ಬಳ್ಳಾರಿ: ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣದಲ್ಲಿ ಬಂಧಿಸಲಾಗಿರುವ 26 ಮಂದಿ ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಆದೇಶಿಸಿತು.
ಬಳ್ಳಾರಿ ಬ್ರೂಸ್ಪೇಟೆ ಠಾಣೆ ಪೊಲೀಸರು ಬಂಧಿಸಿರುವ ಆರೋಪಿಗಳನ್ನು ಸೋಮವಾರದಂದು 42ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಅವರು, ಎಲ್ಲ ಆರೋಪಿಗಳನ್ನು ಜ.19ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದರು.
ನ್ಯಾ.ಕೆ.ಎನ್.ಶಿವಕುಮಾರ್ ಅವರು ಆರೋಪಿಗಳನ್ನು ಕುರಿತು, ನಿಮ್ಮ ಬಂಧನದ ಬಗ್ಗೆ ನಿಮ್ಮ ಕುಟುಂಬಕ್ಕೆ ಮಾಹಿತಿ ಇದೆಯೇ ಎಂದು ಕೇಳಿದರು. ಇದಕ್ಕೆ ಎಲ್ಲ ಆರೋಪಿಗಳು ಗೊತ್ತಿದೆ ಎಂದು ಉತ್ತರಿಸಿದರು. ಬಳಿಕ ಎಲ್ಲರಿಗೂ ಒಂದೇ ಬಂಧನದ ಮೆಮೋ ನೀಡಿರುವುದು ಏಕೆ? ಪ್ರತ್ಯೇಕ ಮೆಮೋ ಏಕೆ ಕೊಟ್ಟಿಲ್ಲ? ಎಂದು ತನಿಖಾಧಿಕಾರಿಗಳನ್ನು ಪ್ರಶ್ನಿಸಿ ಬಳಿಕ ನ್ಯಾಯಾಂಗ ಬಂಧನಕ್ಕೆ ವಹಿಸಿದರು.
ನ್ಯಾಯಾಲಯಕ್ಕೆ ಬಿಗಿ ಭದ್ರತೆ: ಬ್ರೂಸ್ಪೇಟೆ ಠಾಣೆ ಪೊಲೀಸರು ಬಂಧಿಸಿರುವ ಆರೋಪಿಗಳನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಕರೆತರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಾಲಯದ ಬಳಿ ಸ್ಥಳೀಯ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು. ಹೆಚ್ಚಿನ ಭದ್ರತೆಗಾಗಿ ಎರಡು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು. ವಿಚಾರಣೆ ಬಳಿಕ ಆರೋಪಿಗಳನ್ನು ಪೊಲೀಸ್ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.
ಬಳ್ಳಾರಿ ಬ್ಯಾನರ್ ಗಲಭೆ: ಬಳ್ಳಾರಿ ನಗರದ ಸಿರುಗುಪ್ಪ ರಸ್ತೆಯ ಶಾಸಕ ಜನಾರ್ದನ ರೆಡ್ಡಿ ಅವರ ಮನೆಯ ಮುಂದೆ ಜ.1ರಂದು ಬ್ಯಾನರ್ ಹರಿದ ವಿಚಾರವಾಗಿ ಶಾಸಕ ಭರತ್ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಗಲಾಟೆ ನಡೆದಿತ್ತು. ಎರಡು ಗುಂಪುಗಳಿAದ ಕಲ್ಲು ತೂರಾಟ ಸಂಭವಿಸಿತ್ತು. ಪೊಲೀಸರು ಸೇರಿ ಹಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿತ್ತು. ಮಾತ್ರವಲ್ಲ, ಘಟನೆಯಲ್ಲಿ ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಎಂಬವರು ಮೃತಪಟ್ಟಿದ್ದು, ಇದಕ್ಕೆ ಸಂಬAಧಿಸಿದAತೆ ಬ್ರೂಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



