ಬೆಂಗಳೂರು: “ನಮ್ಮ ಸಂವಿಧಾನವನ್ನು ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡುವುದಕ್ಕಾಗಿ ನಾವು ಒಗ್ಗಟ್ಟಾಗಿರಬೇಕು” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರಜುನ ಖರ್ಗೆಯವರು ತಿಳಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು;
“ಭಾರತದ ಇತಿಹಾಸದಲ್ಲಿ ಜನವರಿ 26 ವಿಶೇಷವಾದ ದಿನ. ಈ ದೇಶದಲ್ಲಿ ಸಂವಿಧಾನ ಅಸ್ತಿತ್ವದಲ್ಲಿ ಇರದಿದ್ದರೆ ನಾವು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಆಗುತ್ತಿರಲಿಲ್ಲ. ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದ ಮತ್ತು ಸಂವಿಧಾನ ಸಭೆಯ ನಾಯಕರು ಸೇರಿ ನಮ್ಮ ಸಂವಿಧಾನ ರಚಿಸಿದರು. ನಮ್ಮ ಸಂವಿಧಾನವು ಪ್ರಮುಖವಾಗಿ ಸಮಾನತೆ, ಭಾತೃತ್ವ, ಜಾತ್ಯಾತೀತತೆ, ನ್ಯಾಯ ತತ್ವಗಳಿಂದ ಕೂಡಿದೆ.
ಈ ಸಂವಿಧಾನ ತಿರುಚಬೇಕೆಂದು, ಸಂವಿಧಾನ ಬದಲಿಸಬೇಕೆಂದು ಆರ್‌ಎಸ್‌ಎಸ್ ಮತ್ತು ಬಿಜೆಪಿ ಪ್ರಯತ್ನ ಮಾಡುತ್ತಿವೆ. ನಮ್ಮ ಸ್ವಾಯತ್ತ ಸಂಸ್ಥೆಗಳನ್ನು ಒಂದೊಂದಾಗಿ ನಾಶಮಾಡುತ್ತಾ ಅದರ ಶಕ್ತಿಯನ್ನು ಕಡಿಮೆ ಮಾಡಲು ಬಿಜೆಪಿಯವರು ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಆರ್‌ಎಸ್‌ಎಸ್‌ನ ಕೈಗೊಂಬೆಯಾಗಿ ನಡೆದುಕೊಳ್ಳುತ್ತಿದ್ದು, ಅದರಿಂದ ನಮ್ಮ ದೇಶದ ನ್ಯಾಯಾಂಗಕ್ಕೆ, ಜಾತ್ಯಾತೀತತೆಗೆ ಪೆಟ್ಟು ಬೀಳುತ್ತಿದೆ.
ನಮ್ಮ ಪಕ್ಷ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದೆ. ಆದರೆ ಬಿಜೆಪಿಯವರು ಈಗ ಬಂದು ನಾವೇ ಈ ದೇಶವನ್ನು ಕಾಪಾಡುತ್ತಿರುವವರು, ನಾವೇ ನಿಜವಾದ ದೇಶ ಭಕ್ತರು ಉಳಿದವರೆಲ್ಲರು ದೇಶದ್ರೋಹಿಗಳು ಎನ್ನುವ ಭಾವನೆಯನ್ನು ನಮ್ಮ ದೇಶದ ಯುವಕರಲ್ಲಿ ಮೂಡಿಸುತ್ತಿದ್ದಾರೆ.
ಸ್ವಾತಂತ್ರ್ಯ ತಂದಿದ್ದೆ ಕಾಂಗ್ರೆಸ್ ಪಕ್ಷ. ಮಹಾತ್ಮ ಗಾಂಧಿಯವರು, ಪಂಡಿತ್ ಜವಾಹರ್‌ಲಾಲ್ ನೆಹರುರವರು, ವಲ್ಲಭಬಾಯಿ ಪಟೇಲ್ ರವರು, ಮೌಲಾನ ಅಬ್ದುಲ್ ಕಲಾಂ ಆಜಾದ್ ರವರು ಇವರಲ್ಲದೇ ಅನೇಕ ಹೋರಾಟಗಾರರು ಸೇರಿ ಹೋರಾಟದಿಂದ ನಮಗೆ ಸ್ವಾತಂತ್ರ್ಯವನ್ನು ತಂದಿದ್ದಾರೆ.
