ಖಾಸಗಿ ಬಸ್, ಪ್ಯಾಸೆಂಜರ್ ಆಟೋಗಳ ಮರೆತ ಮಹಿಳೆಯರು.!

ಆಧಾರ್ ಕಾರ್ಡ್ ಹಿಡಿದು ಸರಕಾರಿ ಬಸ್ಗಾಗಿ ತಾಸುಗಟ್ಟಲೆ ಕಾದು ಕುಳಿತುಕೊಳ್ಳುತ್ತಿರುವ ಮಹಿಳೆಯರು

ಪಂಪಾಪತಿಗೌಡ ಬಾದನಹಟ್ಟಿ

ಕುರುಗೋಡು:  ಕಾಂಗ್ರೆಸ್ ಸರಕಾರ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದ ೫ ಗ್ಯಾರಂಟಿ ಯೋಜನೆಗಳ ಪೈಕಿ ಉಚಿತ ಬಸ್ ಪ್ರಯಾಣವು ಅಧಿಕೃತವಾಗಿ ಘೋಷಣೆಯಾಗಿದ್ದು, ಇದರಿಂದ ಖಾಸಗಿ ಬಸ್ ಮತ್ತು ಟಾಟಾ ಎಸಿ ಪ್ಯಾಸೆಂಜರ್ ವಾಹನಗಳ ಮಾಲೀಕರಿಗೆ ಬಿಸಿ ತಟ್ಟಿದೆ.

ಹೌದು ಸುಮಾರು ವರ್ಷಗಳಿಂದ ಖಾಸಗಿ ಬಸ್‌ಗಳು ಹಾಗೂ ಟಾಟಾ ಎಸಿ ಪ್ಯಾಸೆಂಜರ್ ವಾಹನಗಳನ್ನು ಓಡಾಡಿಸುತ್ತಾ, ಇದೇ ವೃತ್ತಿಯನ್ನು ನಂಬಿಕೊಂಡು ಜೀವನ ಸಾಗಿಸುತಿದ್ದ ವಾಹನಗಳ ಮಾಲೀಕರ ಬದುಕು ಸದ್ಯ ಅಡಕತ್ರಿಯಲ್ಲಿ ಸಿಲುಕಿಕೊಂಡಂತಾಗಿದೆ.

ಈಗಾಗಲೇ ಸರಕಾರ ಜೂ.11 ರಂದು ರಾಜ್ಯದ ಮಹಿಳೆಯರಿಗೆ ಉಚಿತ ವಾಗಿ ಪ್ರಯಾಣ ಮಾಡಲು ಗ್ರೀನ್ ಸಿಗ್ನಲ್ ದೊರಕಿದ ಬೆನ್ನಲ್ಲೇ ಮಹಿಳೆಯರು ಖಾಸಗಿ ಬಸ್‌ಗಳಿಗೆ ಹಾಗೂ ಟಾಟಾ ಎಸಿಗಳಿಗೆ ಹೋಗಲು ನಿರಾಕರಿಸುತ್ತಿದ್ದಾರೆ. ಮಹಿಳೆಯರು ತಮ್ಮ ಕೈಯಲ್ಲಿ ಆಧಾರ್‌ಕಾರ್ಡ್ ಹಿಡಿದು ಕೊಂಡು ಸರಕಾರಿ ಬಸ್ ಗಳು ಬರುವವರಿಗೆ ತಾಸುಗಟ್ಟೆಲೆ ಕಾದು ಕುಳಿತುಕೊಂಡು ಅದರಲ್ಲೇ ಪ್ರಯಾಣ ಮಾಡುತ್ತಿದ್ದಾರೆ ಹೊರತು ಖಾಸಗಿ ವಾಹನಗಳಲ್ಲಿ ಪ್ರಯಾಣ ಮಾಡಲು ಮುಂದಾಗುತ್ತಿಲ್ಲ. ಇದರಿಂದ ಖಾಸಗಿ ವಾಹನಗಳ ಮಾಲೀಕರ ಮೈ ಮೇಲೆ ಬರೆ ಎಳೆದಂತಾಗಿದೆ.

