ನಾವು ಜೆಡಿಎಸ್ ನವರನ್ನು ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮಾಡಿದ್ದೇವೆ: ಡಿ.ಕೆ. ಸುರೇಶ್

ಬೆಂಗಳೂರು : “ನಾವು ಜೆಡಿಎಸ್ ನಾಯಕರನ್ನು ಪ್ರಧಾನಮಂತ್ರಿ, ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇವೆ. ಆ ಮೂಲಕ ದೇಶ ಹಾಗೂ ರಾಜ್ಯದ ಜನರ ನೆನಪಿನಲ್ಲಿ ಅವರು ಉಳಿಯುವಂತೆ ಮಾಡಿದ್ದೇವೆ” ಎಂದು ಸಂಸದ ಡಿ.ಕೆ. ಸುರೇಶ್ ತಿರುಗೇಟು ನೀಡಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಸುರೇಶ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ಸಿನಂತೆ ಬಿಜೆಪಿಯವರು ಕುತ್ತಿಗೆ ಕೊಯ್ಯುವ ಕೆಲಸ ಮಾಡಿಲ್ಲ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ ಸುರೇಶ್ ಅವರು ಉತ್ತರಿಸಿದ್ದು ಹೀಗೆ:

 

“ಜೆಡಿಎಸ್ ನವರನ್ನು ಈ ದೇಶದ ಪ್ರಧಾನಿ, ರಾಜ್ಯದ ಸಿಎಂ ಮಾಡಿದ್ದೇವೆ. ಈ ದೇಶ ಗುರುತಿಸುವಂತಹ ಕೆಲಸಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಕಾಂಗ್ರೆಸ್ ಪ್ರಧಾನಿ ಮಾಡದೇ ಹೋಗಿದ್ದರೆ ಅವರನ್ನು ಈ ದೇಶ ನೆನಪಿಸಿಕೊಳ್ಳುತ್ತಿರಲಿಲ್ಲ. ರಾಜ್ಯದ ಮೂವತ್ತು ಸಿಎಂಗಳಲ್ಲಿ ಕುಮಾರಸ್ವಾಮಿ ಅವರು ಒಬ್ಬರಾಗುತ್ತಿರಲಿಲ್ಲ” ಎಂದು ತಿರುಗೇಟು ನೀಡಿದರು.

ಆಸ್ಪತ್ರೆಯಿಂದ ಬಂದ ನಂತರ ಬಲಿಷ್ಠವಾಗಿ ಪ್ರಚಾರ ಮಾಡುತ್ತೇನೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಅವರ ಪ್ರಶ್ನೆಗಳಿಗೆ ನಾನು ಉತ್ತರ ನೀಡಲು ಹೋಗುವುದಿಲ್ಲ. ಆರೋಗ್ಯ ಸರಿ ಇಲ್ಲ ಎಂದು ಆಸ್ಪತ್ರೆ ಸೇರಿರುವ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ರಾಜಕಾರಣದಲ್ಲಿ ಎದುರಾಳಿಗಳು ಬಲಿಷ್ಟವಾಗಿದ್ದಷ್ಟು ಚೆನ್ನಾಗಿ ಕೆಲಸ ಮಾಡಲು ಸಾಧ್ಯ. ಅದಕ್ಕೆ ಅವರು ಮೊದಲು ಗುಣಮುಖರಾಗಲಿ” ಎಂದು ಹೇಳಿದರು.

ದೇವೇಗೌಡರು ಈ ಹಿಂದೆ ಆಡಿದ್ದ ಮಾತುಗಳನ್ನು ಜನರಿಗೆ ತೋರಿಸಿ:

ಬಿಜೆಪಿ- ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಂತೆ ಇದೆಯಲ್ಲ ಎಂದು ಕೇಳಿದಾಗ, “ಜಾತ್ಯಾತೀತ ತತ್ವಗಳ ಬಗ್ಗೆ ನಾನು ಮಾತನಾಡಿದರೆ ಪ್ರಚಾರ ಆಗುವುದಿಲ್ಲ. ನಿಮಗೆ ಬೇಕಾದ ಹೇಳಿಕೆಗಳನ್ನು ನಾನು ಕೊಡಲು ಆಗುವುದಿಲ್ಲ. ಮಾಜಿ ಪ್ರಧಾನಿಗಳು ಹಿಂದೆ ಹೇಳಿದ್ದ, ʼಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆʼ, ʼಮೋದಿ ಗೆದ್ದರೆ ದೇಶ ಬಿಟ್ಟು ಹೋಗುತ್ತೇನೆʼ, ʼರಾಜ್ಯಕ್ಕೆ ರಾಷ್ಟ್ರೀಯ ಪಕ್ಷಗಳ ಅವಶ್ಯಕತೆಯಿಲ್ಲ, ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆʼ – ಎಂಬೆಲ್ಲ ಹೇಳಿಕೆಗಳನ್ನು ಜನರಿಗೆ  ತೋರಿಸಿ. ನಾನು ಮಾಡಿರುವ ಕೆಲಸಗಳಿಗೆ ನನ್ನ ಕ್ಷೇತ್ರದ ಜನತೆಯ ಬಳಿ ಕೂಲಿ ಕೇಳುತ್ತಿದ್ದೇನೆ. ಮಾಧ್ಯಮದವರು ನನಗೆ ಕೂಲಿ ಕೊಡಿಸುತ್ತೀರಾ ಎನ್ನುವ ಭಾವನೆ ಇದೆ” ಎಂದು ಹೇಳಿದರು.