ನಮ್ಮ ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹ ಮಂತ್ರಿಯವರು ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಮತ್ತು ಸಂವಿಧಾನ ಉಳಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆ ಉಳಿಯುತ್ತದೆ. ಇಲ್ಲವಾದರೆ ಮುಂದಿನ ಪೀಳಿಗೆ ಎಲ್ಲದರಲ್ಲೂ ಅವಕಾಶ ವಂಚಿತರಾಗುತ್ತಾರೆ.
ಬಾಬಾ ಸಾಹೇಬರು ಸಂವಿಧಾನವನ್ನು ದೇಶಕ್ಕೆ ಒಪ್ಪಿಸುವಾಗ ಹೀಗೆ ಹೇಳಿದ್ದರು “ನಾವೆಲ್ಲರು ಸೇರಿ ಈ ಸಂವಿಧಾನವನ್ನು ಬರೆದು ನಿಮಗೆ ಕೊಡುತ್ತಿದ್ದೇವೆ, ಈ ಸಂವಿಧಾನವನ್ನು ಸರಿಯಾಗಿ ನಡೆಸಬೇಕು. ಸರ್ವರಿಗೂ ಅನುಕೂಲವಾಗಬೇಕು ಅಂದರೆ ಸಂವಿಧಾನವನ್ನು ನಡೆಸುವವರು ಒಳ್ಳೆಯವರಾಗಿರಬೇಕು ಇಲ್ಲದಿದ್ದರೆ ಆ ಸಂವಿಧಾನವೇ ಕೆಟ್ಟದಾಗುತ್ತದೆ”. 1949 ರಲ್ಲಿ ಬಾಬಾ ಸಾಹೇಬರು ಹೇಳಿದ ಮಾತು ಈ ದಿನ ಸತ್ಯವಾಗುತ್ತಿದೆ. ಈ ಸಂವಿಧಾನವನ್ನು ನಡೆಸಿಕೊಂಡು ಹೋಗುವಂತಹ ಜನ ಸರಿ ಇಲ್ಲದೆ ಇರುವುದಕ್ಕೆ ದೇಶದಲ್ಲಿ ಅಸಮಾನತೆ ಅಸಮತೋಲನೆ ಎದ್ದು ಕಾಣುತ್ತಿದೆ.
ಸ್ವಾತಂತ್ರ್ಯ ಬಂದಾಗಿನಿಂದ 2014ರ ವರೆಗೆ ಈ ದೇಶದ ಸಾಲ 55 ಲಕ್ಷ ಕೋಟಿ ಇತ್ತು, ಆದರೆ ಈಗ ಬಿಜೆಪಿ ಸರ್ಕಾರ 10 ವರ್ಷಗಳಲ್ಲಿ 150 ಲಕ್ಷ ಕೋಟಿ ಸಾಲ ಮಾಡಿದೆ.
ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಎರಡಕ್ಕೂ ಧಕ್ಕೆ ಇದೆ. ಇದರಿಂದ ನಮ್ಮ ಯುವಪೀಳಿಗೆಗೆ ಇನ್ನೂ ಹೆಚ್ಚಿನ ಅಪಾಯ ಇದೆ. ದಿನೇ ದಿನೇ ಹಣದುಬ್ಬರ, ನಿರುದ್ಯೋಗ ಸಮಸ್ಯೆ ಏರುತ್ತಿದೆ. ಈ ಅನಾಹುತವನ್ನು ತಡೆಯಬೇಕು ಎಂದರೆ ಬರುವ ಲೋಕಸಭಾ ಚುನಾವಣೆಯಲ್ಲಿ ನೀವೆಲ್ಲರು ಕಾಂಗ್ರೆಸ್‌ಗೆ ಶಕ್ತಿ ತುಂಬಬೇಕು.
