ಯೋಗ ದಿನಾಚರಣೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಯೋಗಾಭ್ಯಾಸ, ಚಿತ್ರನಟಿ ಶ್ರೀಲೀಲಾ ಭಾಗಿ

ಬಳ್ಳಾರಿ :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಗಾಭ್ಯಾಸ ಮಾಡುವ ಮೂಲಕ, ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಆಯುಷ್ ಇಲಾಖೆ ಸಹಯೋಗದಲ್ಲಿ ಶುಕ್ರವಾರದಂದು ಬೆಳ್ಳಂ ಬೆಳಿಗ್ಗೆ ಸಂಡೂರು ತಾಲ್ಲೂಕು ತೋರಣಗಲ್ಲಿನ ಜೆಎಸ್‌ಡಬ್ಲ್ಯೂ ಟೌನ್‌ಶಿಪ್ ವಿದ್ಯಾನಗರದಲ್ಲಿ ಏರ್ಪಡಿಸಲಾದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡು, ಲವಲವಿಕೆಯಿಂದ ಕೆಲವು ಯೋಗಾಸನಗಳ ಅಭ್ಯಾಸ ಮಾಡಿದರು.

 

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗಳು, ವೇದಿಕೆಯಲ್ಲಿದ್ದ ಮುಖ್ಯಮಂತ್ರಿಗಳು, ಗಣ್ಯಾತಿಗಣ್ಯರು ಸೇರಿದಂತೆ ಮಕ್ಕಳು, ಸಾರ್ವಜನಿಕರು ಹಾಗೂ ಪಾಲ್ಗೊಂಡಿದ್ದ ಜನಸ್ತೋಮಕ್ಕೆ ಯೋಗದ ವಿವಿಧ ಆಸನಗಳ ಅಭ್ಯಾಸ ಮಾಡಿಸಿದರು. ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ಜನರಆರೋಗ್ಯಉತ್ತಮವಾಗಿರುವುದರ ಜೊತೆಗೆ, ಇಡೀ ದಿನ ವ್ಯಕ್ತಿ ಲವಲವಿಕೆಯಿಂದ ಇರಲು ಸಹಕಾರಿಯಾಗಿದೆ. ಹೀಗಾಗಿ ಎಲ್ಲರೂ ನಿತ್ಯಯೋಗಾಭ್ಯಾಸ ಮಾಡಬೇಕು ಎಂದು ಮನವಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಗಾಭ್ಯಾಸದಲ್ಲಿ ಆಸಕ್ತಿಯಿಂದಲೇ ಪಾಲ್ಗೊಂಡು, ವಿವಿಧ ಆಸನಗಳನ್ನು ಅಭ್ಯಾಸ ಮಾಡಿದರು.

 

ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದ ಖ್ಯಾತ ಚಲನಚಿತ್ರ ನಟಿ ಶ್ರೀಲೀಲಾ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾದರು.  ನಟಿ ಶ್ರೀಲೀಲಾ ಕೂಡ ಖುಷಿಯಿಂದಲೇ ಯೋಗಾಭ್ಯಾಸದಲ್ಲಿ ಪಾಲ್ಗೊಂಡು ಮಿಂಚಿದರು.  ಸಮಾರಂಭದಲ್ಲಿ ನೆರೆದಿದ್ದ ಮಕ್ಕಳಾದಿಯಾಗಿ ಸಾರ್ವಜನಿಕರು ಕೂಡ ನಟಿ ಶ್ರೀಲೀಲಾ ಅವರಿಗೆ ಚಪ್ಪಾಳೆಯ ಸುರಿಮಳೆಗೈದರು.  ಸಂತೋಷದಿಂದ ಪ್ರತಿಕ್ರಿಯಿಸಿದ ಶ್ರೀಲೀಲಾ ಅವರು,  ಬಳ್ಳಾರಿ ಜಿಲ್ಲೆಯ ತೋರಣಗಲ್‌ನಲ್ಲಿ ನಡೆಸಲಾಗುತ್ತಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ತಮ್ಮೆಲ್ಲರನ್ನು ಈ ರೀತಿಯಾಗಿ ಭೇಟಿಯಾಗಿದ್ದು ತುಂಬಾ ಸಂತಸ ತಂದಿದೆ.  ಜನರು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ.  ನಿತ್ಯಯೋಗಾಭ್ಯಾಸದಿಂದ ಆರೋಗ್ಯ ಚೆನ್ನಾಗಿರುತ್ತದೆ. ಎಲ್ಲರೂ ನಿತ್ಯಯೋಗಾಭ್ಯಾಸ ಮಾಡಬೇಕು ಎಂದು ಕರೆ ನೀಡಿದರು.  ನಟಿ ಶ್ರೀಲೀಲಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಮಾರಂಭದಲ್ಲಿ ಭಾಗಿಯಾಗಿದ್ದ ಸಾರ್ವಜನಿಕರು ಕೂಡ ಕಾಣುವ ರೀತಿಯಲ್ಲಿ ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.  ಮಕ್ಕಳು, ಜನರು ನಟಿಯೊಂದಿಗೆ ಸೆಲ್ಫಿ ಪಡೆಯಲು ಮುಗಿಬಿದ್ದಿದ್ದು ಕಂಡುಬಂದಿತು.

ಬಳ್ಳಾರಿ ಜಿಲ್ಲೆಯ ಕಲಾವಿದ ಮಂಜುನಾಥ ಗೋವಿಂದವಾಡ ಅವರು ರಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಚಿತ್ರಕಲಾಕೃತಿಯನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಕಲಾವಿದರ ಕೈನಿಂದಲೇ ಹಸ್ತಾಂತರಿಸಲಾಯಿತು. 12 ನೇ ಶತಮಾನದ ಕವಿಯತ್ರಿ ಅಕ್ಕಮಹಾದೇವಿ ಅವರ ಬೃಹತ್‌ ಚಿತ್ರಕಲಾ ಕೃತಿಯನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣಗೊಳಿಸಿದರು.

 

ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಮಕ್ಕಳು, ಸಾರ್ವಜನಿಕರುಯೋಗ ದಿನಾಚರಣೆಯಲ್ಲಿ ಪಾಲ್ಗೊಂಡುಯೋಗಾಭ್ಯಾಸ ನಡೆಸಿ ಸಂಭ್ರಮಿಸಿದರು.

ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕಾರ್ಮಿಕ ಸಚಿವ ಸಂತೋಷ್‌ ಎಸ್ ಲಾಡ್, ಸಂಸದ ಈ. ತುಕಾರಾಂ, ಕೆ.ಎಂ.ಎಫ್.ಅಧ್ಯಕ್ಷ ಭೀಮಾ ನಾಯಕ್, ವಿಧಾನಪರಿಷತ್ ಸದಸ್ಯಗೋವಿಂದರಾಜ್, ಡಾ. ಬಾಬು ಜಗಜೀವನರಾಂ ಚರ್ಮಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ವಡ್ಡುಗ್ರಾಮ ಪಂಚಾಯತ್‌ ಅಧ್ಯಕ್ಷೆ ನಿಂಗಮ್ಮ ನಾಗರಾಜ್, ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾ, ಜಿ.ಪಂ. ಸಿಇಒ ರಾಹುಲ್ ಶರಣಪ್ಪ ಸಂಕನೂರ, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಉಪವಿಭಾಗಾಧಿಕಾರಿ ಎನ್. ಹೇಮಂತ್, ಗಣ್ಯರಾದ ವಿನಯ್‌ಗುರೂಜಿ ಸೇರಿದಂತೆ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

Facebook
Twitter
LinkedIn
Telegram
Email
Print
WhatsApp

Leave a Comment

Your email address will not be published. Required fields are marked *

Translate »
Scroll to Top