 

ಬಸ್‌ಗಳಿಗಾಗಿ ಕಾದು ಕುಳಿತು ಕೊಳ್ಳುವ ಮಹಿಳೆಯರ ಪರಿಸ್ಥಿತಿ ಕೇವಲ ನಗರ, ಪಟ್ಟಣಗಳಲ್ಲಿ ಅಲ್ಲದೆ ಗ್ರಾಮೀಣ ಭಾಗದಲ್ಲಿ ಕೂಡ ಉಲ್ಬಣಗೊಂಡಿದೆ.

ಮುಷ್ಟಗಟ್ಟೆ, ವೀರಾಪುರ, ಎಮ್ಮಿಗನೂರು, ಕಲ್ಲುಕಂಬ ಸೇರಿದಂತೆ ಅನೇಕ ಗ್ರಾಮೀಣ ಭಾಗದಲ್ಲಿ ಓಡಾಡುವ ಖಾಸಗಿ ವಾಹನಗಳ ಸ್ಥಿತಿ ಅದೋಗತಿಗೆ ತಲುಪಿದೆ.

ಖಾಸಗಿ ವಾಹನಗಳು  ಕುರುಗೋಡು ಟು ಬಳ್ಳಾರಿ ಹಾಗೂ ಕುರುಗೋಡು ಟು ಕಂಪ್ಲಿ ಮಾರ್ಗಕ್ಕೆ  ನಿತ್ಯ 3 ರಿಂದ 4 ಬಾರಿ ಓಡಾಡಿ 1000 ರಿಂದ 1500 ವರೆಗೆ ದುಡಿಯುತ್ತಿದ್ದು, ಸದ್ಯ ಸರಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸಿಕ್ಕ ಕಾರಣಕ್ಕಾಗಿ ಸರಿಯಾಗಿ ವಾಹನಗಳು ಓಡಾಡಲು ಆಗುತ್ತಿಲ್ಲ ಇದರ ಪರಿಣಾಮ ಖಾಸಗಿ ವಾಹನಗಳ ಮಾಲೀಕರ ಸ್ಥಿತಿ ಸದ್ಯ ಚಿಂತಾಜನಕ ವಾಗಿದೆ.

ಇದರಿಂದ ಖಾಸಗಿ ವಾಹನಗಳ ಮಾಲೀಕರು ಸರಕಾರ ಯಾವುದೇ ಯೋಜನೆ ಜಾರಿಗೆ ಮಾಡಲಿ ಆದ್ರೆ ಉಚಿತ ಬಸ್ ಪ್ರಯಾಣ ಮಹಿಳೆಯರಿಗೆ ನೀಡಬಾರದಿತ್ತು ಎಂದು ಸರಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.

ಫೈನಾನ್ಸ್ ಮೂಲಕ ಖಾಸಗಿ ವಾಹನಗಳನ್ನು ಖರೀದಿ ಮಾಡಿ ಸಣ್ಣ ಪುಟ್ಟ ಜೀವನ ಸಾಗಿಸುವುದರ ಜೊತೆಗೆ ಮಕ್ಕಳಿಗೆ ಶಿಕ್ಷಣ ಕೊಡಿಸುವುದು, ಚೀಟಿ ಕಟ್ಟುವುದು, ಸಂಸಾರ ನಿರ್ವಹಣೆ ತೂಗಿಸುತಿದ್ದ ವಾಹನಗಳ ಮಾಲೀಕರಿಗೆ ಸದ್ಯ ಸಂಕಷ್ಟ ಎದುರಾಗಿದ್ದು, ಇನ್ಮೇಲೆ ಜೀವನ ನಿರ್ವಹಣೆ ಮಾಡುವುದು ಹೇಗೆ ಎಂಬ ಚಿಂತೆ ಕಾಡಲಾರಂಭಿಸಿದೆ ಎನ್ನುತ್ತಾರೆ ಕೆಲ ಖಾಸಗಿ ಬಸ್‌ಗಳ ಮಾಲೀಕರು.

