ಹತ್ತು ವರ್ಷದಲ್ಲಿ ಮೋದಿ ಏನು ಅಭಿವೃದ್ದಿ ಮಾಡಿದ್ದಾರೆ ಹೇಳಲಿ – ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ.

ಕಲಬುರಗಿ: ಕಲಬುರಗಿಯಲ್ಲಿ ಏಮ್ಸ್ ಸ್ಥಾಪಿಸಿ ಎಂದು ಮೋದಿಗೆ ಮನವಿ ಮಾಡಿದೆ ಆದರೆ ತಿರಸ್ಕಾರ ಮಾಡಿದರು

 ಮೋದಿ ಅವರು ಇಲ್ಲಿಗೆ ಬಂದು ಹೋಗಿದ್ದಾರೆ ತಮ್ಮ ಹತ್ತು ವರ್ಷಗಳ ಅವಧಿಯಲ್ಲಿ ಈ ಭಾಗಕ್ಕೆ ಏನು ಕೊಟ್ಟಿದ್ದಾರೆ ಹೇಳಬೇಕಿತ್ತು ಎಂದು ರಾಜ್ಯ ಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ನಾಮಪತ್ರ ಸಲ್ಲಿಸಿದ ನಂತರ ಎನ್ ವಿ ಕಾಲೇಜು ಮೈದಾನದಲ್ಲಿ ನಡೆದ ಸಾರ್ವಜನಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಕಲಬುರಗಿಯಲ್ಲಿ ಇಎಸ್ ಐ ಆಸ್ಪತ್ರೆ ಕಟ್ಟಿದ್ದೇವೆ. ಅಲ್ಲಿ ಏಮ್ಸ್ ನಿರ್ಮಾಣ ಮಾಡಲು ಮೋದಿ ಅವರಿಗೆ ಮನವಿ ಮಾಡಿದ್ದೆ. ಆದರೆ ನನ್ನ ಮೇಲೆ ಏನು ಸಿಟ್ಟು ಗೊತ್ತಿಲ್ಲ ನಮ್ಮ ಮನವಿಯನ್ನು ಪುರಸ್ಕರಿಸಲಿಲ್ಲ. ನನ್ನ ಅವಧಿಯಲ್ಲಿ ಮಂಜೂರಾಗಿದ್ದ ರೇಲ್ವೆ ವಲಯ ಯೋಜನೆ ವಾಪಸ್ ಹೋಗಿದೆ. ನಾನು ನನ್ನ ಅವಧಿಯಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳಲ್ಲಿ ಶೇ 10 ರಷ್ಟು ಅಭಿವೃದ್ಧಿ ಮಾಡಿದ್ದರೆ ತೋರಿಸಲಿ ಆಗ ನಾನು ಶಹಬ್ಬಾಶ್ ಎನ್ನುತ್ತೇನೆ ಎಂದು ಸವಾಲು ಹಾಕಿದರು.

ಮೋದಿ ತಮ್ಮ ಗ್ಯಾರಂಟಿ ಏನು ಎಂದು ಮೊದಲು ಜನರಿಗೆ ತಿಳಿಸಲಿ ಎಂದು ಆಗ್ರಹಿಸಿದ ಖರ್ಗೆ ನಾವು ರಾಜ್ಯದಲ್ಲಿ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳ ರೀತಿಯಲ್ಲೇ ತಮ್ಮ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ ಆದರೆ ಯಾವ ಗ್ಯಾರಂಟಿ ಎಂದು ಹೇಳಿಲ್ಲ ಎಂದರು. ಪೆಟ್ರೋಲ್ ಡಿಸೇಲ್, ಗ್ಯಾಸ್ ಸಿಲಂಡರ್ ಬೆಲೆ ಏರಿದೆ ಮೋದಿಯವರೇ ಇದೇನೆ ನಿಮ್ಮ ಗ್ಯಾರಂಟಿನಾ? ಪ್ರತಿವರ್ಷ ಎರಡು ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಹೇಳಿ, ಉದ್ಯೋಗ ಕೊಡಲಿಲ್ಲ ಇದು ನಿಮ್ಮ ಗ್ಯಾರಂಟಿನಾ? ಪ್ರತಿಯೊಬ್ಬರಿಗೆ ಹದಿನೈದು ಲಕ್ಷ ಕೊಡುತ್ತೇನೆ ಎಂದಿದ್ದರು, ಕೊಟ್ಟರಾ? ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದರು, ಮಾಡಿದ್ದಾರ? ಎಂದು ಪಶ್ನಿಸಿದರು.

