ಬಳ್ಳಾರಿ : ಲಾರಿಯೊಂದರಲ್ಲಿ ಅಕ್ರಮವಾಗಿ ನೆರೆಯ ಆಂಧ್ರಪ್ರದೇಶಕ್ಕೆ ಪಡಿತರ ಅಕ್ಕಿಯನ್ನು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಮತ್ತು ಆಹಾರ ಇಲಾಖೆಯ ಅಧಿಕಾರಿಗಳು, ಬಳ್ಳಾರಿ ಗ್ರಾಮೀಣ ಠಾಣಾ ವ್ಯಾಪ್ತಿಯ ತಿರುಮಲ ನಗರ ಕ್ಯಾಂಪ್ ಬಳಿಯ ಮೇಲ್ಸೇತುವೆ (ಫ್ಲೈಓವರ್) ಹತ್ತಿರ ಲಾರಿಯನ್ನು ತಡೆದು, ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿಗಳ ಮೌಲ್ಯದ ಅಕ್ಕಿ ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳಿಗೆ ತಿಳಿದು ಬಂದ ಖಚಿತ ಮಾಹಿತಿಯ ಮೇರೆಗೆ, ಗ್ರಾಮೀಣ ಪೊಲೀಸರು ಮತ್ತು ಆಹಾರ ಇಲಾಖೆಯವರು, ಮಹಾರಾಷ್ಟ್ರ ರಾಜ್ಯದ ರಿಜಿಸ್ಟ್ರೇಷನ್‍ನ ಎಂಹೆಚ್.26, ಬಿ8758 ನಂಬರಿನ ಲಾರಿಯನ್ನು ತಿರುಮಲ ನಗರ ಕ್ಯಾಂಪ್ ಬಳಿ ತಡೆದು ನಿಲ್ಲಿಸಿ, ತಪಾಸಣೆ ನಡೆಸಿದಾಗ, ನೂರಾರು ಚೀಲಗಳಲ್ಲಿ ಪಡಿತರ ಅಕ್ಕಿ ಕಂಡು ಬಂದಿದೆ.
ಕುಷ್ಟಗಿ-ಕೊಪ್ಪಳ-ಹೊಸಪೇಟೆ ಮಾರ್ಗವಾಗಿ ಬಳ್ಳಾರಿಯ ಮೂಲಕ ಆಂಧ್ರದ ಕಡೆಗೆ ಈ ಲಾರಿ ಹೊರಟಿತ್ತು ಎಂದು ಹೇಳಲಾಗಿದೆ. ಸದರಿ ಲಾರಿಯಲ್ಲಿ 659 ಚೀಲಗಳಲ್ಲಿ 329 ಕ್ವಿಂಟಾಲ್‍ಗಳಷ್ಟು ಪಡಿತರ ಅಕ್ಕಿಯನ್ನು ಸಾಗಣೆ ಮಾಡಲಾಗುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಧಿಕಾರಿಗಳು ವಶಪಡಿಸಿಕೊಂಡ ಪಡಿತರ ಅಕ್ಕಿಯ ಮೌಲ್ಯ 10 ಲಕ್ಷ ರೂಪಾಯಿಗಳಿರಬಹುದು ಎಂದು ಅಂದಾಜಿಸಲಾಗಿದೆ. ಲಾರಿ ಚಾಲಕನನ್ನು ಬಳ್ಳಾರಿ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾರಿ ಮಾಲೀಕನ ಹಾಗೂ ಚಾಲಕನ ಮೇಲೆ ಅಗತ್ಯ ವಸ್ತುಗಳ ಕಾಯಿದೆ (ಇ.ಸಿ. ಆ್ಯಕ್ಟ್) ಪ್ರಕಾರ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಜಿಲ್ಲಾ ಎಸ್.ಪಿ. ಡಾ||ಶೋಭಾರಾಣಿ ಅವರ ಸೂಚನೆಯಂತೆ ಈ ದಾಳಿ ನಡೆದಿದೆ. ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಗುನ್ನೆ ನಂ. 358/2025 ರಂತೆ ಕೇಸ್ ದಾಖಲಾಗಿದೆ. ಆಹಾರ ಇಲಾಖೆಯ ಮಂಜುನಾಥ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಲಾರಿಯಲ್ಲಿ ಆಂಧ್ರಕ್ಕೆ ಸಾಗಿಸುತ್ತಿದ್ದ 329 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ



