ಯಲಹಂಕ, ಮಾ, 14; ಸಾಂಸ್ಥಿಕ ಹೊಣೆಗಾರಿಕೆಯ ಭಾಗವಾಗಿ “ಐಟಿಸಿ ಮಿಷನ್ – ಬಂಗಾರದ ಭವಿಷ್ಯದೆಡೆಗೆ” ಕಾರ್ಯಕ್ರಮದಡಿ ಬಯೋಮ್ ಎನ್ವಿರಾನ್ಮೆಂಟಲ್ ಟ್ರಸ್ಟ್ ಮತ್ತು ಮೈರಾಡ ಸಂಸ್ಥೆಯ ಜಂಟಿ ಸಹಭಾಗಿತ್ವದಡಿ ಬೆಂಗಳೂರು ಉತ್ತರದ ತರಬನಹಳ್ಳಿಯಲ್ಲಿ “ನಗರ ನೀರು ನಿರ್ವಹಣೆಯಲ್ಲಿ ಪಾಲುದಾರರ ಪಾತ್ರ ಕುರಿತ ಕಾರ್ಯಾಗಾರ” ಆಯೋಜಿಸಲಾಗಿತ್ತು. ಬೆಂಗಳೂರು ನಗರ ಜಿಲ್ಲೆಯ ಉತ್ತರ ಭಾಗ ಮತ್ತು ದೇವನಹಳ್ಳಿ ತಾಲ್ಲೂಕುಗಳ ವಿವಿಧ ನಗರ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ, ನೀರು ನಿರ್ವಹಣೆ ಕುರಿತ ಕಾರ್ಯಗಾರವನ್ನು ಐಟಿಸಿ ಲಿಮಿಟೆಡ್’ನ ಭದ್ರತಾ ವ್ಯವಸ್ಥಾಪಕ ಎನ್.ಎಂ.ವಿಜಯ್ ಸಿಂಗ್ ಉದ್ಘಾಟಿಸಿದರು.

ಬಯೋಮ್ ಎನ್ವಿರಾನ್ಮೆಂಟ್ ಸಂಸ್ಥೆ ಮುಖ್ಯಸ್ಥ ಅವಿನಾಶ್ ಮಾತನಾಡಿ, ಪಂಚಾಯತಿಗಳಲ್ಲಿ ಅಂತರ್ಜಲ ರಕ್ಷಣೆಗೆ ಒತ್ತು ಕೊಡಬೇಕು. ಜಲ ನಿರ್ವಹಣೆ ಹಿಂದೆಂದಿಗಿಂತ ಅತಿ ಮುಖ್ಯವಾಗಿದೆ. ಕೆರೆ, ಕುಂಟೆ ಮತ್ತು ಕಲ್ಯಾಣಿಗಳ ಪುನಶ್ಚೇತನಕ್ಕೆ ಒತ್ತು ನೀಡಬೇಕು. ನಮ್ಮ ನೆಲ ಮತ್ತು ಜಲ ಮೂಲಗಳನ್ನು ಸಂರಕ್ಷಿಸುವುದು ಅತ್ಯಂತ ಅಗತ್ಯ ಎಂದು ಹೇಳಿದರು. ಐಟಿಸಿಯ ಪ್ರಾದೇಶಿಕ ವ್ಯವಸ್ಥಾಪಕ ಎಲ್. ಮಂಜುನಾಥ್ ಮಾತನಾಡಿ, ಬೆಂಗಳೂರು ಉತ್ತರ ಮತ್ತು ದೇವನಹಳ್ಳಿ ತಾಲ್ಲೂಕುಗಳಲ್ಲಿ ಅಂತರ್ಜಲ ಪುನಶ್ಚೇತನಕ್ಕೆ ಒತ್ತು ನೀಡಲಾಗಿದೆ. ಎರಡು ದಶಕಗಳಿಂದ ಅಂತರ್ಜಲ ಮಟ್ಟ ಹೆಚ್ಚಿಸಲು ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