ತಮ್ಮ ಅವಧಿಯಲ್ಲಿ ಕೈಗೊಂಡ ಅಭಿವೃದ್ದಿ ಕೆಲಸಗಳ ಪಟ್ಟಿ ನೀಡಿದ ಖರ್ಗೆ, ರಾಷ್ಟ್ರೀಯ ಹೆದ್ದಾರಿ, ಕೇಂದ್ರಿಯ ವಿಶ್ವವಿದ್ಯಾಲಯ ಸ್ಥಾಪಿಸಿದ್ದೇನೆ. ಮೂವತ್ತೇಳು ಹೊಸ ರೈಲು ಓಡಿಸಿದ್ದೇನೆ. ಜವಳಿ ಪಾರ್ಕ್ ಮಂಜೂರು ಮಾಡಿಸಿದ್ದೇನೆ. ಇವುಗಳನ್ನು ನೀವು ಮಾಡಿ ಎಂದು ನನಗೆ ಯಾರೂ ಹೇಳಿರಲಿಲ್ಲ. ಆದರೆ ನಮ್ಮ ಭಾಗದ ಅಭಿವೃದ್ದಿಗಾಗಿ ಕೆಲಸ ಮಾಡಿದ್ದೇನೆ ಈಗ ಓಟು ಕೇಳುತ್ತಿದ್ದೇನೆ. ಅಭಿವೃದ್ದಿ ಆಗಬೇಕೆಂದರೆ ಕಾಂಗ್ರೆಸ್ ಗೆ ಮತ ನೀಡಿ, ಕಳೆದ ಸಲದ ಸೋಲಿನ ಸೇಡು ತೀರಿಸಿಕೊಳ್ಳಿ ಎಂದು ಮನವಿ ಮಾಡಿದರು.

ಬಿಜೆಪಿ ಬಳಿ ವಾಷಿಂಗ್ ಮಷಿನ್ ಇದೆ. ಯಾರನ್ನೂ ಭ್ರಷ್ಟಾಚಾರಿಗಳು ಎಂದು ಹೇಳಿ ಜೈಲಿಗೆ ಹಾಕುತ್ತಾರೋ ಅಂತವರನ್ನೇ ಆ ಮಷಿನ್ ಮೂಲಕ ಪಕ್ಷಕ್ಕೆ ಸೇರಿಸಿಕೊಂಡು ಅವರನ್ನು ಒಳ್ಳೆಯವರು ಎಂದು ಬಿಂಬಿಸುತ್ತಾರೆ ಎಂದು ವ್ಯಂಗ್ಯವಾಡಿದ ಖರ್ಗೆ, ಭ್ರಷ್ಟಾಚಾರಿಗಳನ್ನು ಬಿಡುವುದಿಲ್ಲವೆಂದು ಮೋದಿ ಹಾಗೂ ಶಾ ಹೇಳುತ್ತಾರೆ. ಬಿಡುವ ಮಾತಿರಲಿ ನಿಮ್ಮ ಪಕ್ಕದಲ್ಲೇ ಕೂಡಿಸಿಕೊಂಡಿದ್ದೀರಲ್ಲ ಎಂದು ಟಾಂಗ್ ನೀಡಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾವುದೇ ಕಂಪನಿಯಲ್ಲಿ ಯುವಕ ಯುವತಿಯರು ಅಂಪ್ರೆಟಿಸಿಪ್ ಮಾಡಿ ಬಂದರೆ ಅವರಿಗೆ ಉದ್ಯೋಗ ನೀಡಲಾಗುವುದು. ರೈತರ ಸಾಲ ಮನ್ನಾ ಮಾಡಲಾಗುವುದು. ಮಹಿಳೆಯರಿಗೆ ಪ್ರತಿ ವರ್ಷ ಒಂದು ಲಕ್ಷ ನೀಡಲಾಗುವುದು. ಒಟ್ಟಾರೆ ೨೫ ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು ಎಂದರು. ಅಭಿವೃದ್ದಿ ಕೆಲಸ ಮಾಡಿದರೂ ಮತ ಬೀಳದಿರುವ ಬಗ್ಗೆ ನೋವಿನಿಂದ ಮಾತಮಾಡಿದ ಖರ್ಗೆ ನಮ್ಮ ಅಭಿವೃದ್ದಿ ಕೆಲಸ ಮಾಡಿದರೂ ಮತದಾರರು ಮತಗಟ್ಟೆ ಒಳಗೆ ಹೋದ ನಂತರ ಖರ್ಗೆ ಅವರನ್ನು ಮರೆತುಬಿಡುತ್ತಾರೆ. ಆದರೆ ಈ ಸಲ ಹಾಗೆ ಮಾಡಬೇಡಿ, ರಾಧಾಕೃಷ್ಣ ಅವರಿಗೆ ಓಟು ಕೊಟ್ಟು ಗೆಲ್ಲಿಸಿ ಮುಂದಿನ ಐದು ವರ್ಷದಲ್ಲಿ ಏನು ಬದಲಾವಣೆ ಮಾಡುತ್ತೇನೆ ನೋಡಿ. ಈ ಭಾಗವನ್ನು ನಿಜವಾದ ಕಲ್ಯಾಣ ಕರ್ನಾಟಕವನ್ನಾಗಿ ಮಾಡಿ ತೋರಿಸುತ್ತೇನೆ ಎಂದು ವಾಗ್ದಾನ ಮಾಡಿದರು.

