದ್ರ ಸರ್ಕಾರವು ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸುತ್ತಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಯಿಸಿದ ಮುಖ್ಯಮಂತ್ರಿಗಳು, ಕೇಂದ್ರ ನೀರಾವರಿ ಸಚಿವರೊಂದಿಗೆ ಚರ್ಚಿಸಿ ಈ ಯೋಜನೆಯ ಪ್ರಾಮುಖ್ಯತೆಯ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಈ ಬಾರಿಯ ಅಧಿವೇಶನದ ಸಮಯದಲ್ಲಿ ಸರ್ವ ಪಕ್ಷದ ಸಭೆ ನಡೆಸಲಾಗುವುದು. ನಂತರ ಸಮಯ ನಿಗದಿಪಡಿಸಿಕೊಂಡು ನವದೆಹಲಿಗೆ ತೆರಳಿ ಮೇಕೆದಾಟು, ಕೃಷ್ಣಾ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.