ಬೆಂಗಳೂರು : ಇಂಡಿಯನ್ ಮೂವ್ ಮೆಂಟ್ ಪಾರ್ಟಿಯಿಂದ ಈ ಬಾರಿಯ ಲೋಕಸಭಾ ಚುನಾವಣೆಗೆ ಒಟ್ಟು 15 ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ಮೊದಲ ಹಂತದಲ್ಲಿ 7 ಉಮೇದುವಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಇಂಡಿಯನ್ ಮೂವ್ ಮೆಂಟ್ ಪಾರ್ಟಿ ರಾಜ್ಯಾಧ್ಯಕ್ಷ ಮಹದೇವ್ ಉರಗಾಂವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಕ್ರಿಸ್ಟೋಫರ್ ರಾಜ್ ಕುಮಾರ್, ಪಕ್ಷದ ಮುಖಂಡ ರಾಮಚಂದ್ರಯ್ಯ, ಮಹಿಳಾ ಘಟಕದ ಅಧ್ಯಕ್ಷರಾದ ರಷೀದಾ ಬೇಗಂ ಅವರು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದರು.
ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಕ್ರಿಸ್ಟೋಫರ್ ರಾಜ್ ಕುಮಾರ್ ಅವರಿಗೆ ಇದೇ ಸಂದರ್ಭದಲ್ಲಿ ಬಿ. ಫಾರಂ ವಿತರಿಸಲಾಯಿತು. ಉಳಿದಂತೆ ಕೋಲಾರ-ಎನ್.ಹರ್ಷ, ಬೆಂಗಳೂರು ಕೇಂದ್ರ-ಉಮಾ ಸಿ, ಚಿತ್ರದುರ್ಗ ಎಸ್.ಸಿ.ಮೀಸಲು ಬಿ.ಟಿ.ರಾಮಸುಬ್ಬಯ್ಯ, ದಕ್ಷಿಣ ಕನ್ನಡ-ಸುಪ್ರೀತ್ ಕುಮಾರ್ ಪೂಜಾರಿ, ಚಾಮರಾಜನಗರ ಎಸ್.ಸಿ.ಮೀಸಲು ಕುಡಲೂರು ಆರ್ ಶ್ರೀಧರ್ ಮೂರ್ತಿ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ – ಕೋದಂಡರೆಡ್ಡಿ ಅವರನ್ನು ಕಣಕ್ಕಿಳಿಸಲಾಗುತ್ತಿದೆ.
ಪಕ್ಷದ ರಾಜ್ಯಾಧ್ಯಕ್ಷ ಮಹದೇವ್ ಉರಗಾಂವಿ ಮಾತನಾಡಿ, ಬಿಜೆಪಿ, ಕಾಂಗ್ರೆಸ್ ನಂತಹ ರಾಷ್ಟ್ರೀಯ ಪಕ್ಷಗಳಿಂದ ದೇಶ ಅಭಿವೃದ್ದಿಯಾಗುವುದಿಲ್ಲ. ಜಾತಿ, ಜಾತಿ ನಡುವೆ ಸಂಘರ್ಷ ತಂದಿಟ್ಟು ಈ ಪಕ್ಷಗಳು ದೇಶ ಹಾಳು ಮಾಡುತ್ತಿವೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಿದ್ದಾಂತದಂತೆ ಎಲ್ಲ ವರ್ಗ, ಧರ್ಮ ಜಾತಿಯವರನ್ನು ನಮ್ಮ ಪಕ್ಷದಲ್ಲಿ ಸಮಾನವಾಗಿ ನಡೆಸಿಕೊಳ್ಳುತ್ತೇವೆ ಎಂದರು.
ಮಹಿಳಾ ಘಟಕದ ಅಧ್ಯಕ್ಷರಾದ ರಷೀದಾ ಬೇಗಂ ಮಾತನಾಡಿ, ಕರ್ನಾಟಕ ರೈತ ಸಂಘ, ಕನ್ನಡ ಪರ ಸಂಘಟನೆಗಳು ಮತ್ತು ಸ್ವಯಂ ಸೇವ ಸಂಘಟನೆಗಳು ನಮ್ಮ ಪಕ್ಷಕ್ಕೆ ಬೆಂಬಲ ನೀಡಿವೆ. ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತಿರುವುದಾಗಿ ಹೇಳಿದರು.