ವಾಜಪೇಯಿ ಅವರೊಬ್ಬ ಶ್ರೇಷ್ಠ ಮುತ್ಸದ್ಧಿ- ನಳಿನ್‍ಕುಮಾರ್ ಕಟೀಲ್

ಬೆಂಗಳೂರು,ಡಿ,25 : ಭಾರತವನ್ನು ಜಗತ್ತೇ ಗುರುತಿಸುವ ಸ್ಥಾನಕ್ಕೆ ಒಯ್ದ ಶ್ರೇಷ್ಠ ಮುತ್ಸದ್ಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ಇಂದು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ದೇಶದ ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಜಪೇಯಿ ಅವರು ಒಬ್ಬ ಸ್ವಯಂಸೇವಕ, ಪ್ರಚಾರಕ, ಸಂಸದ, ನಂತರದ ದಿನಗಳಲ್ಲಿ ಲೋಕಸಭಾ ಸದಸ್ಯನಾಗಿ, ವಿರೋಧ ಪಕ್ಷದ ನಾಯಕ, ಪ್ರಧಾನಿಯಾಗಿ ಪ್ರತಿನಿತ್ಯ ಭಾರತವನ್ನು ಆರಾಧಿಸಿದವರು ಎಂದು ನುಡಿದರು. ಕಳಂಕ ಇಲ್ಲದ, ಭ್ರಷ್ಟಾಚಾರರಹಿತ ಆಡಳಿತವನ್ನು ವಾಜಪೇಯಿ ಅವರು ನೀಡಿದ್ದಾರೆ. ಭಾರತವನ್ನು ಮೊದಲ ಬಾರಿಗೆ ಅವರು ಸಾಲಮುಕ್ತ ರಾಷ್ಟ್ರವನ್ನಾಗಿ ಮಾಡಿದರು. ಪೋಖ್ರಾನ್ ಅಣುಬಾಂಬ್ ಸ್ಫೋಟದ ಮೂಲಕ ಜಗತ್ತಿಗೆ ನಮ್ಮ ಸೈನ್ಯದ ಶಕ್ತಿಯನ್ನು ಪರಿಚಯಿಸಿದರು. ಸ್ವಾಭಿಮಾನಿ ರಾಷ್ಟ್ರ ನಿರ್ಮಿಸಿದವರು ಎಂದು ವಿವರಿಸಿದರು.


ವಾಜಪೇಯಿಯವರು ಯುವಕರಾಗಿದ್ದಾಗಲೇ ಅವರು ಮುಂದಿನ ದಿನಗಳಲ್ಲಿ ಪ್ರಧಾನಿ ಆಗಲಿದ್ದಾರೆ ಎಂದು ನೆಹರೂ ಅವರು ತಿಳಿಸಿದ್ದರು. ವಾಜಪೇಯಿ ಅವರ ಜೀವನಶೈಲಿ, ಸಂಘಟನಾ ಚಾತುರ್ಯವು ಕಾರ್ಯಕರ್ತನಿಗೆ ಪ್ರೇರಣೆ ನೀಡುವಂತಿದೆ. ಅವರು ತಮ್ಮ ಕವಿತೆಗಳ ಮೂಲಕ ಭಾರತೀಯರ ಹೃದಯದಲ್ಲಿ ರಾಷ್ಟ್ರಭಕ್ತಿಯ ಉದ್ದೀಪನ ಮಾಡಿದ್ದರು ಎಂದು ತಿಳಿಸಿದರು. ಅವರ ಆಡಳಿತವು ಮಾದರಿ ಎನಿಸುವಂಥದ್ದು. ಇಂದು ಸುಶಾಸನ ದಿನವನ್ನೂ ಆಚರಿಸಲಾಗುತ್ತಿದೆ. ಅವರ ಆದರ್ಶದಲ್ಲಿ ನರೇಂದ್ರ ಮೋದಿಯವರು ಕಳೆದ ಏಳೂವರೆ ವರ್ಷಗಳಲ್ಲಿ ಭ್ರಷ್ಟಾಚಾರ ಇಲ್ಲದ ಮತ್ತು ಕಳಂಕಮುಕ್ತ ಆಡಳಿತ ನೀಡಿದ್ದಾರೆ. ಅಟಲ್‍ಜಿ ಅವರ ಸಂಕಲ್ಪವನ್ನು ನನಸಾಗಿಸಲು ಅವರು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ನೆ.ಲ. ನರೇಂದ್ರಬಾಬು, ಅಲ್ಪಸಂಖ್ಯಾತರ ಮೋರ್ಚಾ ರಾಜ್ಯ ಅಧ್ಯಕ್ಷರಾದ ಮುಜ್ಹಾಮಿಲ್ ಅಹ್ಮದ್ ಬಾಬು, ರಾಜ್ಯ ಕಾರ್ಯಾಲಯ ಕಾರ್ಯದರ್ಶಿಗಳಾದ ಲೋಕೇಶ್ ಅಂಬೆಕಲ್ಲು, ಮುಖಂಡರು, ಕಾರ್ಯಕರ್ತರು ಮತ್ತು ಕಾರ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top