30 ವರ್ಷಗಳಷ್ಟು ಹಿಂದಿನ ಪ್ರಕರಣಕ್ಕೆ ಇವತ್ತು ಯಾಕೆ ಜೀವ ಕೊಟ್ಟಿದ್ದೀರಿ?: ಎಸ್.ಸುರೇಶ್ ಕುಮಾರ್

ಬೆಂಗಳೂರು: ಕಾಂಗ್ರೆಸ್ ಸರಕಾರದ ಶ್ರೀರಾಮವಿರೋಧಿ, ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ‘ನಾನೊಬ್ಬ ಕರಸೇವಕ, ನನ್ನನ್ನೂ ಬಂಧಿಸಿ’ ಎಂಬ ಅಭಿಯಾನದಡಿ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಇಂದು ಮಲ್ಲೇಶ್ವರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.

 

ಅಯೋಧ್ಯೆ ಅಭಿಯಾನದ ಘಟನಾವಳಿಗಳಿಗೆ ನಾನು ಕೂಡ ಸಾಕ್ಷಿಯಾಗಿದ್ದೆ. ಇದೀಗ ಸರಕಾರವು ಕರಸೇವಕರನ್ನು ಬಂಧಿಸುತ್ತಿದೆ. ಇದನ್ನು ವಿರೋಧಿಸಿ ನಾನು ಪ್ರತಿಭಟನೆಗೆ ಬಂದಿದ್ದೇನೆ ಎಂದು ಎಸ್.ಸುರೇಶ್ ಕುಮಾರ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಮಂದಿರ ವಹೀ ಬನಾಯೇಂಗೇ ಎಂಬುದು ನಮ್ಮ ಘೋಷವಾಕ್ಯವಾಗಿತ್ತು. ಇವತ್ತು ಮಂದಿರವಲ್ಲೇ ಕಟ್ಟಿದೆವು ಎಂಬ ಕಾಲಕ್ಕೆ ಬಂದಿದ್ದೇವೆ. ಜನವರಿ 22ರಂದು ಮಂದಿರದ ಉದ್ಘಾಟನೆ ಹಾಗೂ ಶ್ರೀರಾಮಲಲಾನ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಸಹಜವಾಗಿ ಇಲ್ಲಿನ ಕಾಂಗ್ರೆಸ್ ಸರಕಾರಕ್ಕೆ ಇದನ್ನು ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಟೀಕಿಸಿದರು.

 

30 ವರ್ಷಗಳ ಹಿಂದಿನ ಕೇಸನ್ನು ರೀ ಓಪನ್ ಮಾಡಿ ಕರಸೇವಕರನ್ನು ಸರಕಾರ ಬಂಧಿಸುತ್ತಿದೆ. ಈಗ ಬಂಧಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು. ಈಗಿನದು ಬಿಜೆಪಿ ಶ್ರೀರಾಮ ಎಂದು ಕಾಂಗ್ರೆಸ್‍ನವರು ಹೇಳುತ್ತಾರೆ. ಹಾಗಿದ್ದರೆ ಡಿಸೆಂಬರ್ 6ಕ್ಕೆ ಮೊದಲು ಇದ್ದುದು ಕಾಂಗ್ರೆಸ್ ಮಸೀದಿಯೇ ಎಂದು ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರವಾಗಿ ಕೇಳಿದರು.

ಹರಿಪ್ರಸಾದ್ ಅವರ ಹೇಳಿಕೆಯು ಅವರ ಕೆಳಮಟ್ಟದ ಮನಸ್ಥಿತಿಯನ್ನು ತೋರಿಸುತ್ತದೆ. ಹಿಂದೆ ನರೇಂದ್ರ ಮೋದಿಯವರಿಗೆ ಬೈದದ್ದು ಗೊತ್ತಿದೆ ಎಂದು ಈ ಸಂಬಂಧ ಪ್ರಶ್ನೆಗೆ ಉತ್ತರ ಕೊಟ್ಟರು. ಇವತ್ತು ಯಾರನ್ನಾದರೂ ಕ್ರಿಮಿನಲ್ ಎನ್ನಲು ಕಾಂಗ್ರೆಸ್ಸಿಗರು ಸಿದ್ಧರಾಗಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. 30 ವರ್ಷಗಳಷ್ಟು ಹಿಂದಿನ ಪ್ರಕರಣಕ್ಕೆ ಇವತ್ತು ಯಾಕೆ ಜೀವ ಕೊಟ್ಟಿದ್ದೀರಿ? ಅವರು ಕರಸೇವಕ ಎಂಬ ಕಾರಣಕ್ಕೇ ರೀಓಪನ್ ಮಾಡಿದ್ದಾಗಿ ನಮ್ಮ ಬಲವಾದ ನಂಬಿಕೆ ಎಂದು ತಿಳಿಸಿದರು.

 

ಮಾಜಿ ಸಚಿವ ರಾಮಚಂದ್ರ ಗೌಡ ಅವರು ಉಪಸ್ಥಿತರಿದ್ದರು. ಸ್ಥಳದಲ್ಲಿದ್ದ ಕಾರ್ಯಕರ್ತರು ಇದೇವೇಳೆ ಜೈ ಶ್ರೀರಾಮ್, ಜೈಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top