ಈ ಚುನಾವಣೆ ಕೇವಲ ರಾಧಾಕೃಷ್ಣ ಅಥವಾ ಕಾಂಗ್ರೆಸ್ ಚುನಾವಣೆಯಲ್ಲ ಬದಲಿಗೆ ದೇಶದ ಸಂವಿಧಾನ, ಪ್ರಜಾಸತ್ತೆ ಉಳಿಸುವ ಚುನಾವಣೆಯಾಗಲಿದೆ. ಪ್ರತಿಯೊಂದು ಸಂಸ್ಥೆಗಳಲ್ಲಿ ಆರ್ ಎಸ್ ಎಸ್ ಹುಡುಗರನ್ನು ಸೇರಿಸುತ್ತಿದ್ದಾರೆ.ಹಾಗಾಗಿ ಪ್ರಜಾತಂತ್ರ ಉಳಿಯಬೇಕು ಹಾಗೂ ಈಭಾಗ ಬೆಳೆಯಬೇಕು ಎನ್ನುವ ಇಚ್ಛೆ ಇದ್ದರೆ ಕಾಂಗ್ರೆಸ್ ಗೆ ಮತ ನೀಡಿ ಎಂದು ಮನವಿ ಮಾಡಿ ನಿಮ್ಮ ದರ್ಶನಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದರು.

ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ ಮೋದಿ ಅವರು ಇಲ್ಲಿ ಬಂದು ದ್ವೇಷದ ಪ್ರಚಾರ ಪ್ರಾರಂಭಿಸಿದ್ದಾರೆ. ಆದರೆ

ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಇದೂವರೆಗೆ ಕೈಗೊಂಡ ಅಭಿವೃದ್ದಿ ಕಾರ್ಯಗಳ ಅದರಲ್ಲೂ ಆರ್ಟಿಕಲ್  371 ಜೆ ಜಾರಿಗೆ ತಂದಿರುವುದಕ್ಕೆ ಪ್ರತಿಯಾಗಿ ನೀವೆಲ್ಲ ರಾಧಾಕೃಷ್ಣ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರಿಗೆ ಉತ್ತರ ನೀಡಬೇಕು ಎಂದರು.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಲಾಭವನ್ನು ವಿವರಿಸಿದ ಅವರು ಖರ್ಗೆ ಸಾಹೇಬರು ಹಾಗೂ ಸಿದ್ದರಾಮಯ್ಯನವರು ಜೊತೆಗೂಡಿ ಈ ಯೋಜನೆಗಳನ್ನು ರೂಪಿಸಿದ್ದರು. ನಾನು ಹಾಗೂ ಸಿಎಂ ಸಿದ್ದರಾಮಯ್ಯನವರು ಗ್ಯಾರಂಟಿ ಕಾರ್ಡ್ಗಳಿಗೆ ಸಹಿ ಹಾಕಿ ಕಳಿಸಿ ಅದರಂತೆ ನಡೆದುಕೊಂಡಿದ್ದೇವೆ. . ಈಗ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇದೇ ತರಹದ ಗ್ಯಾರಂಟಿಗಳನ್ನು ಜಾರಿಗೆ ತರಲಿದ್ದೇವೆ. ಅದರಂತೆ ಪ್ರತಿ ಮಹಿಳೆಯರಿಗೆ ವಾರ್ಷಿಕ ರೂ 1 ಲಕ್ಷ ಅನುದಾನ ನೀಡಲಾಗುವುದು. ಶ್ರಮಿಕರಿಗಾಗಿ ಪ್ರತಿದಿನ 400 ರೂಪಾಯಿ ರಾಷ್ಟ್ರೀಯ ಕನಿಷ್ಠ ವೇತನ ನೀಡಲಾಗುವುದು ಎಂದರು.

