ಬೀದರ್ ,ಫೆ,17 : ಕಲ್ಯಾಣ ಕರ್ನಾಟಕ ಭಾಗದ ಕಲಾವಿದರ ಬಹುದಿನಗಳ ಬೇಡಿಕೆಗಳಾದ ಶಾಶ್ವತ ಅನುದಾನ ಮಾಶಾಸನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರ ಪರ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸದನದಲ್ಲಿ ಧ್ವನಿ ಎತ್ತಿದರು. ಕಲ್ಯಾಣ ಕರ್ನಾಟಕ ಭಾಗದ ಕಲಾವಿದರ ಬಹುದಿನಗಳ ಬೇಡಿಕೆಗಳಿಗೆ ಸಂಬಂಧಿಸಿದಂತೆ ಗುರುವಾರ ನಡೆದ ನಾಲ್ಕನೇ ದಿನದ ಕಲಾಪದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ ಅವರು, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಬೇಡಿಕೆಗಳಾದ ಕನ್ನಡ ಸಾಹಿತ್ಯ ಪರಿಷತ್ ಕರ್ನಾಟಕ, ಜಾನಪದ ಪರಿಷತ್, ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಗಳು ಸೇರಿದಂತೆ ಇತರೆ ಸಂಸ್ಥೆಗಳಂತೆ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟವನ್ನು ಸರ್ಕಾರದಿಂದ ಶಾಶ್ವತ ಅನುದಾನ ಪಡೆಯುವ ಸಂಸ್ಥೆಯನ್ನಾಗಿಸಬೇಕು. ಈಗಾಗಲೇ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸರಕಾರದ ಟ್ರಸ್ಟ್ ಹಾಗೂ ಪ್ರತಿಷ್ಠಾನಗಳ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರತಿಯೊಂದು ಜಿಲ್ಲೆಯಲ್ಲೂ ಟ್ರಸ್ಟ್ ಗಳನ್ನು ಸ್ಥಾಪಿಸಬೇಕು. ಆಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯದ ಎಲ್ಲಾ ಕಲಾವಿದರಿಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗುರುತಿನ ಚೀಟಿ ನೀಡಬೇಕು.
ಸರ್ಕಾರದಿಂದ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಬೇಕು. ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಉತ್ಸವ ಮಾಡಬೇಕು. ಹಂಪಿ ಉತ್ಸವದ ಮಾದರಿಯಲ್ಲಿ ಈ ಭಾಗದ ಐತಿಹಾಸಿಕ ಕ್ಷೇತ್ರಗಳಲ್ಲಿ ಉತ್ಸವ ಮಾಡಬೇಕು. ಈ ಭಾಗದ ಶ್ರೇಷ್ಠ ತತ್ವಪದಕಾರ ಕಡಕೋಳ ಮಡಿವಾಳಪ್ಪರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ಮಾಡಬೇಕು. ಕಲಾವಿದರ ಮಾಶಾಸನದ ವಯೋಮಿತಿ 58 ರಿಂದ 50ಕ್ಕೆ ಇಳಿಸಬೇಕು. ಮಾಶಾಸನ ಮೊತ್ತವನ್ನು 2 ಸಾವಿರ ರೂ.ದಿಂದ 5 ಸಾವಿರ ರೂ.ಗೆ ಹೆಚ್ಚಿಸಬೇಕು. ರಾಜ್ಯದ ಎಲ್ಲಾ ಶಾಲೆಗಳಲ್ಲಿ ರಂಗ ಶಿಕ್ಷಕರು ಮತ್ತು ಸಂಗೀತ ಶಿಕ್ಷಕರನ್ನು ನೇಮಿಸಿಬೇಕು. ರಾಜ್ಯದ ಎಲ್ಲಾ ವಸತಿ ಶಾಲೆಗಳಲ್ಲಿ ಜನಪದ ಶಿಕ್ಷಕರನ್ನು ನೇಮಿಸಬೇಕು ಎಂಬ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಇನ್ನಿತರ ಪ್ರಮುಖ ಬೇಡಿಕೆಗಳ ಬಗ್ಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರದ ಗಮನ ಸೇಳೆದರು. ಮಹಾರಾಷ್ಟ್ರ, ತೆಲೆಂಗಾಣ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಐದು ಸಾವಿರ ಮಾಶಾಸನ ನೀಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಕೂಡ ಮಾಶಾಸನ ಜಾಸ್ತಿ ಮಾಡಬೇಕು. ಅದರಂತೆಯೇ ಮಾಶಾಸನದ ವಯೋಮಿತಿಯನ್ನು 58 ರಿಂದ 50ಕ್ಕೆ ಇಳಿಸಬೇಕು. ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದಾಗ ರಂಗ ಶಿಕ್ಷಕರನ್ನು ನೇಮಕ ಮಾಡಿದ್ದರು. ಈ ಸರ್ಕಾರ ರಂಗ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಇದೇ ವೇಳೆ ಒತ್ತಾಯಿಸಿದರು.
ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಪ್ರಶ್ನೆಗಳಿಗೆ ಉತ್ತರಿಸಿದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ ರವರು, ಪ್ರಸ್ತುತ ನೀಡಲಾಗುತ್ತಿರುವ ಕಲಾವಿದರ ಮಾಶಾಸನ ಪಟ್ಟಿಯಲ್ಲಿ ಅರ್ಹರ ಹೆಸರು ಕೈಬಿಟ್ಟಿದ್ದರೆ ಅವರ ಹೆಸರುಗಳನ್ನು ಸೇರಿಸುವ ಮೂಲಕ ಅವರಿಗೆ ಮಾಶಾಸನ ಒದಗಿಸಿಕೊಡುವ ಕೆಲಸ ಮಾಡುತ್ತೇವೆ. ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿ ಮಾಶಾಸನ ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ರಂಗ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುತ್ತೇವೆ. ಶಾಶ್ವತ ಅನುದಾನದ ವಿಚಾರದಲ್ಲಿ ಕೂಡ ಚರ್ಚಿಸುತ್ತೇವೆ. ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಬೇಡಿಕೆಗಳ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳುತ್ತೇವೆಂದರು. ಇದೇ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಮಾತಿಗೆ ಧ್ವನಿಗೂಡಿಸಿದರು.