ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಮಂತ್ರಿಗಳು-ನಮ್ಮ‌ ಸಂಸದರು ನಮಗಾಗುತ್ತಿರುವ ಅನ್ಯಾಯದ ವಿರುದ್ಧ ಬಾಯಿ ಬಿಡದೆ ಅನ್ಯಾಯವನ್ನು ಸಮರ್ಥಿಸುತ್ತಿದ್ದರೆ ರಾಜ್ಯದ ಭವಿಷ್ಯದ ಗತಿ ಏನು: ಸಿಎಂ ಪ್ರಶ್ನೆ

ನಾವು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡ ಮೇಲೆ ಚೀನಾ ಮಾದರಿ ಏಕಸ್ವಾಮ್ಯವನ್ನು ಸಹಿಸಲು , ಅಮೆರಿಕದ ಅಧ್ಯಕ್ಷೀಯ ಮಾದರಿ ಆಡಳಿತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಸಿ.ಎಂ.ಸಿದ್ದರಾಮಯ್ಯ

ಅತಿ ಹೆಚ್ಚು ತೆರಿಗೆ ಕಟ್ಟುವ ನಮ್ಮ ರಾಜ್ಯಕ್ಕೆ ಅನ್ಯಾಯ ಆಗದಂತೆ ತಡೆಯಲು ಸಂವಿಧಾನ ತಿದ್ದುಪಡಿ ಮಾಡಿ ಸೆಸ್ ಮತ್ತು ಸರ್ ಚಾರ್ಜ್ ನಲ್ಲೂ ನಮಗೆ ಪಾಲು ಕೊಡಬೇಕು:  ಸಿ.ಎಂ.ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು : ನಾವು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡ ಮೇಲೆ ಚೀನಾ ಮಾದರಿ ಏಕಸ್ವಾಮ್ಯವನ್ನು ಸಹಿಸಲು , ಅಮೆರಿಕದ ಅಧ್ಯಕ್ಷೀಯ ಮಾದರಿ ಆಡಳಿತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಎಕ್ಸ್ (ಟ್ವಿಟರ್) ಸ್ಪೇಸ್ ನಲ್ಲಿ ಇಂದು ನಡೆದ  ನಮ್ಮ ಹಕ್ಕು ನಮ್ಮ ತೆರಿಗೆ ಕನ್ನಡಿಗರ ಅಭಿಯಾನದ ಕುರಿತ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿದರು.

ಸಂವಿಧಾನ ಬದ್ದವಾದ ಒಕ್ಕೂಟ ವ್ಯವಸ್ಥೆಯನ್ನು ಇಡಿ ದೇಶ ಒಪ್ಪಿಕೊಂಡಿದೆ. ರಾಜ್ಯ ಮತ್ತು ಕೇಂದ್ರಗಳಿಗೆ ಜನರ ತೆರಿಗೆ ಹಣ ಹಂಚಿಕೆ ಆಗುತ್ತದೆ. ಇದಕ್ಕಾಗಿ 5 ವರ್ಷಕ್ಕೊಮ್ಮೆ ಹಣಕಾಸು ಆಯೋಗ ರಚನೆಯಾಗಿ ಇದರ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡುತ್ತದೆ.

 

15 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಬಹಳ ದೊಡ್ಡ ಪ್ರಮಾಣದಲ್ಲಿ ಅನ್ಯಾಯ ಆಗಿದೆ. 14 ನೇ ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲು ಹಂಚಿಕೆ 4.71% ಇದ್ದದ್ದು 15ನೇ ಹಣಕಾಸು ಆಯೋಗದಲ್ಲಿ  3.64 % ಕ್ಕೆ ಕಡಿತ ಮಾಡಿಬಿಟ್ಟರು. ಅಂದರೆ 1.07% ನಮಗೆ ಕಡಿತ ಆಗಿ ಇದರಿಂದ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ 5 ವರ್ಷದಲ್ಲಿ ದೊಡ್ಡ ಹೊಡೆತ ಬಿದ್ದು  ರಾಜ್ಯಕ್ಕೆ 1,87000 ಕೋಟಿ ನಷ್ಟ ಆಗಿದೆ. ಅಂದರೆ ನಾವು ಕೊಡುವ ತೆರಿಗೆಯ 100 ರೂನಲ್ಲಿ ನಮಗೆ ವಾಪಾಸ್ ಬರೋದು ಕೇವಲ 12-13 ರೂ ಮಾತ್ರ. 

ಬೆಂಗಳೂರು ಫೆರಿಫೆರಲ್ ನಿರ್ಮಾಣ ಮತ್ತು ಕೆರೆಗಳ ಅಭಿವೃದ್ದಿಗೆ 6000 ಕೋಟಿ ಸೇರಿ ಒಟ್ಟು 11495 ಕೋಟಿ ವಿಶೇಷ ಅನುದಾನ ಕೊಡಲು ಆಯೋಗ ಶಿಫಾರಸ್ಸು ಮಾಡಿತ್ತು. ಇದನ್ನು ಕೊಡಬಾರದು ಎಂದು ತೀರ್ಮಾನ ಮಾಡಿ ತಡೆದವರು ನಿರ್ಮಲಾ ಸೀತಾರಾಮನ್. ರಾಜ್ಯದಿಂದ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಇಷ್ಟು ದೊಡ್ಡ ಅನ್ಯಾಯ ಮಾಡಿಬಿಟ್ಟರು.

