ಬೆಂಗಳೂರು ಡಿಸೆಂಬರ್ 26: ಪ್ರಸ್ತುತ ದಿನಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ತಂತ್ರಜ್ಞಾನವು ಅತ್ಯಗತ್ಯ. ತರಗತಿಗಳಲ್ಲಿ ಡಿಜಿಟಲ್ ಕಲಿಕಾ ಪರಿಕರಗಳ ಪರಿಣಾಮಕಾರಿ ಬಳಕೆಯಿಂದ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆ ಮತ್ತು ತರಗತಿಯಲ್ಲಿ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ ಎಂದು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಪಟ್ಟರು. ಇಂದು ಬೆಂಗಳೂರಿನ ಚನ್ನೇನಹಳ್ಳಿಯಲ್ಲಿ ಜನಸೇವಾ ವಿಶ್ವಸ್ತ ಮಂಡಳಿ ವತಿಯಿಂದ ಆಯೋಜಿಸಿದ್ದ ಪೂರ್ಣದೆಡೆಗಿನ ಪಯಣ ಹೊಸ ಚರಣದಾರಂಭ “ಪೂರ್ಣ ಮಂಡಲೋತ್ಸವ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಮತ್ತು ಯುವಜನರ ಭವಿಷ್ಯಕ್ಕೆ ಸರಿಯಾದ ಮಾರ್ಗವನ್ನು ರೂಪಿಸಲು ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ, ಶಿಕ್ಷಕರ ತರಬೇತಿಗೆ ವ್ಯವಸ್ಥೆ ಮಾಡುವುದು, ಅಂತರ್ಗತ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡುವುದು ಹಾಗೂ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸುವುದು ಅವಶ್ಯಕ ಎಂದು ಹೇಳಿದರು.
2015 ರಲ್ಲಿ ಭಾರತವು ಅಳವಡಿಸಿಕೊಂಡ ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿಯ ಪ್ರಕಾರ, 2030 ರ ವೇಳೆಗೆ “ಎಲ್ಲರಿಗೂ ಒಳಗೊಳ್ಳುವ ಮತ್ತು ಸಮಾನ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಮತ್ತು ಜೀವಿತಾವಧಿಯ ಶಿಕ್ಷಣಕ್ಕಾಗಿ ಅವಕಾಶಗಳನ್ನು ಉತ್ತೇಜಿಸುವ” ಗುರಿಯನ್ನು ಹೊಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 21ನೇ ಶತಮಾನದ ಮೊದಲ ಶಿಕ್ಷಣ ನೀತಿಯಾಗಿದೆ. ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನ ಮತ್ತು ನಿರ್ದೇಶನದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಹಂತದಲ್ಲಿ ಶಿಕ್ಷಣ ತಜ್ಞರು ಮತ್ತು ಶಿಕ್ಷಕರಿಂದ ಸಲಹೆಗಳನ್ನು ಸ್ವೀಕರಿಸಲಾಗಿದೆ. ನಮ್ಮ ದೇಶವು ಅಭಿವೃದ್ಧಿಯ ಹಂತದಲ್ಲಿದೆ ಮತ್ತು ಆಧುನಿಕ ಮತ್ತು ಭವಿಷ್ಯದ ಅವಶ್ಯಕತೆಗಳಿಗೆ ಅನುಗುಣವಾಗಿ ನಾವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹೊಂದಿದ್ದೇವೆ. ಇಡೀ ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ತಿಳಿಸಿದರು. ಪ್ರಾಚೀನ ಶಿಕ್ಷಣ ಪದ್ಧತಿಯು ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಮಾನವೀಯ ಮೌಲ್ಯಗಳ ಅಭಿವೃದ್ಧಿ, ಚಾರಿತ್ರ್ಯ ನಿರ್ಮಾಣ, ಆಧ್ಯಾತ್ಮಿಕ ಜ್ಞಾನ ಹಾಗೂ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಯ ಉದ್ದೇಶದ ಆಧಾರದ ಮೇಲೆ ಈ ಶಿಕ್ಷಣ ವ್ಯವಸ್ಥೆಯ ಖ್ಯಾತಿಯು ಎಲ್ಲೆಡೆ ಹರಡಿತು. ಹಾಗಾಗಿ ಭಾರತವನ್ನು ‘ವಿಶ್ವಗುರು’ ಎಂದು ಕರೆಯಲಾಯಿತು.
ಜನಸೇವಾ ಸಂಸ್ಥೆಯು ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳು ಮತ್ತು ವ್ಯಕ್ತಿತ್ವ ವಿಕಸನದ ಪೂರ್ಣ ಶಿಕ್ಷಣವನ್ನು ನೀಡಲು ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯು ಮಾಡುತ್ತಿರುವ ಕೆಲಸವನ್ನು ನಾನು ಪ್ರಶಂಸಿಸುತ್ತೇನೆ. ಇಲ್ಲಿನ ನೂರಾರು ವಿದ್ಯಾರ್ಥಿಗಳು ಧರ್ಮ, ಸಂಸ್ಕೃತಿ, ಜ್ಞಾನ, ವಿಜ್ಞಾನವನ್ನು ದೇಶ, ವಿಶ್ವದಲ್ಲಿ ಪಸರಿಸುವ ಮೂಲಕ ಸಂಸ್ಥೆ ಹಾಗೂ ದೇಶಕ್ಕೆ ಹೆಮ್ಮೆ ತರುತ್ತಿದ್ದಾರೆ. ಜನಸೇವಾ ವಿದ್ಯಾಕೇಂದ್ರದಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಕೇವಲ ಪದವಿ ಪಡೆದವರಾಗದೆ, ಮಾನವೀಯ ಮೌಲ್ಯಗಳನ್ನು ಅರಿತುಕೊಂಡು ಸಮಾಜದಲ್ಲಿನ ಸಾಮಾಜಿಕ ವೈಪರೀತ್ಯಗಳನ್ನು ನಿವಾರಿಸಿ ಜನಕಲ್ಯಾಣಕ್ಕೆ ಸಹಕಾರಿಯಾಗಿ ಮಾನವನ ಮರುಸ್ಥಾಪನೆಯಲ್ಲಿ ಬೆಳಕಾಗುತ್ತಿರುವುದು ಪ್ರಶಂಸನೀಯ. ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ, ಮೈಸೂರಿನ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಶ್ರೀ ಮುಕ್ತಿದಾನಂದಜಿ, ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾದ ಮಾನ್ಯ ಶ್ರೀ ದತ್ತಾತ್ರೇಯ ಹೊಸಬಾಳೆ, ಮೈಸೂರು ರಾಜವಂಶಸ್ಥರಾದ ಯದುವೀರ್ ಒಡೆಯರ್, ಸಚಿವರುಗಳಾದ ಆರಗ ಜ್ಞಾನೇಂದ್ರ, ಆರ್ ಅಶೋಕ್, ಎಸ್ ಟಿ ಸೋಮಶೇಖರ್, ಡಾ.ಕೆ ಸುಧಾಕರ್, ಮುರುಗೇಶ್ ನಿರಾಣಿ, ವಿ ಸೋಮಣ್ಣ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.