ಬಡವರ ಪರವಾದ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಖರ್ಗೆ ಸಾಹೇಬರ ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬರಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗೆಲ್ಲಿಸಿಕೊಟ್ಟಂತೆ ಈ ಸಲದ ಲೋಕಸಭೆ ಚುನಾವಣೆಯಲ್ಲಿ 25 ಕ್ಕೂ ಅಧಿಕ ಸ್ಥಾನ ಗೆಲ್ಲಿಸಬೇಕು ಇದು ಎಲ್ಲರ ಆಸೆಯಾಗಿದೆ. ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ಅವರನ್ನು ಗೆಲ್ಲಿಸುವ ಮೂಲಕ ಖರ್ಗೆ ಸಾಹೇಬರ ಕೈ ಬಲಪಡಿಸಿ ಎಂದು ಮನವಿ ಮಾಡಿದರು. ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರು ಸೌಮ್ಯ ಸ್ವಭಾವದವರು. ಅವರು ನಿಮ್ಮ ಸೇವೆಗೆ ಈಗ ಸಜ್ಜಾಗಿದ್ದಾರೆ. ಅವರನ್ನು ಕನಿಷ್ಠ ೫ ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ವೇದಿಕೆಯ ಮೇಲೆ ಎಐಸಿಸಿ ಕಾರ್ಯದರ್ಶಿ ರಂದೀಪ್ ಸುರ್ಜೆವಾಲಾ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಸಚಿವರಾದ ಶರಣಪ್ರಕಾಶ ಪಾಟೀಲ್, ಪ್ರಿಯಾಂಕ್ ಖರ್ಗೆ, ಶರಣಬಸಪ್ಪ ದರ್ಶನಾಪುರ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಸಿಎಂ ಸಲಹೆಗಾರರಾದ ಬಿ.ಆರ್.ಪಾಟೀಲ, ಕೆಕೆಆರ್ ಡಿ ಬಿ ಅಧ್ಯಕ್ಷ ಅಜಯ್ ಸಿಂಗ್, ಶಾಸಕರಾದ ಎಂವೈ ಪಾಟೀಲ, ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ಯುಬಿ ವೆಂಕಟೇಶ್, ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಬಸನಗೌಡ ತುರ್ವಿಹಾಳ, ತಿಪ್ಪಣ್ಣಪ್ಪ ಕಮಕನೂರು,ಮಾಜಿ ಸಚಿವರಾದ ರಾಜಶೇಖರ್ ಪಾಟೀಲ ಹುಮನಾಬಾದ್, ಎಚ್ ಎಂ ರೇವಣ್ಣ, ಬಾಬುರಾವ ಚಿಂಚನಸೂರು, ಮಾಜಿ ಲೋಕಸಭಾ ಸದಸ್ಯರಾದ ವಿ.ಎಸ್ ಉಗ್ರಪ್ಪ, ವಿ.ವಸಂತಕುಮಾರ್, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಬಸರೆಡ್ಡಿ ಪಾಟೀಲ ಅನಪೂರ, ಭಾಗನಗೌಡ ಸಂಕನೂರು, ಶ್ರೇಣಿಕ ಕುಮಾರ ಧೋಕಾ, ಶಿವಾನಂದ ಪಾಟೀಲ, ಡೇವಿಡ್ ಸಿಮೆಯೋನ, ಶರಣುಮೋದಿ, ಮಹಜರ್ ಖಾನ್, ಕಿರಣ್ ದೇಶಮುಖ, ಪ್ರವೀಣ ಹರವಾಳ, ರಾಜೀವ್ ಜಾನೆ, ಭೀಮಣ್ಣ ಸಾಲಿ, ನಾಗರೆಡ್ಡಿ ಪಾಟೀಲ ಕರದಾಳ, ನೀಲಕಂಠ ಮೂಲಗೆ, ಡಿ.ಜಿ.ಸಾಗರ, ಭೀಮಣ್ಣ ಸಾಲಿ ಸೇರಿದಂತೆ ಹಲವರಿದ್ದರು.

 

 

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top