 

ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆಗೆ ಇಳಿಯುತ್ತಾರೆ ಎಂದಾಗ “ನಮ್ಮ ಅಭ್ಯರ್ಥಿ ಬಲಿಷ್ಠವಾಗಿದ್ದಾರೆ, ಗೆಲ್ಲುತ್ತಾರೆ. ನಾವು ಕೊಟ್ಟಿರುವ ಐದು ಗ್ಯಾರಂಟಿಗಳು, ಮುಂದಿನ ಐದು ವರ್ಷದಲ್ಲಿ ಈ ರಾಜ್ಯದ ಅಭಿವೃದ್ದಿಗೆ ನಾವು ಕೈಗೊಂಡಿರುವ ಕೆಲಸಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ” ಎಂದರು.

ಹನುಮಾನ್ ಚಾಲೀಸಾ ವಿವಾದದ ಬಗ್ಗೆ ಕೇಳಿದಾಗ “ಮಾಧ್ಯಮದವರು ಪ್ರಚಾರ ನೀಡುತ್ತಾರೆ ಎಂದು ಭಾವಿಸಿ ಬಿಜೆಪಿಯವರು ಹೀಗೆ ಮಾಡುತ್ತಿದ್ದಾರೆ. ಸಣ್ಣ ವಿಚಾರಗಳನ್ನು ಅನವಶ್ಯಕವಾಗಿ ದೊಡ್ಡದು ಮಾಡುವ ಪ್ರವೃತ್ತಿಯನ್ನು ಬಿಜೆಪಿಗೆ ಯಾರೂ ಹೇಳಿಕೊಡಬೇಕಾಗಿಲ್ಲ” ಎಂದು ವ್ಯಂಗ್ಯವಾಡಿದರು.

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್- ಬಿಜೆಪಿ ನಾಯಕರು ಕಾಂಗ್ರೆಸ್ ಸೇರುವ ಸಾಧ್ಯತೆ ಬಗ್ಗೆ ಪ್ರಶ್ನಿಸಿದಾಗ “ನಾನು ಕ್ಷೇತ್ರದ ಕೆಲಸದಲ್ಲಿ ನಿರತನಾಗಿದ್ದು, ಈ ಬಗ್ಗೆ ನಮ್ಮ ಪಕ್ಷದ ವರಿಷ್ಠರನ್ನು ಕೇಳಬೇಕು. ಈಗ ನಾನು ಏನನ್ನೂ ಹೇಳುವುದಿಲ್ಲ. ನಾನು ಗ್ರೌಂಡಿನಲ್ಲಿ ಇದ್ದೇನೆ, ನೀವು ಮೇಲೆ ಇದ್ದೀರಿ. ಈ ಬಗ್ಗೆ ನನಗೆ ಗೊತ್ತಿಲ್ಲ. ಎಲ್ಲವೂ ಪಕ್ಷದ ಹೈಕಮಾಂಡ್ ನಿರ್ಧಾರ” ಎಂದರು.

ಕೇಂದ್ರ ಸರ್ಕಾರವನ್ನು ಪ್ರಶ್ನಿಸಲಿ:

 

ತಮಿಳುನಾಡಿನ ಕೃಷ್ಣಗಿರಿ ಸೇರಿದಂತೆ ಇತರೆಡೆಯಿಂದ ಬಂದು ಬಾಂಬ್ ಇಡುತ್ತಾರೆ ಎನ್ನುವ ಶೋಭಾ ಕರಂದ್ಲಾಜೆ ಅವರ ಹೇಳಿಕೆ ಬಗ್ಗೆ ಕೇಳಿದಾಗ “ಉನ್ನತ ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಬಳಿ ಇವೆ. ಭಯೋತ್ಪಾದಕರು ಎಲ್ಲೆಲ್ಲಿ ಇದ್ದಾರೆ ಎನ್ನುವುದು ಅವರಿಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುವುದು ಬಿಟ್ಟು ಕೇಂದ್ರ ಸರ್ಕಾರದ ಬಳಿ ಪ್ರಶ್ನೆ ಮಾಡಲಿ. ಕೃಷ್ಣಗಿರಿಯಿಂದ ಬರುತ್ತಾರೆ ಎನ್ನುವುದು ಅವರಿಗೆ ತಿಳಿದಿದೆ ಎಂದರೆ ಬೇಕಂತಲೇ ಎಲ್ಲವನ್ನು ಮುಚ್ಚಿಡುತ್ತಿದ್ದಾರೆ ಎಂದರ್ಥವಲ್ಲವೇ? ಈ ವಿಚಾರದಲ್ಲೂ ರಾಜಕಾರಣಕ್ಕೆ ಮುಂದಾಗಿದ್ದಾರೆ” ಎಂದು ಹೇಳಿದರು

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top