ಬೆಂಗಳೂರು, ಡಿಸೆಂಬರ್ 26 : ಡ್ರಗ್ಸ್ ವಿರುದ್ಧದ ಸಮರದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಲು ಯುವಕರಿಗೆ ಕರೆ ನೀಡಿದರು. ಯುವಜನತೆಯ ಸಹಕಾರದೊಂದಿಗೆ ಕರ್ನಾಟಕದಿಂದ ಡ್ರಗ್ಸ್ ನ್ನು ಸಂಪೂರ್ಣವಾಗಿ ತೊಡೆದುಹಾಕುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಗೃಹ ಇಲಾಖೆ ಮತ್ತು ವಿಜಯ ಕರ್ನಾಟಕ ದಿನಪತ್ರಿಕೆಯ ಜಂಟಿ ಸಹಯೋಗದಲ್ಲಿ ‘ ಮಾದಕ ವಸ್ತುಗಳ ವಿರುದ್ಧ ಕರ್ನಾಟಕ ಅಭಿಯಾನ’ಅಂಗವಾಗಿ ವಿಂಟೇಜ್ ಕಾರು, ಬೈಕ್ ರ್‍ಯಾಲಿ ಹಾಗೂ ವಿದ್ಯಾರ್ಥಿಗಳ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಯುವಜನತೆಯ ಇನ್ನೊಂದು ಹೆಸರು ಶಕ್ತಿ. ಈ ಶಕ್ತಿಯನ್ನು ತಮ್ಮ ಭವಿಷ್ಯ ನಿರ್ಮಾಣಕ್ಕೆ ಹಾಗೂ ಕನ್ನಡ ನಾಡಿಗೆ ಕೀರ್ತಿಯನ್ನು ತರಲು ಈ ಶಕ್ತಿ ಬಳಸಿಕೊಳ್ಳಲು ಸಂಕಲ್ಪ ಮಾಡಬೇಕಾಗಿ ಮುಖ್ಯಮಂತ್ರಿಗಳು ಯುವಕರಿಗೆ ಕರೆ ನೀಡಿದರು.
ಎಲ್ಲ ಪ್ರಮುಖ ಕಾಲೇಜುಗಳ ಸುತ್ತಮುತ್ತಲೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಅಂತೆಯೇ ಕಾಲೇಜುಗಳ ಕ್ಯಾಂಪಸ್ ಗಳಲ್ಲಿ ಹಾಗೂ ಹಾಸ್ಟೆಲ್ ಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕಾಲೇಜುಗಳ ಸುತ್ತಮುತ್ತ ಹಾಗೂ ಒಳಗೆ ಮಾದಕ ವಸ್ತುಗಳ ಮಾರಾಟ ಹಾಗೂ ಖರೀದಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಡ್ರಗ್ಸ್ ವಿರುದ್ಧ ಯುದ್ಧವನ್ನು ಸಾರಿದೆ. ದೊಡ್ಡ ಪ್ರಮಾಣದ ಡ್ರಗ್ಸ್ ನ್ನು ವಶಪಡಿಸಿ ನಾಶ ಮಾಡಲಾಗಿದೆ. ಡ್ರಗ್ಸ್ ವಿರುದ್ಧದ ಅಭಿಯಾನ ನಿರಂತರವಾಗಿ ನಡೆಯುತ್ತದೆ. ವಿದೇಶದ ಕೆಲವು ನಾಗರಿಕರು ನಗರದಲ್ಲಿ ಡ್ರಗ್ಸ್ ಮಾರಾಟದಂಧೆಯಲ್ಲಿ ತೊಡಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಎನ್ ಡಿ ಪಿ ಟಿ ಎಸ್ ಕಾನೂನನ್ನು ಜಾರಿಗೆ ತರಲಾಗುತ್ತದೆ. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಡಾರ್ಕ್ ವೆಬ್ ನ್ನು ಬೇಧಿಸಲಾಗಿದೆ. ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ವಿದೇಶದಿಂದ ಡ್ರಗ್ಸ್ ಸರಬರಾಜನ್ನು ತಡೆಗಟ್ಟಲಾಗಿದೆ ಎಂದು ತಿಳಿಸಿದರು. ವಿಜಯಕರ್ನಾಟಕ ಕನ್ನಡ ದಿನಪತ್ರಿಕೆ ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡುತ್ತಾ ಬಂದಿದೆ. ಡ್ರಗ್ಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ಡ್ರಗ್ಸ್ ವಿರುದ್ಧ ಯುವಕರಲ್ಲಿ ಜಾಗೃತಿ ಮೂಡಿಸಲು ವಿಜಯಕರ್ನಾಟಕದ ನೇತೃತ್ವದಲ್ಲಿ ಅಭಿಯಾನ ಯಶಸ್ವಿಯಾಗುವ ವಿಶ್ವಾಸವಿದೆ. ವಿದೇಶಗಳಿಂದ ಡ್ರಗ್ಸ್ ಬರುತ್ತಿದ್ದು, ಅನೇಕ ಯುವಕರ ಭವಿಷ್ಯ ಕರಾಳವಾಗುತ್ತಿದೆ. ಕರ್ನಾಟಕದ ಡ್ರಗ್ಸ್ ವಿರುದ್ಧದ ಅಭಿಯಾನವನ್ನು ಮನೆಮನೆಗೂ ತಲುಪಿಸಬೇಕಿದೆ. ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ ಹಾಗೂ ತೆಗೆದುಕೊಳ್ಳಲು ಬಿಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ಯುವಕರು ಕೈಗೊಳ್ಳಬೇಕು ಎಂದರು. ವಿಜಯಕರ್ನಾಟಕದ ಅಭಿಯಾನದಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಡ್ರಗ್ಸ್ ವಿರುದ್ಧದ ಹೋರಾಟದಲ್ಲಿ ಸಹಸ್ರಾರು ಯುವಕರು ಭಾಗಿಯಾಗಬೇಕು. ಡ್ರಗ್ಸ್ ವ್ಯಾಪಾರದಲ್ಲಿ ತೊಡಗಿರುವ ದೇಶ ದ್ರೋಹಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.