ಬ್ಯಾಂಕ್‌ನಲ್ಲಿ ಸಾಲ ಸೋಲ ಮಾಡಿ ಖಾಸಗಿ ವಾಹನಗಳನ್ನು ಖರೀದಿ ಮಾಡಿ ಅವುಗಳನ್ನು ಓಡಾಡಿಸುತ್ತಾ ಅದರಿಂದ ಬರುವ ಹಣದಿಂದ ಸಣ್ಣ ಪುಟ್ಟ ಜೀವನ ಸಾಗಿಸಿ ಸಾಲ ಕಟ್ಟುತಿದ್ದ ಮಾಲೀಕರಿಗೆ ಜೀವನ ನಿರ್ವಹಣೆ ಕಷ್ಟಕರ ವಾಗಿದೆ.

ಕುಟುಂಬಗಳಲ್ಲಿ ಅತಿ ಹೆಚ್ಚು ಹೊರಗಡೆ ಸಂಚಾರಿಸುವುದು ಮತ್ತು ಜವಾಬ್ದಾರಿಯನ್ನು ಹೊತ್ತುಕೊಂಡು ಸಂತೆಗೆ, ಸಾಮಾನುಗಳನ್ನು ಖರೀದಿ ಮಾಡಲು ಸೇರಿದಂತೆಇತರೆ ಚಟುವಟಿಕೆಗಳಿಗೆ ಬರುವುದು ಮಹಿಳೆಯರು ಅಂತದ್ರಲ್ಲಿ ಅವರಿಗೆ ಸರಕಾರ ಉಚಿತ ಪ್ರಯಾಣ ಮಾಡಲು ಅವಕಾಶ ಕೊಟ್ಟಿರುವುದರಿಂದ ಖಾಸಗಿ ವಾಹನಗಳ ಕಳೆ ಕಳಚಿ ಬಿದ್ದಂತಾಗಿದೆ. ಇನ್ನೂ ವಿದ್ಯಾರ್ಥಿಗಳು ಸರಿಯಾಗಿ ಬಸ್ ಗಳು ಬರದೆ ಇರುವ ಸಂದರ್ಭದಲ್ಲಿ ಖಾಸಗಿ ವಾಹನಗಳಲ್ಲಿ ದುಡ್ಡು ಕೊಟ್ಟು ಪ್ರಯಾಣ ಮಾಡುತಿದ್ರು. ಇನ್ಮೇಲೆ ಅದು ಕೂಡ ಇಲ್ಲದಂತಾಗಿದ್ದು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಫೈನಾನ್ಸ್ ಮೇಲೆ ಲೋನ್ ತೆಗೆದುಕೊಂಡು ಟಾಟಾ ಎಸಿ ಪ್ಯಾಸೆಂಜರ್  ವಾಹನವನ್ನು ಖರೀದಿ ಮಾಡಿ ಒಂದೂರಿಂದ ಇನ್ನೊಂದೂರಿಗೆ ಓಡಾಡಿಸುತ್ತಾ ಅದರಿಂದ ಕುಟುಂಬ ನಿರ್ವಹಣೆ ಮಾಡುವುದರ ಜೊತೆಗೆ ಅದರಿಂದ ಬರುವ ಹಣದಿಂದ ಮಕ್ಕಳ ಶಿಕ್ಷಣಕ್ಕೆ ಹಾಗೂ ಸಣ್ಣ ಪುಟ್ಟ ಸಾಲ ತೀರಿಸುತಿದ್ದೆವು. ಈಗ ಮಹಿಳೆಯರು ನಮ್ಮ ವಾಹನಗಳ ಹತ್ತಿರ ಬರುತ್ತಿಲ್ಲ. ಇನ್ಮೇಲೆ ನಮ್ಮ ಜೀವನ ಹೇಗೆ ಎಂಬಂತಾಗಿದೆ.

 

ಶ್ರೀಹರಿ ಮಣ್ಣೂರು, ಆಟೋ ಚಾಲಕ

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top