ಕಾಂಗ್ರಸಿನೊಳಗೆ ಯಾರೇ ಬಂದರೂ ಸೇರಿಸಿಕೊಂಡು ಶಕ್ತಿಯನ್ನು ತುಂಬುವಂತಹ ಕೆಲಸ ಮಾಡಬೇಕು. ಹಾಗೆ ಪಕ್ಷಕ್ಕೆ ಬರುವವರು ನಿಷ್ಠಾವಂತರಾಗಿರಬೇಕು. ಇವತ್ತು ಬಂದು ನಾಳೆ ಹೋಗುವಂತೆ ಇರಬಾರದು. ನಾವು ಒಂದು ವಸ್ತುವನ್ನು ಕೊಳ್ಳಬೇಕಾದರೆ ಅನೇಕ ಪರೀಕ್ಷೆಗಳನ್ನು ಮಾಡಿ ತೆಗೆದುಕೊಳ್ಳುತ್ತೇವೆ. ಹಾಗೆ ಪಕ್ಷಕ್ಕೆ ಯಾರನ್ನಾದರೂ ತೆಗೆದುಕೊಳ್ಳಬೇಕಾದರೆ ಅವರ ಗುಣ ಏನು? ಅವರ ಹಿನ್ನೆಲೆ ಏನು? ಅವರು ಯಾವ ತತ್ವವನ್ನು ಪಾಲಿಸುತ್ತಿದ್ದವರು ಇಂದು ಯಾವ ತತ್ವ ಒಪ್ಪಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಪರಿಶೀಲನೆ ಮಾಡುವುದು ಬಹಳ ಮುಖ್ಯ.
ನಮ್ಮ ಕಾಂಗ್ರೆಸ್ ಪಕ್ಷವು ತತ್ವ ಸಿದ್ಧಾಂತದ ಆಧಾರದ ಮೇಲೆ ನಿಂತಿದೆ. ತತ್ವಕ್ಕಾಗಿಯೇ ನಮ್ಮ ಪಕ್ಷದಲ್ಲಿ ಇಂದಿರಾಗಾಂಧಿಯವರು, ರಾಜೀವ್ ಗಾಂಧಿಯವರು ತಮ್ಮ ಜೀವವನ್ನೆ ತ್ಯಾಗ ಮಾಡಿದ್ದಾರೆ. ನಮ್ಮ ಪಕ್ಷ ತತ್ವಕ್ಕೆ ಬದ್ಧವಾಗಿದೆ, ನಮಗೆ ಬಡವರ ಬಗ್ಗೆ, ರೈತರ ಬಗ್ಗೆ, ವಿಧ್ಯಾರ್ಥಿಗಳ ಬಗ್ಗೆ ಮತ್ತು ಮಹಿಳೆಯರ ಬಗ್ಗೆ ಅಪಾರ ಕಾಳಜಿ ಇರುವ ಪಕ್ಷ.
ಹೆಣ್ಣಿಗೆ ಮತದಾನದ ಹಕ್ಕನ್ನು ತಂದಿದ್ದೆ ನಮ್ಮ ಪಕ್ಷ. ಆ ಕಾಲದಲ್ಲಿ ಮುಂದುವರೆದ ದೇಶಗಳಲ್ಲೆ ಮಹಿಳೆಗೆ ಮತದಾನದ ಹಕ್ಕಿರಲಿಲ್ಲ. ಅಂತಹ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಸಂವಿಧಾನದ ಜೊತೆ ಜೊತೆಗೆ ಮಹಿಳೆಗೆ ಮತದಾನದ ಹಕ್ಕನ್ನು ನೀಡಿತು. ಇದರ ಶ್ರೇಯ ಬಾಬಾ ಸಾಹೇಬರು ಮತ್ತು ಪಂಡಿತ್ ಜವಾಹರ್‌ಲಾಲ್ ನೆಹರುರವರಿಗೆ ಸಲ್ಲುತ್ತದೆ.”