ಸೆಸ್ ಮತ್ತು ಸರ್ ಚಾರ್ಜ್ ನಿಂದ ಸಂಗ್ರಹ ಆಗಿದ್ದ ತೆರಿಗೆರಲ್ಲಿ ಒಂದು ರೂಪಾಯಿಯನ್ನೂ ಕೇಂದ್ರ ರಾಜ್ಯಗಳಿಗೆ ಕೊಡುವುದಿಲ್ಲ. ಆದ್ದರಿಂದ ಇದರಲ್ಲೂ ನಾವು ರಾಜ್ಯಗಳು ಪಾಲು ಕೇಳಬೇಕು ಎಂದು ತೀರ್ಮಾನ ಮಾಡಿದ್ದೇವೆ. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತನ್ನಿ ಎಂದು ನಾನು ಒತ್ತಾಯಿಸುತ್ತೇನೆ. ಇದಕ್ಕೇ ನಾನು ಹೇಳೋದು, “ನನ್ನ ತೆರಿಗೆ ನನ್ನ ಹಕ್ಕು” ಎಂದು ನಾನು ಹೇಳೋದು.

ರಾಜ್ಯಗಳ ಅಭಿವೃದ್ಧಿಗೆ ಸೆಸ್, ಸರ್ ಚಾರ್ಜ್ ನಲ್ಲಿ ಪಾಲು ಕೊಡಲೇಬೇಕು. ರಾಜ್ಯಗಳ ಅಭಿವೃದ್ಧಿ ಆಗದೆ ದೇಶದ ಅಭಿವೃದ್ಧಿ ಹೇಗೆ ಸಾಧ್ಯ? ರಾಜ್ಯಗಳು ದುರ್ಬಲ ಆದ್ರೆ ದೇಶ ದುರ್ಬಲ ಆಗ್ತದೆ. ರಾಜ್ಯಗಳು ಸುಭದ್ರ ಆಗಿದ್ದರೆ ದೇಶವೂ ಸುಭದ್ರ ಆಗ್ತದೆ.

ದೇಶ ಅಂದರೆ ರಾಜ್ಯಗಳ ಒಕ್ಕೂಟ. ತೆರಿಗೆ ವಸೂಲಾಗೋದೇ ರಾಜ್ಯಗಳಿಂದ. ಹೀಗಿದ್ದಾಗ ರಾಜ್ಯಗಳಿಗೆ ನ್ಯಾಯಯುತವಾದ ತೆರಿಗೆ ಕೊಡಿ ಎನ್ನುವುದು ನಮ್ಮ ಒತ್ತಾಯ.

 

ಅಭಿವೃದ್ಧಿಯನ್ನೇ ಮಾಡದ ಉತ್ತರ ಪ್ರದೇಶಕ್ಕೆ 2,18,000 ಸಾವಿರ ಕೋಟಿಗೂ ಅಧಿಕ ಹಣ ಹೋಗ್ತದೆ. ನಮಗೆ 52000 ಸಾವಿರ ಕೋಟಿ ಮಾತ್ರ ಕೊಡ್ತಾರೆ. ಇದನ್ನು ಸಹಿಸಬೇಕಾಆದರೆ ಉತ್ತರ ಪ್ರದೇಶದ ಜನಸಂಖ್ಯೆ ಹೆಚ್ಚಾಗಿದ್ದರೂ ಅವರಿಂದ ಬರುವ ತೆರಿಗೆ ಕಡಿಮೆ. ಉತ್ತರ ಪ್ರದೇಶಕ್ಕೆ ಕೊಡಬೇಡಿ ಎನ್ನುವುದು ನಮ್ಮ ವಾದವಲ್ಲ. ನಮಗೆ ಅನ್ಯಾಯ ಮಾಡಬೇಡಿ ಎನ್ನುವುದು ನಮ್ಮ ಆಗ್ರಹ. 

ಮೋದಿ ಅವರು ಪ್ರಧಾನಿ ಆದ ಬಳಿಕ ಕಾರ್ಪೋರೇಟ್ ಮೇಲಿನ ತೆರಿಗೆ ಪ್ರಮಾಣವನ್ನು 30% ನಿಂದ 22.5%ಕ್ಕೆ ಇಳಿಸಿದರು. ಕಾರ್ಪೋರೇಟ್ ಗಳಿಗೆ ಕಡಿಮೆ ಮಾಡಿ ಅದರ ಹೊರೆಯನ್ನು ಜನಸಾಮಾನ್ಯರ ಮೇಲೆ ಹೇರಿದರು. ಅಂದರೆ ಬಡವರು, ಮಧ್ಯಮ ವರ್ಗದವರಿಂದ ತೆರಿಗೆ ವಸೂಲಿ ಮಾಡುವುದನ್ನು ಹೆಚ್ಚೆಚ್ಚೆ ಮಾಡುತ್ತಲೇ ಹೋಗುತ್ತಿದ್ದಾರೆ.

