ಹೊಸಪೇಟೆ:
ಹಿಜಾಬ್ ಗೊಂದಲ ನಗರದ ಕಾಲೇಜ್‌ಗಳಲ್ಲಿ ಗುರುವಾರ ಕೂಡ ಮುಂದುವರೆದಿದ್ದು, ಹಿಜಾಬ್ ತೆಗೆಯದಿರಲು ಪಟ್ಟು ಬಿಡದ ವಿದ್ಯಾರ್ಥಿನಿಯರು ಮರಳಿ ಮನೆಗೆ ತೆರಳಿದ ಪ್ರಸಂಗವೂ ನಡೆಯಿತು.
ಇಲ್ಲಿನ ಟಿಎಂಎಇಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುರುವಾರ ಬೆಳಗ್ಗೆ ಕಾಲೇಜು ಆರಂಭವಾಗುತ್ತಿದ್ದಂತೆ ಹಿಜಾಬ್ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ತರಗತಿಯೊಳಗೆ ಹಿಜಾಬ್ ತೆಗೆದು ತೆರಳಲು ಕಾಲೇಜಿನ ಸಿಬ್ಬಂದಿ ಸೂಚಿಸಿದರು. ಇದಕ್ಕೆ ಕೆಲ ವಿದ್ಯಾರ್ಥಿನಿಯರು ಸಮ್ಮತಿಸಿ ಹಿಜಾಬ್ ತೆಗೆದು ತರಗತಿ ಪ್ರವೇಶಿಸಿದರು. ಆದರೆ, ೧೦ ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ತೆಗೆಯಲು ನಿರಾಕರಿಸಿದರು. ಹಿಜಾಬ್‌ನೊಂದಿಗೆ ತರಗತಿ ಒಳಗೆ ಹೋಗಲು ಪಟ್ಟು ಹಿಡಿದರು. ಕೊನೆಗೆ ಪೊಲೀಸರು ಆಗಮಿಸಿ, ಸರ್ಕಾರದ ಆದೇಶದಂತೆ ನಡೆದುಕೊಳ್ಳಬೇಕು ಎಂದು ಸೂಚಿಸಿದಾಗ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯದೇ ಕಾಲೇಜಿನಿಂದ ಹೊರನಡೆದರು. ಗ್ರಾಮೀಣ ಪೊಲೀಸ್ ಠಾಣೆಯ ಪಿಐ ಶ್ರೀನಿವಾಸ್ ಮೇಟಿ ಸ್ಥಳಕ್ಕೆ ಭೇಟಿ ನೀಡಿದರು.
ಇನ್ನೂ ಇಲ್ಲಿನ ಬಸವೇಶ್ವರ ಬಡಾವಣೆಯ ಕೆಎಸ್‌ಪಿಎಲ್ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯರು ಬುಧವಾರ ನಮ್ಮ ಹಕ್ಕು ನಾವು ಬಿಟ್ಟು ಕೊಡುವುದಿಲ್ಲ ಎಂದು ಮನೆಗೆ ತೆರಳಿದ್ದರು. ಗುರುವಾರವೂ ಮತ್ತದೇ ರೀತಿಯಲ್ಲಿ ನಡೆದುಕೊಂಡ ೧೪ ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿರಿಸಲು ವಿರೋಧ ವ್ಯಕ್ತಪಡಿಸಿದರು. ಪೊಲೀಸರು ಮನವೊಲಿಕೆಗೆ ಯತ್ನಿಸಿದರೂ ವಿದ್ಯಾರ್ಥಿನಿಯರು ಕೆಲ ಹೊತ್ತು ಕಾಲೇಜಿನ ಎದುರೇ ಇದ್ದು ಹಿಜಾಬ್ ತೆಗೆಯುವುದಿಲ್ಲ, ಬೇಕಿದ್ದರೆ ಮನೆಗೆ ಹೋಗುತ್ತೇವೆ ಎಂದು ತಮ್ಮ ಮನೆ ಕಡೆ ಹೊರಟರು. ಚಿತ್ತವಾಡ್ಗಿ ಪೊಲೀಸ್ ಠಾಣೆಯ ಪಿಐ ಜಯಪ್ರಕಾಶ್ ಸ್ಥಳಕ್ಕಾಗಮಿಸಿದರು.