ನಮ್ಮ ಸಂಸದರು, ಕೇಂದ್ರದಲ್ಲಿ ಮಂತ್ರಿಗಳಾಗಿರುವವರು ಯಾರೂ ದೆಹಲಿಯಲ್ಲಿ ಈ ಅನ್ಯಾಯವನ್ನು ಪ್ರಶ್ನಿಸುವುದೇ ಇಲ್ಲ. ನಾವು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಲೇ ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದುಕೊಂಡು , ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುತ್ತೇವೆ.

ಸಾಮಾನ್ಯ ಜನರ ಖರ್ಚಿನ ಮೇಲೆ ಹಾಕುವ GST ತೆರಿಗೆ ಪ್ರಮಾಣ ಕಡಿಮೆ ಆಗಿ, ಶ್ರೀಮಂತರು ಬಳಸುವ ಐಷಾರಾಮಿ ವಸ್ತುಗಳ ಮೇಲೆ GST ಹೆಚ್ಚಿಸಲೇಬೇಕು.

ತಮ್ಮ ಆದಾಯಕ್ಕೂ ತೆರಿಗೆ ಕಟ್ಟಿ, ತಾವು ಮಾಡುವ ಖರ್ಚಿಗೂ ತೆರಿಗೆ ಕಟ್ಟುವ ಜನರು ಅವರ ಹಣಕ್ಕೆ, ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಅರ್ಥ ಮಾಡಿಕೊಳ್ಳಬೇಕು.

ಇದೇ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ 50 % ತೆರಿಗೆ ಪಾಲು ಕೊಡಿ ಎಂದು ಕೇಂದ್ರಕ್ಕೆ ಕೇಳಿದ್ದರು. ರಾಜ್ಯಗಳು ಭಿಕ್ಷುಕರಾ ಎಂದು ಮೋದಿ ಕೇಳಿದ್ದರು. ಕೇಂದ್ರಕ್ಕೆ ಒಂದು ರೂಪಾಯಿ ತೆರಿಗೆಯನ್ನೂ ಕೊಡುವುದಿಲ್ಲ. ಎಲ್ಲವನ್ನೂ ರಾಜ್ಯವೇ ಇಟ್ಟುಕೊಳ್ತೀವಿ ಎಂದು ಇದೇ ನರೇಂದ್ರ ಮೋದಿ ಹೇಳಿದ್ದರು. ಈಗ ಪ್ರಧಾನಿ ಆದ ಮೇಲೆ ಉಲ್ಟಾ ಮಾತಾಡುತ್ತಿದ್ದಾರೆ.

 

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನಾನು ಸದನದಲ್ಲಿ ಪದೇ ಪದೇ ಹೇಳಿದ್ದೆ. “ಯಡಿಯೂರಪ್ಪ, ಬೊಮ್ಮಾಯಿ ಇಬ್ಬರೂ ಮುಖ್ಯಮಂತ್ರಿಗಳಾಗಿ ರಾಜ್ಯದ ಪಾಲನ್ನು ತರಲು ಪ್ರಯತ್ನಿಸಲೇ ಇಲ್ಲ. ಈಗ ಪ್ರಹ್ಲಾದ್ ಜೋಶಿಯವರೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಪ್ರಶ್ನೆ ಮಾಡದೆ, ಅನ್ಯಾಯವನ್ನು ಸಮರ್ಥಿಸುತ್ತಿದ್ದಾರೆ. ಇವರು ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ ಎನ್ನುವುದನ್ನೇ ಮರೆತು ಮಾತಾಡಿದ್ದಾರೆ.

ನಾವು ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ಹೀಗಿದ್ದಾಗ ಚೀನಾ ರೀತಿಯ ಕೇಂದ್ರದ ಏಕಸ್ವಾಮ್ಯ ಮತ್ತು ಅಮೆರಿಕದ ಅಧ್ಯಕ್ಷೀಯ ಮಾದರಿಯ ಆಡಳಿತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾವು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ ಪರವಾಗಿ ಇರುವವರು ಎಂದು ಸ್ಪಷ್ಟಪಡಿಸಿದರು.

 

ಕನ್ನಡ ಬಾವುಟ ಮತ್ತು ದ್ವಿಭಾಷಾ ನೀತಿಯ ವಿಚಾರದಲ್ಲೂ ಜನ ಎಚ್ಚೆತ್ತುಕೊಂಡು ಹೋರಾಟ ಮಾಡುವ ಅಗತ್ಯವಿದೆ. ಭಾಷೆಯಾಗಿ ಯಾವ ಭಾಷೆಯನ್ನಾದರೂ ಕಲಿಯಬಹುದು. ಆದರೆ ಕನ್ನಡದ ಮೇಲೆ ಹಿಂದಿ ಅಥವಾ ಇತರೆ ಭಾಷೆಯ ಹೇರಿಕೆ, ಸಾಂಸ್ಕೃತಿಕ ಹೇರಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top